
ಬೆಂಗಳೂರು(ಫೆ.25): ಒಂದು ರಾಜ್ಯ ಹಲವು ಜಗತ್ತು ಅನ್ನೋ ಘೋಷವಾಕ್ಯ ಹೊಂದಿರುವ ಕರ್ನಾಟಕದಲ್ಲಿ ಅದ್ಭುತಗಳ ಪಟ್ಟಿ ದೊಡ್ಡದಿದೆ. ವಿಶ್ವದ 7 ಅದ್ಭುತಗಳಿರುವಂತೆ ಕರ್ನಾಟಕದ 7 ಅದ್ಭುತಗಳನ್ನು ಗುರುತಿಸುವ ಹಾಗೂ ಅವುಗಳನ್ನು ಪಟ್ಟಿ ಮಾಡುವ ವಿಶೇಷ ಅಭಿಯಾನ ಆರಂಭಿಸಿದ್ದ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಇದೀಗ ಕರುನಾಡಿನ ಹೆಗ್ಗುರುತುಗಳಾಗಿ ‘ಕರ್ನಾಟಕದ 7 ಅದ್ಭುತಗಳು’ ಘೋಷಿಸಿದೆ.ನಗರ ಖಾಸಗಿ ಹೊಟೆಲ್‌ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ಜನರು ಗುರುತಿಸಿದ ಸೆವನ್ ವಂಡರ್ಸ್ ಆಫ್ ಕರ್ನಾಟಕದ ಪಟ್ಟಿ ಘೋಷಿಸಿದರು. ಬನ್ನಿ ಹುಡುಕೋಣ ಕರ್ನಾಟಕ 7 ಅದ್ಭುತಗಳನ್ನ ಅಭಿಯಾನದ ರಾಯಭಾರಿ, ನಟ ರಮೇಶ್ ಅರವಿಂದ್, ಪ್ರವಾಸೋದ್ಯ ಸಚಿವ ಆನಂದ್, ಏಷ್ಯಾನೆಟ್ ನ್ಯೂಸ್ ನೆಟವರ್ಟ್ ಚೇರ್ಮೆನ್ ರಾಜೇಶ್ ಕಾಲ್ರ, ಕನ್ನಡ ಪ್ರಭ ಸಂಪಾದಕ ರವಿ ಹೆಗ್ಡೆ, ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ರಾಜ್ಯದ 7 ಅದ್ಭುತಗಳನ್ನು ಬೊಮ್ಮಾಯಿ ಘೋಷಿಸಿದರು.
1 ಹಂಪಿ
2 ಶ್ರವಣ ಬೆಳಗೊಳ
3 ಗೋಲ್ ಗುಂಬಜ್
4 ಹಿರೇ ಬಣಕಲ್
5 ಮೈಸೂರು ಅರಮನೆ
6 ಜೋಗ ಫಾಲ್ಸ್
7 ನೇತ್ರಾಣಿ ದ್ವೀಪ
7 Wonders Of Karnataka: 7 ಅದ್ಭುತಗಳು ಅಭಿಯಾನಕ್ಕೆ ‘ಗಾಂಧೀಜಿ’ ಸಾಥ್!
ಕರ್ನಾಟಕ 7 ಅದ್ಭುತಗಳ ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ಕರ್ನಾಟಕದ 7 ಅದ್ಭುತಗಳ ಘೋಷಣೆ ಮಾಡಿದ ಬಸವರಾಜ್ ಬೊಮ್ಮಾಯಿ, ಹೊಸ ಪ್ರವಾಸೋದ್ಯಮ ಮಾದರಿಗಳ ಸೃಷ್ಟಿಗೆ ದಿಕ್ಸೂಚಿಯಾಗಲಿವೆ ಎಂದರು. ಈ ಏಳು ಅಧಿಕೃತ ಅದ್ಭುತಗಳ ಪಟ್ಟಿಯಲ್ಲಿ ಒಂದಾಗಿರುವ ಹಿರೇಬಣಕಲ್ ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಲು ಈಗಾಗಲೇ ಸೂಚಿಸಿದ್ದೇನೆ. ಜತೆಗೆ ಏಳೂ ಅದ್ಭುತಗಳ ಸ್ಥಳದಲ್ಲಿ ಆಗಬೇಕಿರುವ ಅಭಿವೃದ್ಧಿಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.
ನಾನು ಪ್ರವಾಸೋದ್ಯಮ ಸಚಿವನಾದ ಬಳಿಕ ರಾಜ್ಯದ ಸಾಕಷ್ಟು ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅದರ ಜತೆಗೆ ಇನ್ನಷ್ಟು ಕಾರ್ಯಗಳು ಆಗಬೇಕಿದೆ ಎಂದು ಕರ್ನಾಟಕದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು. ಏಳು ಅದ್ಭುತ ತಾಣಗಳ ಸಂರಕ್ಷಣೆ ನಿರಂತರವಾಗಿರಬೇಕು. ಆದರೆ, ನಾವಿನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಗೆ ಹೋಗುತ್ತಿದ್ದೇವೆ. ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹೋಗುತ್ತವೆ. ಕಾರ್ಯಾಂಗವು ಈ ತಾಣಗಳ ರಕ್ಷಣೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಈ ಕಾರ್ಯಕ್ಕೆ ಜನತೆ ಸಹಕರಿಸಬೇಕು. ಸರ್ಕಾರ ಯಾವುದೇ ಇರಲಿ ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇಂಥಹ ಹೊಣೆಗಾರಿಕೆ ನಿಭಾಯಿಸುವಲ್ಲಿ ಹಿಂದೆ ಬೀಳಬಾರದು ಎಂದರು.
ಕರ್ನಾಟಕದಲ್ಲಿ ನೂರಾರು ಅದ್ಭುತಗಳಿವೆ. ಅವುಗಳಲ್ಲಿ ಏಳನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಿ ಅದ ಮೇಲೆ ಬೆಳಕು ಚೆಲ್ಲುವ ಕೈಂಕರ್ಯಕ್ಕೆ ರಾಯಭಾರಿಯಾಗುವಂತೆ ನನ್ನನ್ನು ಕೇಳಿಕೊಂಡಾಗ ತಕ್ಷಣ ಪ್ರೀತಿಯಿಂದ ಒಪ್ಪಿಕೊಂಡೆ. ಪ್ರತಿವರ್ಷ ವಿಶ್ವ ಸುಂದರಿಯರು ಬದಲಾಗುತ್ತಾರೆ. ಆದರೆ, ಈ ಏಳು ಅದ್ಭುತಗಳೆಂದ ಈ ವಿಶ್ವ ಸುಂದರಿಯರು ನೂರಾರು ವರ್ಷಗಳಿಂದ ಸೌಂದರ್ಯ ಉಳಿಸಿಕೊಂಡಿವೆ. ಸರ್ವ ಕಾಲಕ್ಕೂ ಈ ಸೌಂದರ್ಯ ಹಾಗೇ ಇರಲಿದೆ ಎಂದು ‘ಕರ್ನಾಟಕದ 7 ಅದ್ಭುತಗಳು’ ಅಭಿಯಾನದ ರಾಯಭಾರಿ, ನಟ ರಮೇಶ್ ಅರವಿಂದ್ ಹೇಳಿದರು. ನಮ್ಮ ಗ್ರಂಥಗಳಲ್ಲಿ ಸತ್ಯಂ ಶಿವಂ ಸುಂದರಂ ಎಂದು ತಿಳಿಸಿದಂತೆ ಒಂದು ವಿಚಾರ ಶಾಶ್ವತವಾಗಿ ಸುಂದರವಾಗಿರಬೇಕಾದರೆ ಅದರ ಹಿಂದೆ ಸತ್ಯ, ದೈವತ್ವ, ಸತ್ವ ಅಡಗಿರಬೇಕು. ಈ ಏಳು ಅದ್ಭುತಗಳು ನೋಟಕ್ಕೆ ಮಾತ್ರ ಸುಂದರವಾಗಿಲ್ಲ. ಅದರ ಜತೆಗೆ ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವಂತಹ ಸತ್ಯ, ಸತ್ವವನ್ನು ಒಳಗೊಂಡಿವೆ ಎಂದು ರಮೇಶ್ ಅರವಿಂದ್ ಬಣ್ಣಿಸಿದರು.
ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಮೆಚ್ಚುಗೆ
ಜಗತ್ತಿನ ಏಳು ಅದ್ಭುತಗಳ ಮಾದರಿಯಲ್ಲಿ ‘ಕರ್ನಾಟಕದ ಏಳು ಅದ್ಭುತಗಳನ್ನು’ ನಾಡಿನ ಜನರಿಂದಲೇ ಗುರುತಿಸಲು ‘ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಮಹತ್ವಾಕಾಂಕ್ಷೆಯ ‘ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು’ ವಿಶೇಷ ಅಭಿಯಾನಕ್ಕೆ 2022ರ ಮೇ ತಿಂಗಳ ಆರಂಭದಲ್ಲಿ ಚಾಲನೆ ನೀಡಲಾಗಿತ್ತು. ಕರುನಾಡಿನ ನೆಲ, ಜಲ, ಕಾಡು, ಕಡಲು, ವಾಸ್ತು, ವಿಜ್ಞಾನ, ಶಿಲ್ಪ, ಕಲೆ, ಇತಿಹಾಸ, ಪರಂಪರೆ, ಕನ್ನಡಿಗರ ತತ್ವ ಸಿದ್ಧಾಂತಗಳೂ ಸೇರಿದಂತೆ ರಾಜ್ಯದ ಎಲ್ಲ ವೈವಿಧ್ಯಗಳ ಪ್ರಾತಿನಿಧಿಕ ಹೆಗ್ಗುರುತುಗಳು ಎನಿಸುವಂತಹ ‘7 ಅದ್ಭುತ ತಾಣ’ಗಳ ಆಯ್ಕೆಗೆ ಸುದೀರ್ಘ ಅಭಿಯಾನ ನಡೆದಿತ್ತು. ‘ಕರ್ನಾಟಕದ 7 ಅದ್ಭುತ’ಗಳಿಗಾಗಿ ರಾಜ್ಯದ ಮೂಲೆ ಮೂಲೆಯ ಜನರು ಐದು ಸಾವಿರಕ್ಕೂ ಹೆಚ್ಚು ತಾಣಗಳನ್ನು ನಾಮನಿರ್ದೇಶನ ಮಾಡಿದ್ದರು. ಇವುಗಳನ್ನು ಆಂತರಿಕ ತೀರ್ಪುಗಾರರ ಸಮಿತಿಯು ಪರಿಶೀಲಿಸಿ ಉತ್ತಮ ಎನಿಸುವಂತಹ 100 ತಾಣಗಳನ್ನು ಆರಿಸಿತ್ತು. ಬಳಿಕ ಈ 100 ತಾಣಗಳನ್ನು ಜನಮತ ಪರೀಕ್ಷೆಗೆ ಒಡ್ಡಲಾಯಿತು. ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮದಲ್ಲಿ ನೀಡಲಾದ ಕರೆಯ ಮೇರೆಗೆ ವೆಬ್ಸೈಟ್ ಹಾಗೂ ಆನ್ಲೈನ್ ಮಾಧ್ಯಮಗಳ ಮೂಲಕ ಸುಮಾರು 82 ಲಕ್ಷಕ್ಕೂ ಹೆಚ್ಚು ಜನಮತ ಚಲಾವಣೆಯಾಗಿದ್ದವು. ಈ ಪೈಕಿ ಅತಿಹೆಚ್ಚು ಜನಮತ ಪಡೆದ 21 ತಾಣಗಳನ್ನು ಅಂತಿಮ ಸುತ್ತಿಗೆ ಆರಿಸಲಾಗಿತ್ತು. ಒಂದು ವರ್ಷದ ಕಾಲ ಸುದೀರ್ಘ ಸ್ಥಳ ಸಮೀಕ್ಷೆ ನಡೆಸಿದ ಬಳಿಕ ಈ ತಾಣಗಳನ್ನು ಜಾಗತಿಕ ಪ್ರವಾಸೋದ್ಯಮ ಹಾಗೂ ಇತಿಹಾಸ ತಜ್ಞರಿರುವ ಏಳು ತೀರ್ಪುಗಾರರ ಸಮಿತಿಯ ಮುಂದಿಡಲಾಗಿತ್ತು. ಈ ಸಮಿತಿಯ ಸದಸ್ಯರು 7 ಅಂಶಗಳ ಮಾನದಂಡಗಳನ್ನು ಮುಂದಿಟ್ಟು ವಿಜೇತ ತಾಣಗಳ ಆಯ್ಕೆಗೆ ವಿಚಾರ ಮಂಥನ ನಡೆಸಿದರು. ಚಾರಿತ್ರಿಕ, ನಿರ್ಮಾಣ ಹಾಗೂ ಬಳಕೆಯಾದ ದ್ರವ್ಯ, ವೈಶಿಷ್ಟ್ಯ ಮತ್ತು ಅನನ್ಯತೆ, ಸೌಂದರ್ಯ ಮತ್ತು ಕಲಾತ್ಮಕತೆ, ಬೃಹದಾಕಾರ, ಸುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮವಾಗಿ 7 ಅದ್ಭುತಗಳನ್ನು ಒಮ್ಮತದಿಂದ ಆರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ