
ಬೆಂಗಳೂರು (ಜು.17): ಜಾರಿ ನಿರ್ದೇಶನಾಲಯ (ED) ಬೆಂಗಳೂರು ವಲಯ ಕಚೇರಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ (MLA KY Nanjegowda) ಹಾಗೂ ಇತರರಿಗೆ ಸೇರಿದ ಒಟ್ಟು ₹1.32 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದೆ.
ಈ ಕ್ರಮ, 2023ರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KOMUL) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ಹರಿವಿನ (money laundering) ಪ್ರಕರಣಕ್ಕೆ ಸಂಬಂಧಪಟ್ಟಿದ್ದು, ಜುಲೈ 16, 2025ರಂದು ಅಧಿಕೃತವಾಗಿ ಈ ಮೌಲ್ಯದ ಆಸ್ತಿಯನ್ನು ಜಪ್ತಿಗೊಳಿಸಲಾಗಿದೆ. ED ಅಧಿಕೃತ ಟ್ವೀಟ್‌ನಲ್ಲಿ, 'ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರಿಗೆ ಸೇರಿದ ₹1.32 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ' ಎಂದು ಮಾಹಿತಿ ನೀಡಲಾಗಿದೆ.
ನೇಮಕಾತಿ ಹಗರಣದಲ್ಲಿ ಭಾರಿ ಹಣದ ಹರಿವಿನ ಶಂಕೆ
2023ರಲ್ಲಿ ನಡೆದ KOMUL ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಅವ್ಯವಹಾರ ನಡೆದಿರುವ ಶಂಕೆ ಇದೆ. ಈ ಹಗರಣದಲ್ಲಿ ಲಕ್ಷಾಂತರ ರೂಪಾಯಿ ಹಸ್ತಾಂತರವಾಗಿದ್ದು, ಅರ್ಹತೆಯಿಲ್ಲದವರ ನೇಮಕಾತಿಗೆ ಹಣ ಪಡೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿ ಇತ್ತೀಚೆಗೆ ತನಿಖೆ ಜೋರಾಗಿದ್ದು, ಇ.ಡಿ. ಇದೀಗ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ತನಿಖೆಗೆ ಇನ್ನಷ್ಟು ವೇಗ ನೀಡಿದೆ.
ರಾಜಕೀಯ ಹಿನ್ನಲೆ ಹೊಂದಿದ ಆರೋಪ
ಮುಖ್ಯವಾಗಿ ಕಾಂಗ್ರೆಸ್ ನಾಯಕನಾಗಿರುವ ಶಾಸಕ ನಂಜೇಗೌಡರ ವಿರುದ್ಧ ಈ ರೀತಿಯ ಕ್ರಮ ಕೈಗೊಳ್ಳಲ್ಪಟ್ಟಿರುವುದರಿಂದ, ಈ ಪ್ರಕರಣಕ್ಕೆ ರಾಜಕೀಯ ಅಂಶವೂ ಸೇರಿದೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಆದರೆ ಇ.ಡಿ. ತನ್ನ ಅಧಿಕಾರಗಳನ್ನು ನೀತಿಯಂತೆ ಹಾಗೂ ಸಾಕ್ಷ್ಯಾಧಾರದ ಆಧಾರದಲ್ಲಿ ಬಳಸುತ್ತಿದ್ದು, ತನಿಖೆ ಮುಂದುವರಿಯಲಿದೆ.
2024ರ ಜನವರಿಯಲ್ಲಿ ನಂಜೇಗೌಡ ಮನೆ ಮೇಲೆ ಇಡಿ ದಾಳಿ:
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (KOMUL) ಕೋಚಿಮುಲ್ ದ ಅಧ್ಯಕ್ಷ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಮನೆ ಹಾಗೂ ಕಚೇರಿಗಳ ಮೇಲೆ 2024ರ ಜನವರಿ 8ರಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದರು. ನಂಜೇಗೌಡ ಅವರಿಗೆ ಸೇರಿದ 4 ಕಡೆಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿರುವ ಮನೆ, ಹುತ್ತೂರು ಹೋಬಳಿ ಕೋಚಿಮುಲ್ ಕಚೇರಿಯಲ್ಲಿ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿತ್ತು.
ಇದರ ಜೊತೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಮೂರ್ತಿ ನಿವಾಸದ ಮನೆ ಮೇಲೂ ದಾಳಿ ಮಾಡಿದ್ದರು. ಇನ್ನು ಕೆ.ವೈ.ನಂಜೇಗೌಡ ಅವರ ಬೆಂಗಳೂರು ನಿವಾಸ, ಮಾಲೂರು ಕೋಚಿಮುಲ್ ಕಚೇರಿ ಸೇರಿದಂತೆ ಒಟ್ಟು 10ಕ್ಕೂ ಅಧಿಕ ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸುಮಾರು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ನೇಮಕಾತಿ ಹಗರಣ ಸಂಬಂಧ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
3ನೇ ಬಾರಿಗೆ ಕೋಮುಲ್ ಅಧ್ಯಕ್ಷರಾಗಿ ಆಯ್ಕೆ:
ಕಳೆದ ಎರಡು ವಾರಗಳ ಹಿಂದೆ ಅಂದರೆ ಜು.5ರಂದು ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಮಾಲೂರಿನ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಕೋಮುಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಂಜೇಗೌಡ ಶನಿವಾರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೋಮುಲ್ ಒಕ್ಕೂಟದ 13 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಜಯ ಸಾಧಿಸುವುದರೊಂದಿಗೆ ಕೋಮುಲ್ ಕಾಂಗ್ರೆಸ್ ವಶವಾಗಿತ್ತು. ಜೆಡಿಎಸ್ – ಬಿಜೆಪಿ ಮೈತ್ರಿಕೂಟದ 4 ಜನ ನಿರ್ದೇಶಕರು ಮಾತ್ರ ಗೆದ್ದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ