ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ಗಂಗಾಧರ ಅಜ್ಜಯ್ಯನವರ ಪೀಠ ಹಾಗೂ ಡಾ. ಶಿವಯೋಗೀಶ್ವರ ಶ್ರೀಗಳ ಮೇಲೆ ನಾನಿಟ್ಟಿರುವ ನಂಬಿಕೆ ಹಾಗೂ ಅವರ ನಿರಂತರ ಆಶೀರ್ವಾದವೇ ನಾನು ಈ ಮಟ್ಟಿಗೆ ಬೆಳೆಯಲು, ಗಳಿಸಲು ಹಾಗೂ ಸಾಧನೆ ಮಾಡಲು ಪ್ರಮುಖ ಕಾರಣ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ತಿಪಟೂರು (ಮೇ.15) : ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ಗಂಗಾಧರ ಅಜ್ಜಯ್ಯನವರ ಪೀಠ ಹಾಗೂ ಡಾ. ಶಿವಯೋಗೀಶ್ವರ ಶ್ರೀಗಳ ಮೇಲೆ ನಾನಿಟ್ಟಿರುವ ನಂಬಿಕೆ ಹಾಗೂ ಅವರ ನಿರಂತರ ಆಶೀರ್ವಾದವೇ ನಾನು ಈ ಮಟ್ಟಿಗೆ ಬೆಳೆಯಲು, ಗಳಿಸಲು ಹಾಗೂ ಸಾಧನೆ ಮಾಡಲು ಪ್ರಮುಖ ಕಾರಣ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ತಮ್ಮ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳ ಭರ್ಜರಿ ಜಯ ಸಿಕ್ಕಿದ ಮರುದಿನವಾದ ಭಾನುವಾರ ಡಿಕೆಶಿಯವರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಕುಟುಂಬ ಸಮೇತ ಬೇಟಿ ನೀಡಿ ಕಾಡಸಿದ್ದೇಶ್ವರ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ಮಠದ ಪೀಠಾಧ್ಯಕ್ಷರಾದ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿಯವರು ಹಾಗೂ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿವರ ಆಶೀರ್ವಾದ ಪಡೆದರು.
ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ: ಸಿಎಂ ಆಗ್ತೀನಿ ಎಂಬ ನಂಬಿಕೆ ನನಗಿದೆ ಎಂದ ಶಿವಕುಮಾರ್
ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾನು ಕಳೆದ 18-19 ವರ್ಷಗಳಿಂದ ಇಲ್ಲಿನ ಅಜ್ಜಯ್ಯನವರ ಪೀಠಕ್ಕೆ ಬರುತ್ತಿದ್ದು ಅಂದಿನಿಂದಲೂ ಬಲವಾಗಿ ನಂಬಿ ನಡೆದುಕೊಳ್ಳುತ್ತಿದ್ದೇನೆ. ಆ ನಂಬಿಕೆಯಿಂದ ನನಗೆ ಅಜ್ಜಯ್ಯನವರು ನಾನು ಕೇಳಿದ್ದನ್ನೆಲ್ಲ ನೀಡಿ ಆಶೀರ್ವದಿಸಿದ್ದಾರೆ. ನನ್ನ ಸುಖ ಹಾಗೂ ಕಷ್ಟದ ದಿನಗಳಲ್ಲೂ ಪೀಠ ಹಾಗೂ ಶ್ರೀಗಳು ನನ್ನ ಜೊತೆ ನಿಂತಿದ್ದಾರೆ. ನನ್ನ ಕಷ್ಟದ ದಿನಗಳಾದ ಐಟಿ-ಇಡಿ ದಾಳಿಗಳು ನಂತರದ ಕೇಸು, ಜೈಲಿಗೆ ಹೋದ ದಿನಗಳೂ ಸಹ ನನ್ನ ಜೊತೆ ನಿಂತು ಏನು ಬೇಕು ಅದೆಲ್ಲಾ ಮಾಡುವ ಮೂಲಕ ಸಾಂತ್ವನ, ಧೈರ್ಯ ಹೇಳಿದ್ದಲ್ಲದೆ ಅಗತ್ಯ ಸಲಹೆ ಸಹ ನೀಡಿ ಸಂತೈಸಿದ್ದಾರೆ. ನಾನೂ ಸಹ ಅವರ ಸಲಹೆಗಳನ್ನು ಬಲವಾಗಿ ನಂಬಿದ್ದು ಇದರಿಂದ ನನ್ನ ಕುಟುಂಬದ ಏಳಿಗೆ, ರಾಜಕೀಯದ ಸಾಧನೆಗೆ ಶಕ್ತಿ ಸಿಕ್ಕಿದೆ. ನಾನು ಅಧ್ಯಕ್ಷ ಪಟ್ಟಒಪ್ಪಿಕೊಳ್ಳುವಾಗಲೂ ಶ್ರೀಗಳ ಸಲಹೆ, ಆಶೀರ್ವಾದ ಪಡೆದೆ ಒಪ್ಪಿಕೊಂಡು ಅವರ ಸಲಹೆಯಂತೆ ಈ ಚುನಾವಣೆಯಲ್ಲಿ ಪಕ್ಷದ ಎಲ್ಲ ನಾಯಕರ, ಮುಖಂಡರ ಒಗ್ಗಟ್ಟು ಹಾಗೂ ಮತದಾರ ಪ್ರಭು ನೀಡಿದ ಶಕ್ತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ತಂದುಕೊಟ್ಟಿದ್ದೇನೆ. ನನಗೆ ಪಕ್ಷದಲ್ಲಿ ಕೆಲಬಾರಿ ಸೂಕ್ತ ಸ್ಥಾನಮಾನಗಳು ಸಿಗುವುದು ತಡವಾದಾಗಲೂ ಪಕ್ಷಕ್ಕೆ ಸಹಕಾರ ನೀಡಿದ್ದೇನೆ. ಸಣ್ಣಪುಟ್ಟಭಿನ್ನಾಭಿಪ್ರಾಯಗಳು ಬಂದ ಸಂದರ್ಭದಲ್ಲಿ ನಾನೆ ತಲೆ ಬಾಗಿದ್ದೇನೆ. ಎಲ್ಲೂ ಸಹ ಪಕ್ಷಕ್ಕೆ ಕಿಂಚಿತ್ತೂ ಹಾನಿಯಾಗದಂತೆ ನಡೆದುಕೊಂಡು ಪಕ್ಷ ಸಂಘಟನೆ ಮಾಡಿದ್ದೇನೆ. ಇವೆಲ್ಲವೂ ಹೈಕಮಾಂಡ್ ಸೇರಿದಂತೆ ಪಕ್ಷದ ಎಲ್ಲರಿಗೂ ಗೊತ್ತಿದೆ. ಶನಿವಾರವೇ ನಾನು ಮಠಕ್ಕೆ ಬರಬೇಕಿತ್ತು. ಆರೋಗ್ಯ ಸರಿ ಇಲ್ಲದ ಕಾರಣ ಇಂದು ಬಂದಿದ್ದೇನೆ. ಈಗಲೂ ಸಹ ನಾನು ಮುಖ್ಯಮಂತ್ರಿಯಾಗಲು ಶಾಸಕಾಂಗ ಸಭೆ ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಜೊತೆಗೆ ನಾನು ನಂಬಿರುವ ಅಜ್ಜಯ್ಯನವರ ಆಶೀರ್ವಾದವೂ ಅದೇ ಆದರೆ ನೋಡೋಣ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಿ ಶಾಸಕರಾಗಿ ಆಯ್ಕೆಯಾಗಿರುವ ಚಲುವರಾಯಸ್ವಾಮಿ, ಶಾಸಕ ಕೆ. ಷಡಕ್ಷರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. ಶಾಸಕ ಕೆ. ಷಡಕ್ಷರಿಯವರು ಡಿಕೆಶಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಟಿಕೆಟ್ ಬೇಡವೆಂದರೂ ಕೊಟ್ಟಿದ್ದೆ:
ನಾನು ಪಕ್ಷದ ಅಧಿಕಾರ ವಹಿಸಿಕೊಂಡಾಗಿನಿಂದಲೂ ಟಿಕೆಟ್ ನೀಡುವಿಕೆ, ಬಿ ಫಾರಂ ನೀಡುವುದು, ನಾಮಿನೇಷನ್ ಮಾಡುವ ತನಕವೂ ಈ ಗೆಲುವಿನ ಪ್ರತಿ ಹಂತದಲ್ಲೂ ಅಜ್ಜಯ್ಯನವರ ಆಶೀರ್ವಾದ ಹಾಗೂ ಶ್ರೀಗಳವರ ಮಾರ್ಗದರ್ಶನದಂತೆ ನಡೆದಿದ್ದೇನೆ. ಚುನಾವಣಾ ಗ್ಯಾರಂಟಿ ಭರವಸೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಬಾಗ್ಯ, ಬಸ್‌ಭಾಗ್ಯ ಮೊದಲಾದ ಪ್ರಮುಖ ಸ್ತ್ರೀಶಕ್ತಿ ಸಂಬಂಧಿಸಿದ ಯೋಜನೆಗಳನ್ನು ನೀಡಲು ಶ್ರೀಗಳವರೆ ಕಾರಣ. ಅವರೇ ಹೆಣ್ಣುಮಕ್ಕಳ ಪರವಾದ ಯೋಜನೆಗಳನ್ನು ನೀಡುವ ಮೂಲಕ ಸ್ತ್ರೀಶಕ್ತಿ ಆಶೀರ್ವಾದ ಪಡೆದಲ್ಲಿ ನಿಮ್ಮ ಯಶಸ್ಸು ಸುಲಭವಾಗಲಿದೆ ಎಂದು ಸಲಹೆ ನೀಡಿದ್ದರು. ಒಟ್ಟಾರೆ ಇಂದು ನನ್ನ ಎಲ್ಲ ಸಾಧನೆ, ಯಶಸ್ಸುಗಳ ಹಿಂದೆ ಇಲ್ಲಿನ ಗುರುವಿನ ಮಾರ್ಗದರ್ಶನವೇ ಕಾರಣವಾಗಿದ್ದು ಗುರಿ ಸಾಧಿಸಲು ಗುರುವಿನ ಆಶೀರ್ವಾದವೇ ಮುಖ್ಯ. ಈ ಪೀಠಕ್ಕೆ ಸಾಕಷ್ಟುಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕೆಲ ನಿರ್ದಿಷ್ಟ8-10 ಅಭ್ಯರ್ಥಿಗಳಿಗೆ ಟಿಕೆಟ್ ಬೇಡ ಎಂದು ಶ್ರೀಗಳು ತಿಳಿಸಿದ್ದರೂ ನಾನೇ ಕೊಟ್ಟಿದ್ದೆ. ಆದರೆ ಅವೆಲ್ಲವೂ ಹೋದವು. ಅವರುಗಳ ಹೆಸರಿನ ಪ್ರಸ್ತಾಪ ಈಗ ಬೇಡ ಎಂದು ಅಜ್ಜಯನವರ ಪೀಠದ ಬಗ್ಗೆ ಅವರಿಗಿರುವ ಬಲವಾದ ನಂಬಿಕೆಯನ್ನು ಪುನರುಚ್ಚರಿಸಿದರು.
DK Shivakumar Birthday: ಅದ್ದೂರಿಯಾಗಿ ಡಿಕೆಶಿ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ನಾಯಕರು!
ಸಿದ್ದು, ನನ್ನ ಮಧ್ಯೆ ಸಣ್ಣ ಭಿನ್ನಾಭಿಪ್ರಾಯವಿಲ್ಲ: ಡಿಕೆಶಿ
ನಾನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರುವರು ಚನ್ನಾಗಿಲ್ಲ ಎಂದು ಬಹಳ ಜನರು ಮಾತನಾಡುತ್ತಾರೆ. ಆದರೆ ನನ್ನ ಹಾಗೂ ಅವರ ಮಧ್ಯೆ ಒಂದೇ ಒಂದು ಸಣ್ಣ ಭಿನ್ನಾಭಿಪ್ರಾಯ ಇಲ್ಲ. ನಾನು ಅವರೂ ಒಟ್ಟಿಗೇ ಪರಸ್ಪರ ನಂಬಿಕೆ, ಪ್ರೀತಿ ವಿಶ್ವಾಸದಿಂದ ಹಗಲಿರುಳು ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಹಾಗಾಗಿ ಮುಂದಿನ ಯಾವುದೇ ರಾಜಕೀಯ ಬೆಳವಣಿಗೆಯಲ್ಲೂ ನಾವಿಬ್ಬರೂ ಒಟ್ಟಾಗಿದ್ದು, ನಮ್ಮ ಭರವಸೆಗಳನ್ನು ಈಡೇರಿಸಲು ಹಾಗೂ ಜನಪರ ಆಡಳಿತ ನೀಡಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಇದರಲ್ಲಿ ಯಾರೂ ಯಾವ ಸಣ್ಣ ಅನುಮಾನವನ್ನೂ ಇಟ್ಟುಕೊಳ್ಳಬಾರದು ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ತಿಳಿಸಿದರು.