
ವಿಶೇಷ ವರದಿ
ಬೆಂಗಳೂರು (ಮೇ.15): ‘ರಸ್ತೆ ಅಗಲೀಕರಣಕ್ಕೆ ಉಚಿತವಾಗಿ ನಿಮ್ಮ ಜಾಗ ನೀಡಿದರಷ್ಟೇ ಬಡಾವಣೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲಾಗುವುದು’ ಎಂದು ಬಡಾವಣೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೋರಿದ ವ್ಯಕ್ತಿಗೆ ಕಾನೂನು ಬಾಹಿರ ಷರತ್ತು ವಿಧಿಸಿದ ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್, ಪ್ರಾಧಿಕಾರದ ನಡೆ ವಸೂಲಿಗಾಗಿ ಅಧಿಕಾರ ಬಳಕೆ ಮಾಡಿಕೊಂಡಂತಿದೆ ಎಂದು ಖಾರವಾಗಿ ನುಡಿದೆ.
ಉಚಿತವಾಗಿ ಜಾಗ ನೀಡುವಂತೆ ಭೂ ಮಾಲಿಕನಿಗೆ ಒತ್ತಾಯಿಸದೆ ಬಡಾವಣೆ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ನೀಡಬೇಕು ಎಂದು ತಾಕೀತು ಮಾಡಿರುವ ಹೈಕೋರ್ಟ್, ಕಾನೂನು ಪ್ರಕಾರ ಜಾಗವನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ಪಾವತಿಸಲು ಪ್ರಾಧಿಕಾರಕ್ಕೆ ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಬೆಂಗಳೂರಿನ ನ್ಯೂ ಟಿಂಬರ್ ಯಾರ್ಡ್ ಬಡಾವಣೆ ನಿವಾಸಿ ವಿನೋದ್ ದಮ್ಜಿ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರ ಪೀಠ ಈ ಆದೇಶ ಮಾಡಿದೆ.
ಜಾಗ ಉಚಿತ; ನಕ್ಷೆ ಖಚಿತ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದ ಸರ್ವೆ ನಂ-133 ಮತ್ತು 134ರಲ್ಲಿನ ಒಟ್ಟು 11 ಎಕರೆ 37 ಗುಂಟೆ ಜಮೀನನ್ನು ಕೃಷಿಯೇತರ ಜಮೀನು ಬಳಕೆಗೆ ಭೂ ಪರಿವರ್ತನೆ ಮಾಡಲು ಅನುಮತಿ ನೀಡಿ ಜಿಲ್ಲಾಧಿಕಾರಿ 2005ರ ಏ.28ರಂದು ಆದೇಶಿಸಿದ್ದರು. ಸರ್ವೆ ನಂ.133ರಲ್ಲಿನ ಎಂಟೂವರೆ ಗುಂಟೆ ಜಮೀನನ್ನು ಅರ್ಜಿದಾರರು 2013ರ ಜು.30ರಂದು ಖರೀದಿಸಿದ್ದರು. ಆ ಜಾಗದಲ್ಲಿ ಬಡಾವಣೆ ನಿರ್ಮಿಸಲು ನಕ್ಷೆ ಮಂಜೂರಾತಿ ಕೋರಿ ಹೊಸಕೋಟೆ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಮೋದಿ ಮುಖ ನೋಡಿ ಜನಕ್ಕೆ ಬೇಸರ: ಮಲ್ಲಿಕಾರ್ಜುನ ಖರ್ಗೆ
ಪ್ರಾಧಿಕಾರವು 2022ರ ಜು.27ರಂದು ಅರ್ಜಿದಾರರಿಗೆ ಒಂದು ಪತ್ರ/ಹಿಂಬರಹ ನೀಡಿ, ‘ನಿಮ್ಮ ಜಾಗದ ಪೈಕಿ ಶೇ.80ರಷ್ಟನ್ನು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ (35ರಿಂದ 45 ಮೀಟರ್‌ಗೆ) ಗುರುತಿಸಲಾಗಿದೆ. ಆ ಜಾಗವನ್ನು ಉಚಿತವಾಗಿ ಪ್ರಾಧಿಕಾರಕ್ಕೆ ಒಪ್ಪಿಸಿದರೆ, ನಕ್ಷೆ ಮಂಜೂರಾತಿ ನೀಡಲಾಗುವುದು’ ಎಂದು ತಿಳಿಸಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರ ಪರ ವಕೀಲರು, ಅರ್ಜಿದಾರರು ತಮ್ಮ ಸ್ವಂತ ಜಾಗದ ಬಳಕೆಗಾಗಿ ಅನುಮೋದನೆ (ನಕ್ಷೆ ಮಂಜೂರಾತಿ) ಕೋರಿದ್ದಾರೆ. ಪ್ರಾಧಿಕಾರ ಕಾನೂನು ಬಾಹಿರವಾದ ಷರತ್ತು ವಿಧಿಸಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಪ್ರಾಧಿಕಾರದ ಪರ ವಕೀಲರು, ಕರ್ನಾಟಕ ಪಟ್ಟಣ ಮತ್ತು ಗ್ರಾಮೀಣಾ ಯೋಜನಾ ಕಾಯ್ದೆ(ಕೆಸಿಟಿಪಿ)-1961ರ ಸೆಕ್ಷನ್ 17(2-ಎ) ಪ್ರಕಾರ ಬಡಾವಣೆ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ನೀಡಲು ಯೋಜನಾ ಪ್ರಾಧಿಕಾರವು ‘ರಸ್ತೆ, ಪಾರ್ಕ್, ಮೈದಾನ ಸೇರಿದಂತೆ ನಾಗರಿಕ ಸೌಲಭ್ಯಗಳಿಗಾಗಿ ಜಾಗ ಒಪ್ಪಿಸುವಂತೆ’ ಷರತ್ತು ವಿಧಿಸಲು ಅವಕಾಶವಿದೆ. ಅದರಂತೆ ಪ್ರಾಧಿಕಾರದ ಬೇಡಿಕೆ ಸೂಕ್ತವಾಗಿದೆ ಎಂದು ಸಮರ್ಥಿಸಿಕೊಂಡರು.
ಸಿದ್ದು VS ಡಿಕೆಶಿ: ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ
ವಸೂಲಿ ಪ್ರಯತ್ನ, ನ್ಯಾಯಪೀಠ ಕಿಡಿ: ಪ್ರಾಧಿಕಾರದ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ನಕ್ಷೆ ಮಂಜೂರಾತಿ ನೀಡಲು ತಾನು ಹೊಂದಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅರ್ಜಿದಾರರನ್ನು ಸುಲಿಗೆ ಮಾಡಲು ಪ್ರಯತ್ನಿಸಿದ ಮಾದರಿಯಲ್ಲಿ ಪ್ರಾಧಿಕಾರದ ನಡೆ ಇದೆ. ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸಲು ಪ್ರಾಧಿಕಾರ ಬಯಸಿದರೆ, ಆ ಜಾಗವನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಬೇಕು. ರಸ್ತೆ ನಿರ್ಮಾಣಕ್ಕೆಂದು ಜಾಗ ಗುರುತಿಸಿದ ಮಾತ್ರಕ್ಕೆ, ಆ ಜಾಗವನ್ನು ಉಚಿತವಾಗಿ ನೀಡುವಂತೆ ಮಾಲಿಕನಿಗೆ ಪ್ರಾಧಿಕಾರವು ಡಿಮ್ಯಾಂಡ್ ಮಾಡಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಕೆಸಿಟಿಪಿ ಕಾಯ್ದೆಯ ಸೆಕ್ಷನ್ 17(2-ಬಿ) ಅನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. 45 ಮೀಟರ್ ಹೆದ್ದಾರಿ ವಿಸ್ತರಣೆ ಪ್ರಸ್ತಾವನೆಗೂ ಅರ್ಜಿದಾರರ ಬಡಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿ ಪ್ರಾಧಿಕಾರದ ಹಿಂಬರಹವನ್ನು ರದ್ದುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ