ಕರ್ನಾಟಕದಲ್ಲಿ ಕೊರೋನಾರ್ಭಟ: ರೆಮ್ಡೆಸಿವಿರ್‌, ಆಕ್ಸಿಜನ್‌ ನೀಡಿ, ಕೇಂದ್ರಕ್ಕೆ ಹೈಕೋರ್ಟ್‌

By Kannadaprabha News  |  First Published Apr 30, 2021, 8:42 AM IST

ರಾಜ್ಯ ಸರ್ಕಾರ ಸಲ್ಲಿಸುವ ಮನವಿ ಶೀಘ್ರ ಪರಿಗಣಿಸಿ| 802 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಮಿತಿ ಹೆಚ್ಚಿಸಲು ಸೂಚನೆ| ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲೇ ಆಕ್ಸಿಜನ್‌ ಉತ್ಪಾದನೆ: ರಾಜ್ಯದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದ| 


ಬೆಂಗಳೂರು(ಏ.30): ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾದ ರೆಮ್‌ಡೆಸಿವಿರ್‌ ಪೂರೈಸಲು ಹಾಗೂ ಆಕ್ಸಿಜನ್‌ ಬಳಕೆ ಮಿತಿ ಹೆಚ್ಚಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸುವ ಮನವಿಯನ್ನು ಶೀಘ್ರ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು. 

Tap to resize

Latest Videos

ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೊಮ್ಸ್‌ (ಫನಾ) ಅಧ್ಯಕ್ಷರ ವಾದ ಆಲಿಸಿದ ನ್ಯಾಯಪೀಠ, ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ನಿತ್ಯ ಆಕ್ಸಿಜನ್‌ ಬಳಕೆಗೆ ನಿಗದಿಪಡಿಸಿರುವ 802 ಮೆಟ್ರಿಕ್‌ ಟನ್‌ ಮಿತಿ ಹೆಚ್ಚಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೆಮ್‌ಡೆಸಿವಿರ್‌ ಪೂರೈಸಬೇಕಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಖಾಸಗಿ ಆಸ್ಪತ್ರೆಗಳು ಮತ್ತು ಅಲ್ಲಿ ಸರ್ಕಾರ ಕಾಯ್ದಿರಿಸಿದ ಹಾಸಿಗೆಗಳ ಆಧಾರದ ಮೇಲೆ ಎಷ್ಟುರೆಮ್‌ಡೆಸಿವರ್‌ ಅಗತ್ಯವಿದೆ ಎನ್ನುವ ಬಗ್ಗೆ ಅಂದಾಜು ಮಾಡಿ, ಅದರ ಪೂರೈಕೆ ಹೆಚ್ಚಿಸಲು ಮತ್ತು ಆಕ್ಸಿಜನ್‌ ಬಳಕೆ ಮಿತಿ ಹೆಚ್ಚಿಸಲು ಕೋರಿ ಎರಡು ದಿನಗಳಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಬೇಕು. ಆ ಬಗ್ಗೆ ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಮೇ 3ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.

ಕೊರೋನಾ ರಣಕೇಕೆ: ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಬೆಡ್‌ಗಳ ಮಾಹಿತಿ..!

ಇದಕ್ಕೂ ಮುನ್ನ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದಿಸಿ, ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲೇ ಆಕ್ಸಿಜನ್‌ ಉತ್ಪಾದಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ನಿತ್ಯ 802 ಮೆಟ್ರಿಕ್‌ ಟನ್‌ ಮಾತ್ರ ಆಕ್ಸಿಜನ್‌ ಬಳಸಲು ಮಿತಿ ಹೇರಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಆಗುತ್ತಿಲ್ಲ. ಸದ್ಯ ರಾಜ್ಯದಲ್ಲಿ 1,471 ಮೆಟ್ರಿಕ್‌ ಟನ್‌ ಆಕ್ಸಿಜನ್‌ ನಿತ್ಯ ಅಗತ್ಯವಿದೆ. ಹಾಗೆಯೇ, ಏ.21ರಿಂದ 30ರವರೆಗೆ 1.22 ಲಕ್ಷ ರೆಮ್‌ಡೆಸಿವರ್‌ ಕರ್ನಾಟಕದ ಕೋಟಾ ಆಗಿದೆ ಎಂದು ತಿಳಿಸಿದರು.

ವಿಚಾರಣೆಗೆ ಹಾಜರಿದ್ದ ಫನಾ ಅಧ್ಯಕ್ಷ ಡಾ.ಎಚ್‌.ಎಂ. ಪ್ರಸನ್ನ, ಬೆಂಗಳೂರು ಒಂದರಲ್ಲೇ ಪ್ರತಿ ದಿನ 10 ಸಾವಿರ ರೆಮ್‌ಡೆಸಿವರ್‌ ಅಗ್ಯವಿದೆ. ರೆಮ್‌ಡೆಸಿವರ್‌ ಸರ್ಕಾರದಿಂದಲೇ ಪೂರೈಕೆಯಾಗಬೇಕು ಎಂದು ತಿಳಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!