ಲಾಯರ್‌ ವಿರುದ್ಧ ಕಕ್ಷಿದಾರ ಹಾಕಿದ್ದ ಕೇಸು ವಜಾ: ಹೈಕೋರ್ಟ್‌

Published : Oct 08, 2022, 12:29 PM IST
ಲಾಯರ್‌ ವಿರುದ್ಧ ಕಕ್ಷಿದಾರ ಹಾಕಿದ್ದ ಕೇಸು ವಜಾ: ಹೈಕೋರ್ಟ್‌

ಸಾರಾಂಶ

ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅನುಕೂಲಕರವಾದ ತೀರ್ಪು ಪಡೆಯುವುದಾಗಿ ತಿಳಿಸಿ ಲಕ್ಷಾಂತರ ಶುಲ್ಕ ಸ್ವೀಕರಿಸಿ ನಂತರ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಕಕ್ಷಿದಾರೊಬ್ಬರು ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಅ.08): ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅನುಕೂಲಕರವಾದ ತೀರ್ಪು ಪಡೆಯುವುದಾಗಿ ತಿಳಿಸಿ ಲಕ್ಷಾಂತರ ಶುಲ್ಕ ಸ್ವೀಕರಿಸಿ ನಂತರ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ಕಕ್ಷಿದಾರೊಬ್ಬರು ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿಯ ವೃದ್ಧರಾದ ಸಿಪ್ರಿಯನ್‌ ಮೆನೆಜಸ್‌ ತಮ್ಮ ವಿರುದ್ಧ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಹಿರಿಯ ವಕೀಲ ಕೆ.ಎಸ್‌.ಮಹದೇವನ್‌ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ನಕಲಿ ಥೆರಪಿಸ್ಟ್‌ಗಳನ್ನು ನಿಯಂತ್ರಿಸಿ: ಹೈಕೋರ್ಟ್‌

ಕಕ್ಷಿದಾರ ಪ್ರಕರಣದಲ್ಲಿ ಯಶಸ್ಸು ಸಿಕ್ಕಿಲ್ಲ, ಅನುಕೂಲಕರವಾದ ತೀರ್ಪು ಪಡೆಯಲಾಗಲಿಲ್ಲ ಎಂಬ ಕಾರಣಕ್ಕೆ ವಕೀಲರು ನಂಬಿಕೆ ದ್ರೋಹ ಅಥವಾ ವಂಚನೆ ಎಸಗಿದ್ದಾರೆ ಎಂದು ಹೇಳುವುದು ವಿನಾಶಕಾರಿ ಸನ್ನಿವೇಶಕ್ಕೆ ದಾರಿ ಮಾಡಿಕೊಡುತ್ತದೆ. ವಕೀಲರು ವಿಚಾರಣೆಗೆ ಹಾಜರಾಗಿ, ಪ್ರಕರಣದಲ್ಲಿ ಯಶಸ್ವಿಯಾಗಲು ತಮ್ಮೆಲ್ಲಾ ಪ್ರಯತ್ನ ನಡೆಸಬಹುದಷ್ಟೆ. ಪ್ರಕರಣ ಕೇವಲ ಅದರ ಅರ್ಹತೆ ಮೇಲೆ ನಿರ್ಧಾರವಾಗುತ್ತದೆ ಎಂಬುದನ್ನು ಎಲ್ಲ ಕಕ್ಷಿದಾರರು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಅನುಕೂಲಕರ ಆದೇಶ ಪಡೆಯುವುದಾಗಿ ಯಾವುದೇ ವಕೀಲ ಹೇಳಲು ಸಾಧ್ಯವಿಲ್ಲ. ಶುಲ್ಕ ಪಾವತಿಸಲಾಗಿದೆ ಎಂಬ ಕಾರಣಕ್ಕೆ ವಕೀಲರು ಖಂಡಿತವಾಗಿಯೂ ಅನುಕೂಲಕರ ತೀರ್ಪು ಪಡೆಯುತ್ತಾರೆ ಎಂದು ನಂಬಬಾರದು. ಯಾವುದೇ ಪ್ರಕರಣದಲ್ಲಿ ಒಬ್ಬರು ಮಾತ್ರ ಗೆಲ್ಲುತ್ತಾರೆ. ಯಾವುದೇ ಪ್ರಕರಣ ಅರ್ಹತೆ, ವಾಸ್ತವಾಂಶ ಮತ್ತು ಕಾನೂನು ಅನ್ವಯದ ಮೇಲೆ ಅಂತಿಮ ತೀರ್ಮಾನವಾಗುತ್ತದೆ. ಅಂತಿಮ ತೀರ್ಮಾನಕ್ಕೂ, ಶುಲ್ಕ ಪಾವತಿಗೂ, ಅದರ ಪ್ರಮಾಣಕ್ಕೂ ಸಂಬಂಧವಿರುವುದಿಲ್ಲ. ಅದು ಅಪ್ರಸ್ತುತವಾಗಿದ್ದು, ವಕೀಲ ಹಾಗೂ ಕಕ್ಷಿದಾರ ನಡುವಿನ ಖಾಸಗಿ ವಿಷಯವಾಗಿರುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

ಅನುಕೂಲಕರ ತೀರ್ಪು ಪಡೆಯದೇ ಅರ್ಜಿದಾರರು ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಆದರೆ ದೂರಿನಲ್ಲಿ ಹೇಳಿರುವ ಪ್ರಕಾರ, ದೆಹಲಿಯ ಹಿರಿಯ ವಕೀಲರನ್ನು ಪರಿಚಯಿಸುವುದಾಗಿ ಅಥವಾ ಅವರಿಗೆ ಪ್ರಕರಣವನ್ನು ಶಿಫಾರಸು ಮಾಡುವುದಾಗಿ ಮಹದೇವನ್‌ ತಿಳಿಸಿದ್ದಾರೆ. ಜತೆಗೆ ವಕೀಲರಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣ ಸಂಬಂಧ ತಮ್ಮ ವತಿಯಿಂದ ಮಾಡಬೇಕಾದ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಅರ್ಜಿದಾರರ ವಿರುದ್ಧದ ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪ ಮಾನ್ಯವಾಗುವುದಿಲ್ಲ. ಪ್ರಕರಣ ಮುಂದುವರಿದರೆ ಕಾನೂನಿನ ದುರ್ಬಳಕೆಯಾಗಲಿದೆ ಎಂದು ನಿರ್ಧರಿಸಿದ ಹೈಕೋರ್ಟ್‌, ಅರ್ಜಿದಾರರ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿದೆ.

ಪ್ರಕರಣದ ವಿವರ: ‘ಸಿಪ್ರಿಯನ್‌ ಮೆನೆಜಸ್‌ ಅವರು ತಮ್ಮ ದೂರಿನಲ್ಲಿ ಪ್ರಕರಣವೊಂದರ ಸಂಬಂಧ ವಕೀಲ ಕೆ.ಎಸ್‌.ಮಹದೇವನ್‌ ಅವರು ತಾನು ಹಿರಿಯ ವಕೀಲನಾಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ಹಲವು ಹಿರಿಯ ವಕೀಲರ ಸಂಪರ್ಕ ಹೊಂದಿದ್ದೇನೆ. ತಮ್ಮ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರನ್ನು ನಿಯೋಜಿಸಲಾಗುವುದು. ಅವರು ನಿಮ್ಮ ಪ್ರಕರಣವನ್ನು ಪ್ರತಿನಿಧಿಸಿ, ಅನುಕೂಲಕರವಾದ ತೀರ್ಪು ಪಡೆಯುತ್ತಾರೆ’ ಎಂದು ತಿಳಿಸಿದ್ದರು. 

11 ವರ್ಷದ ನಂತರ ಗುರುತು ಪತ್ತೆ ಪರೇಡ್‌ಗೆ ಹೈಕೋರ್ಟ್‌ ಆಕ್ಷೇಪ

ಅವರ ಮಾತಿನ ಆಧಾರದ ಮೇಲೆ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರು ಹಾಜರಾಗುವುದಕ್ಕೆ, ಮಾಧವನ್‌ ಅವರು ದೆಹಲಿಗೆ ಪ್ರಯಾಣಿಸಲು ಹಾಗೂ ಕೋರ್ಟ್‌ಗೆ ಹಾಜರಾಗಲು 14.60 ಲಕ್ಷ ರು. ಶುಲ್ಕವನ್ನು ಪಾವತಿಸಿದ್ದೇನೆ. ಆದರೆ ಪ್ರಕರಣ 2016ರ ಏ.18ರಂದು ಸುಪ್ರೀಂಕೋರ್ಟ್‌ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದ ಸ್ಥಿತಿಗತಿ ತಿಳಿಯಲು ಆ ದಿನದ ಅಂತ್ಯದಲ್ಲಿ ಮಹದೇವನ್‌ ಅವರಿಗೆ ಕರೆ ಮಾಡಿದಾಗ ಸೂಕ್ತ ಮಾಹಿತಿ ನೀಡಲಿಲ್ಲ’ ಎಂದು ಆರೋಪಿಸಿದ್ದರು. ಇದಾದ ನಂತರ ಮಹಾದೇವನ್‌ ಅವರ ಪ್ರಾಮಾಣಿಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಡಿ ಖಾಸಗಿ ದೂರು ದಾಖಲಿಸಿದ್ದರು. ಅದರ ರದ್ದತಿಗೆ ಕೋರಿ ಮಹದೇವನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್