SC ST Quota ಹೆಚ್ಚಳ, ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

By Gowthami KFirst Published Feb 25, 2023, 10:10 PM IST
Highlights

ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕಾಯ್ದೆ-2023’ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು (ಫೆ.25): ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ಶಿಕ್ಷಣ ಸಂಸ್ಥೆಗಳಲ್ಲಿನ ಸೀಟುಗಳು, ನೇಮಕಾತಿಗಳು ಅಥವಾ ರಾಜ್ಯದ ಅಡಿಯ ಸೇವೆಯಲ್ಲಿನ ಹುದ್ದೆಗಳ ಮೀಸಲಾತಿ) ಕಾಯ್ದೆ-2023’ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತು ಕಾನೂನು ಪದವಿ ವಿದ್ಯಾರ್ಥಿ ಮಹೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಕಾಯ್ದೆ ಅಡಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟು, ರಾಜ್ಯ ಸರ್ಕಾರಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಯವರ ಮೀಸಲು ಪ್ರಮಾಣವನ್ನು ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡದವರಿಗೆ ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಇದು ಸಂವಿಧಾನದ ಪರಿಚ್ಛೇದ 14 (ಸಮಾನತೆ), 15 (ಸಮಾನ ಉದ್ಯೋಗವಕಾಶ) ಮತ್ತು 16ರ (ಜಾತಿ, ಧರ್ಮ, ಜನಾಂಗ, ಲಿಂಗ, ಜನ್ಮಸ್ಥಳ ಹೆಸರಿನಲ್ಲಿ ತಾರತಮ್ಯ ನಿಷೇಧ) ಸ್ಪಷ್ಟ ಉಲ್ಲಂಘನೆಯಾಗಿದೆ ಅರ್ಜಿದಾರರು ಹೇಳಿದ್ದಾರೆ.

ಅಲ್ಲದೆ, ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ಮೀಸಲಾತಿ ಇದೆ. ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಮೀಸಲು ಪ್ರಮಾಣ ಹೆಚ್ಚಿಸಿರುವುದರಿಂದ ರಾಜ್ಯದಲ್ಲಿ ಒಟ್ಟಾರೆ ಮೀಸಲು ಪ್ರಮಾಣವು ಶೇ.56ರಷ್ಟು ಆಗಲಿದೆ. ಇದು ಮೀಸಲು ಪ್ರಮಾಣ ಶೇ.50ರಷ್ಟು ಮೀರಬಾರದೆಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿರುವ ತೀರ್ಪಿಗೆ ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವೃದ್ಧನ ಶಿಕ್ಷೆಯನ್ನು ಕಡಿತಗೊಳಿಸಿ, ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವಂತೆ ವಿಭಿನ್ನ ಶಿಕ್ಷೆ ನೀಡಿದ ಹೈಕೋರ್ಟ್!

ಕೇಂದ್ರ ಸರ್ಕಾರ, ಸಾರ್ವಜನಿಕ ಉದ್ದಿಮೆಗಳು ಮತ್ತು ದೇಶದ ಎಲ್ಲ ರಾಜ್ಯಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿವೆ. ಕೇಂದ್ರ ಸರ್ಕಾರದಲ್ಲಿ 30.7 ಲಕ್ಷ, ಕರ್ನಾಟಕ ಸರ್ಕಾರದಲ್ಲಿ 2.3 ಲಕ್ಷ ಹುದ್ದೆಗಳು ಖಾಲಿಯಿವೆ. ಇದರಲ್ಲಿ ಹೆಚ್ಚಿನ ಸಂಖ್ಯೆ ಉದ್ಯೋಗಗಳನ್ನು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗಿದೆ. ಅವುಗಳ ಭರ್ತಿಗೆ ವಿಳಂಬ ಮಾಡುತ್ತಿರುವುದಕ್ಕೆ ಸರ್ಕಾರಗಳಿಂದ ಯಾವುದೇ ಸ್ಪಷ್ಟನೆ ಇಲ್ಲ. ಇಂತಹ ಸಂದರ್ಭದಲ್ಲಿ ಮೀಸಲು ಹೆಚ್ಚಿಸುವುದಕ್ಕೂ ಯಾವುದೇ ತರ್ಕಬದ್ಧ ವಿವರಣೆಯೂ ಇಲ್ಲ ಎಂದು ನ್ಯಾಯಪೀಠಕ್ಕೆ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

ಇಷ್ಟದ ವ್ಯಕ್ತಿಯನ್ನು ವಿವಾಹವಾಗುವುದು ಮೂಲಭೂತ ಹಕ್ಕು, ಹೈಕೋರ್ಟ್ ಅಭಿಪ್ರಾಯ

ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲು ಪ್ರಮಾಣ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ-2023 ಅನ್ನು ಸಂವಿಧಾನ ಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

click me!