ಓಲಾ, ಉಬರ್‌, ರ್ಯಾಪಿಡೋ ಆಟೋ ಸರ್ವೀಸ್‌ ನಿಷೇಧ!

By Govindaraj S  |  First Published Oct 8, 2022, 8:35 AM IST

ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಅಕ್ರಮವಾಗಿ ಆಟೋರಿಕ್ಷಾ ಸೇವೆ ನೀಡುತ್ತಿದ್ದ ಮತ್ತು ಗ್ರಾಹಕರಿಂದ ಬೇಕಾಬಿಟ್ಟಿದರ ವಸೂಲಿ ಮಾಡುತ್ತಿದ್ದ ಆರೋಪ ಹೊತ್ತಿರುವ ಓಲಾ, ಉಬರ್‌ ಹಾಗೂ ರ್ಯಾಪಿಡೋ ಕಂಪನಿಗಳ ವಿರುದ್ಧ ಜನಾಗ್ರಹಕ್ಕೆ ಮಣಿದು ಕೊನೆಗೂ ರಾಜ್ಯ ಸರ್ಕಾರ ಸಮರ ಸಾರಿದೆ. 


ಬೆಂಗಳೂರು (ಅ.08): ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಅಕ್ರಮವಾಗಿ ಆಟೋರಿಕ್ಷಾ ಸೇವೆ ನೀಡುತ್ತಿದ್ದ ಮತ್ತು ಗ್ರಾಹಕರಿಂದ ಬೇಕಾಬಿಟ್ಟಿದರ ವಸೂಲಿ ಮಾಡುತ್ತಿದ್ದ ಆರೋಪ ಹೊತ್ತಿರುವ ಓಲಾ, ಉಬರ್‌ ಹಾಗೂ ರ್ಯಾಪಿಡೋ ಕಂಪನಿಗಳ ವಿರುದ್ಧ ಜನಾಗ್ರಹಕ್ಕೆ ಮಣಿದು ಕೊನೆಗೂ ರಾಜ್ಯ ಸರ್ಕಾರ ಸಮರ ಸಾರಿದೆ. ಮೂರೂ ಕಂಪನಿಗಳ ಆಟೋ ರಿಕ್ಷಾ ಸೇವೆ ಮತ್ತು ಉಬರ್‌/ರ್ಯಾಪಿಡೋನ ದ್ವಿಚಕ್ರ ವಾಹನ ಸೇವೆ ಸ್ಥಗಿತಕ್ಕೆ ರಾಜ್ಯ ಸಾರಿಗೆ ಇಲಾಖೆ ಸೂಚಿಸಿದೆ.

ಇಲಾಖೆಯ ಈ ಕ್ರಮದಿಂದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಓಲಾ, ಉಬರ್‌, ರ್ಯಾಪಿಡೋ ಆಟೋರಿಕ್ಷಾ ಸೇವೆ ಬಂದ್‌ ಆಗಲಿವೆ. ರ್ಯಾಪಿಡೋದ ಬೈಕ್‌ ಸೇವೆ ಕೂಡ ಸ್ಥಗಿತಗೊಳ್ಳಲಿದೆ. ಓಲಾ, ಉಬರ್‌ನ ಕೇವಲ ಕ್ಯಾಬ್‌ ಸೇವೆಗಳು ಮಾತ್ರ ಈ ಆ್ಯಪ್‌ನಲ್ಲಿ ಲಭ್ಯವಿರಲಿವೆ. ಆದರೆ ಇವುಗಳಿಗೂ ಹೆಚ್ಚು ದರ ಪೀಕದಂತೆ ಖಡಕ್ಕಾಗಿ ತಾಕೀತು ಮಾಡಲಾಗಿದೆ. ಇನ್ನು ಅಕ್ರಮ ಸೇವೆ ಕುರಿತಂತೆ 3 ದಿನದಲ್ಲಿ ಉತ್ತರಿಸುವಂತೆ ಮೂರೂ ಕಂಪನಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

Tap to resize

Latest Videos

ಆಟೋ ಹತ್ತಿದ್ರೆ 100 ರೂಪಾಯಿ, ಜನರ ರಕ್ತ ಹೀರುವ ಓಲಾ, ಊಬರ್‌ಗೆ ಸಾರಿಗೆ ಇಲಾಖೆ ನೋಟಿಸ್‌!

ದರ ಸುಲಿಗೆ ಆರೋಪ: ಓಲಾ ಆಟೋ ರಿಕ್ಷಾ ಸೇವೆ ಕಳೆದ ಸುಮಾರು 5 ವರ್ಷದಿಂದ ಆರಂಭವಾಗಿದ್ದು, ಉಬರ್‌ ಸುಮಾರು 4 ವರ್ಷ ಹಿಂದೆ ಆಟೋರಿಕ್ಷಾ ಸೇವೆ ಆರಂಭಿಸಿತ್ತು. ಓಲಾ ಮತ್ತು ಉಬರ್‌ ಎರಡು ಕಿ.ಮೀ.ಗಿಂತ ಕಡಿಮೆ ದೂರವಿದ್ದರೂ ಕನಿಷ್ಠ 100 ರು. ಪ್ರಯಾಣ ಶುಲ್ಕ ವಿಧಿಸುತ್ತಿದ್ದು, ಈ ಬಗ್ಗೆ ಹಲವಾರು ಪ್ರಯಾಣಿರಿಂದ ಸಾರಿಗೆ ಇಲಾಖೆಗೆ ಸಾಕಷ್ಟುದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ‘ಕರ್ನಾಟಕ ಆನ್‌-ಡಿಮ್ಯಾಂಡ್‌ ಟ್ರಾನ್ಸ್‌ಪೋರ್ಟೇಷನ್‌ ಟೆಕ್ನಾಲಜಿ ಅಗ್ರಿಗೇಟ​ರ್‍ಸ್ ನಿಯಮಾವಳಿ- 2016ರ ಅಡಿಯಲ್ಲಿ ಓಲಾ, ಉಬರ್‌ ಕಂಪನಿಗಳ ಆಟೋ ಮತ್ತು ದ್ವಿಚಕ್ರ ವಾಹನ ಸೇವೆಗೆ ಅನುಮತಿ ನೀಡಿಲ್ಲ, ಹೀಗಾಗಿ, ಅವುಗಳ ಸೇವೆ ಸ್ಥಗಿತಗೊಳಿಸಿ’ ಎಂದು ನೋಟಿಸ್‌ ಜಾರಿ ಮಾಡಿದೆ.

ಆಟೋ ರಿಕ್ಷಾ ಸೇವೆಯೇ ಅಕ್ರಮ: ‘ಟ್ಯಾಕ್ಸಿಗಳು ಎಂದರೆ ‘ಚಾಲಕನನ್ನು ಹೊರತುಪಡಿಸಿ ಗರಿಷ್ಠ 6 ಪ್ರಯಾಣಿಕರನ್ನು ಮೀರದ ಆಸನ ಸಾಮರ್ಥ್ಯ ಹೊಂದಿರುವ ಮೋಟಾರ್‌ ಕ್ಯಾಬ್‌’ ಎಂದು ನಿಯಮಗಳಲ್ಲಿದೆ. ಅದನ್ನು ಉಲ್ಲಂಘಿಸಿ ಗ್ರಾಹಕರು ಮತ್ತು ಟ್ಯಾಕ್ಸಿ ಚಾಲಕರನ್ನು ಸಂಪರ್ಕಿಸಿಕೊಡುವ ಅಗ್ರಿಗೇಟರ್‌ಗಳಾದ (ಆ್ಯಪ್‌ ಆಧಾರಿತ ಮಧ್ಯವರ್ತಿ ಸಂಸ್ಥೆಗಳು) ಓಲಾ, ಉಬರ್‌, ಆಟೋರಿಕ್ಷಾ ಸೇವೆಗಳನ್ನು ಒದಗಿಸುತ್ತಿವೆ. ಅಷ್ಟುಮಾತ್ರವಲ್ಲದೇ ರಾಜ್ಯ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ. ಈ ಅಂಶಗಳು ಇಲಾಖೆಯ ಗಮನಕ್ಕೆ ಬಂದಿದೆ. ಈ ಆ್ಯಪ್‌ಗಳು ಆಟೋರಿಕ್ಷಾ ಸೇವೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಟ್ಯಾಕ್ಸಿಗಳಲ್ಲಿಯೂ ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು. 3 ದಿನಗಳ ಒಳಗೆ ಉತ್ತರ ನೀಡಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನೋಟಿಸ್‌ನಲ್ಲಿ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ರ್ಯಾಪಿಡೋ ಬೈಕ್‌ ಪರವಾನಗಿಯೂ ಇಲ್ಲ!: ‘ರ್ಯಾಪಿಡೋ ಸಂಸ್ಥೆಯು ರಾಜ್ಯ ಸಾರಿಗೆ ಇಲಾಖೆಯಿಂದ ಯಾವುದೇ ಪರವಾನಗಿ (ಲೈಸೆನ್ಸ್‌) ಪಡೆಯದೇ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ಸೇವೆ ಒದಗಿಸುತ್ತಿದೆ. ಸಂಸ್ಥೆಯು ಕಾರ್ಯ ಚಟುವಟಿಕೆ ಸಂಪೂರ್ಣ ಸಾರಿಗೆ ಇಲಾಖೆ ನಿಯಮಗಳಿಗೆ ವಿರುದ್ಧವಾಗಿದ್ದು, ಈ ಕೂಡಲೇ ರ್ಯಾಪಿಡೋ ಎಲ್ಲ ವಾಹನ ಸೇವೆಯನ್ನು ಸ್ಥಗಿತಗೊಳಿಸಬೇಕು’ ಎಂದು ಸೂಚಿಸಲಾಗಿದೆ.

ನಿಷೇಧ ಯಾಕೆ?
- ಓಲಾ, ಉಬರ್‌, ರ್ಯಾಪಿಡೋ ಸಂಸ್ಥೆಗಳು ಆಟೋ ರಿಕ್ಷಾ ಸೇವೆ ನೀಡಲು ಅನುಮತಿ ಪಡೆದಿಲ್ಲ

- ಆದಾಗ್ಯೂ ಸೇವೆ ಆರಂಭಿಸಿದ್ದವು. 2 ಕಿ.ಮೀ.ಗಿಂತ ಕಡಿಮೆ ಅಂತರಕ್ಕೂ 100 ರು. ಪಡೆಯುತ್ತಿದ್ದವು

- ಈ ಬಗ್ಗೆ ಸಾರಿಗೆ ಇಲಾಖೆಗೆ ಸಾಕಷ್ಟುಪ್ರಯಾಣಿಕರಿಂದ ದೂರು ಸಲ್ಲಿಕೆ. ಸೇವೆ ಸ್ಥಗಿತಕ್ಕೆ ಇಲಾಖೆ ಸೂಚನೆ

- ಅಕ್ರಮವಾಗಿ ಸೇವೆ ನೀಡುತ್ತಿದ್ದ ಕುರಿತು 3 ದಿನದಲ್ಲಿ ಉತ್ತರಿಸಲು ಸೂಚಿಸಿ ಮೂರೂ ಕಂಪನಿಗೆ ನೋಟಿಸ್‌

- ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಸ್ಥಗಿತಗೊಳ್ಳಲಿದೆ ಈ ಸಂಸ್ಥೆಗಳ ಆಟೋ ಸೇವೆ

ಓಲಾ ಕಾರಿಗೆ ‘ಬೈಕ್‌ ವಿಮೆ’ ಮಾಡಿಸಿ ಮಾರಿದ ಭೂಪನ ಬಂಧನ..!

ಓಲಾ, ಉಬರ್‌ಗೆ ಟ್ಯಾಕ್ಸಿ ಸೇವೆ ನೀಡಲು ಮಾತ್ರ ಪರವಾನಗಿಯನ್ನು ನೀಡಿದ್ದೇವೆ. ಆಟೋರಿಕ್ಷಾಗೆ ಅನುಮತಿ ಇಲ್ಲ. ಅಕ್ರಮವಾಗಿ ಆಟೋ ಸೇವೆ ನೀಡಿದ್ದು ಮಾತ್ರವಲ್ಲದೆ ಗ್ರಾಹಕರಿಂದ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ದೂರು ಬಂದಿತ್ತು. ರ್ಯಾಪಿಡೊ ಪರವಾನಗಿಯನ್ನೇ ಪಡೆದಿಲ್ಲ. ಹೀಗಾಗಿ, ನೋಟಿಸ್‌ ನೀಡಿ ಕ್ರಮಕ್ಕೆ ಮುಂದಾಗಿದ್ದೇವೆ.
- ಟಿಎಚ್‌ಎಂ ಕುಮಾರ್‌, ಸಾರಿಗೆ ಆಯುಕ್ತ

click me!