
ಬೆಂಗಳೂರು (ಜು.17): ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಮಹತ್ವವಾದ ಚಿಹ್ನೆಗಳು, ಧ್ವಜಗಳು, ಹೆಸರುಗಳು ಮತ್ತು ಲೋಗೋಗಳು, ಲಾಂಛನಗಳು ಹಾಗೂ ಮೊಹರುಗಳ ಅನಧಿಕೃತ ದುರ್ಬಳಕೆಯನ್ನು ತಡೆಯಲು ಹಲವು ನಿರ್ದೇಶನಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ವಾಹನಗಳ ಮೇಲೆ ರಾಷ್ಟ್ರ ಧ್ವಜ ಅಥವಾ ಚಿಹ್ನೆಗಳನ್ನು ಬಳಕೆ ಮಾಡಿದರೆ, ಕೂಡಲೇ ಜಪ್ತಿ ಮಾಡಿಕೊಂಡು, ದಂಡ ವಸೂಲಿ ಮಾಡುವಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಈ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ದಿನಾಂಕ 16.06.2025 ರಂದು ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ದಿನಾಂಕ 18.06.2025 ರಂದು ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಿದ್ದು, ಅದರಂತೆ ಎಲ್ಲಾ ಇಲಾಖೆಗಳು, ಇಲಾಖೆಗಳ ಅಧೀನದಲ್ಲಿ ಬರುವ ಕ್ಷೇತ್ರ ಇಲಾಖೆಗಳು, ನಿಗಮ / ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು / ವಿಶ್ವವಿದ್ಯಾನಿಲಯಗಳು / ಆಯೋಗಗಳು ಹಾಗೂ ಇತ್ಯಾದಿ ಸಂಘ ಸಂಸ್ಥೆಗಳು ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಇಲಾಖೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ The State Emblem of India (Prevention of Improper Use) Act, 2005, The State Emblem of India (Regulation of Use) Rules, 2007, The Emblems and Names (Prevention of Improper Use) Act, 1950, The Emblems and Names (Prevention of Improper Use) Rules, 1982, Central Motor Vehicles Rules, 1989 ರ ಎಲ್ಲಾ ಸಂಬಂಧಿಸಿದ ನಿಬಂಧನೆಗಳು (ಅದರಲ್ಲೂ ಮುಖ್ಯವಾಗಿ ನಿಯಮ 50 ಹಾಗೂ 51) ಹಾಗೂ Karnataka Motor Vehicles Rules, 1989 (ಅದರಲ್ಲೂ ಮುಖ್ಯವಾಗಿ ನಿಯಮ 145-ಎ) ಈ ಕಾಯ್ದೆ ಮತ್ತು ನಿಯಮಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ರಾಷ್ಟ್ರೀಯ ಲಾಂಛನಗಳು ಹಾಗೂ ಚಿಹ್ನೆಗಳ ಬಳಕೆಗೆ ಸಂಬಂಧಿಸಿದ ಕಾಯ್ದೆಗಳ ಉಲ್ಲಂಘನೆಗೆ ದಂಡ ವಿಧಿಸುವ ಹಾಗೂ ಚಾಲನಾ ಪರವಾನಗಿ ರದ್ದುಗೊಳಿಸುವಂತಹ ನಿಯಮಗಳನ್ನು ಸಂಬಂಧಿಸಿದ ನಿಯಮಗಳಲ್ಲಿ ಅಳವಡಿಸುವುದು. ಸಂಚಾರಿ ಪೊಲೀಸರಿಗೆ ಈ ರೀತಿಯ ಉಲ್ಲಂಘನೆಗಳ ಕುರಿತು ನಿಗಾವಹಿಸುವಂತೆ ಹಾಗೂ ಉಲ್ಲಂಘನೆಗೆ ದಂಡನಾತ್ಮಕ ಕ್ರಮ ತೆಗೆದುಕೊಳ್ಳಲು ಸೂಕ್ತ ಕಾರ್ಯಕ್ರಮಗಳು ಹಾಗೂ ತರಬೇತಿಯ ಮೂಲಕ ಶಿಕ್ಷಣ ನೀಡುವಂತೆ ಕ್ರಮವಹಿಸಲು ಸೂಚಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಹಾಗೂ ಕಾಯ್ದೆ / ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ