ರಾಜ್ಯಪಾಲ ಹುದ್ದೆಗೆ ನಿವೃತ್ತ ಜಡ್ಜ್‌ ಲಂಚ: ಹೈಕೋರ್ಟ್‌ ಬೇಸರ

By Kannadaprabha NewsFirst Published Apr 30, 2021, 10:30 AM IST
Highlights

ವಂಚಕ ಯುವರಾಜ್‌ ಸ್ವಾಮಿಗೆ ಜಾಮೀನು ನಿರಾಕರಣೆ| ಆರೋಪಿಯ ವಿರುದ್ಧ ಉದ್ಯಮಿಗಳು, ರಾಜಕಾರಣಿಗಳು ನ್ಯಾಯಮೂರ್ತಿಗಳು ಸೇರಿ ಅನೇಕರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವ ಆರೋಪ| ನ್ಯಾಯಮೂರ್ತಿಗಳ ಘನತೆ ಜತೆಗೆ ರಾಜ್ಯಪಾಲ ಹುದ್ದೆಯ ವರ್ಚಸ್ಸನ್ನೂ ಕುಗ್ಗಿಸಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ| 

ಬೆಂಗಳೂರು(ಏ.30): ರಾಜ್ಯಪಾಲ ಹುದ್ದೆ ಪಡೆಯಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಂಚಕ ಯುವರಾಜ್‌ ಸ್ವಾಮಿಗೆ ಲಂಚ ನೀಡಿದ್ದಾರೆಂಬ ವಿಷಯವು ನಿಜಕ್ಕೂ ದುರದೃಷ್ಟಕರ ಎಂದು ಹೈಕೋರ್ಟ್‌ ತೀವ್ರ ಬೇಸರ ವ್ಯಕ್ತಪಡಿಸಿದೆ.

ಉದ್ಯಮಿ ಸುರೇಂದ್ರ ರೆಡ್ಡಿ ಎಂಬುವರಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವ ಆಮಿಷ ತೋರಿಸಿ ಒಂದು ಕೋಟಿ ರು. ಪಡೆದು ವಂಚನೆ ಎಸಗಿದ ಪ್ರಕರಣ ಸೇರಿ ಒಟ್ಟು ಆರು ವಂಚನೆ ಪ್ರಕರಣಗಳಲ್ಲಿ ಆರೋಪಿ ಯುವರಾಜ್‌ ಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ವೇಳೆ ನ್ಯಾ.ಕೆ. ನಟರಾಜನ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್‌ ಅಸಮಾಧಾನ

ಆರೋಪಿಯ ವಿರುದ್ಧ ಉದ್ಯಮಿಗಳು, ರಾಜಕಾರಣಿಗಳು ನ್ಯಾಯಮೂರ್ತಿಗಳು ಸೇರಿ ಅನೇಕರಿಂದ ಕೋಟ್ಯಂತರ ಹಣ ಪಡೆದು ವಂಚಿಸಿರುವ ಆರೋಪವಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ರಾಜ್ಯಪಾಲ ಹುದ್ದೆಯ ಆಸೆ ತೋರಿಸಿ 8.5 ಕೋಟಿ ರು. ಲಂಚ ಪಡೆದಿದ್ದಾನೆ. ನಿವೃತ್ತ ನ್ಯಾಯಮೂರ್ತಿಯೊಬ್ಬರು ಲಂಚ ನೀಡಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಇದು ನ್ಯಾಯಮೂರ್ತಿಗಳ ಘನತೆ ಜತೆಗೆ ರಾಜ್ಯಪಾಲ ಹುದ್ದೆಯ ವರ್ಚಸ್ಸನ್ನೂ ಕುಗ್ಗಿಸಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅಲ್ಲದೆ, ನಿವೃತ್ತ ನ್ಯಾಯಮೂರ್ತಿಗಳಿಗೆ ವಂಚಿಸಿದ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಯುವರಾಜ್‌ ಸ್ವಾಮಿಗೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಜಾಮೀನು ನೀಡಿ ಆದೇಶಿಸಿರುವುದು ಸರಿಯಾದ ಕ್ರಮವಲ್ಲ. ಮೇಲಾಗಿ ಈ ಜಾಮೀನು ಆದೇಶ ರದ್ದುಪಡಿಸಲು ಕೋರಿ ಸರ್ಕಾರವು ಯಾವುದೇ ಅರ್ಜಿ ಸಲ್ಲಿಸದಿರುವುದು ಬೇಸರ ಮೂಡಿಸಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
 

click me!