ಷರತ್ತು ಬದ್ಧ ಕುದುರೆ ರೇಸ್‌ಗೆ ರಾಜ್ಯ ಹೈಕೋರ್ಟ್‌ ಮಧ್ಯಂತರ ಒಪ್ಪಿಗೆ, 3 ತಿಂಗಳ ಬಳಿಕ ರೇಸ್‌ ಕೋರ್ಸ್ ಓಪನ್

By Kannadaprabha NewsFirst Published Jun 20, 2024, 6:17 PM IST
Highlights

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು (ಜೂ.20): ನಗರದ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ರೇಸ್ ಕೋರ್ಸ್) ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿ ಹೈಕೋರ್ಟ್‌ ಆದೇಶಿಸಿದೆ. ಇದರ ಬೆನ್ನಲ್ಲೇ ಜೂ.22ರಂದು ಬೇಸಿಗೆ ಪಂದ್ಯ ಆಯೋಜನೆ ಮಾಡಿದೆ.

ಕುದುರೆ ಪಂದ್ಯಗಳ ಆಯೋಜನೆ ಅನುಮತಿ ನಿರಾಕರಿಸಿ ರಾಜ್ಯ ಸರ್ಕಾರ 2024ರ ಜೂ.6ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ (ಬಿಟಿಸಿ), ಕರ್ನಾಟಕ ಟ್ರೈನರ್ಸ್‌ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Latest Videos

ಬೆಂಗಳೂರು ರೇಸ್​ ಕೋರ್ಸ್​: ಎಫ್​ಐಆರ್‌ ರದ್ದಿಗೆ ಹೈಕೋರ್ಟ್ ನಕಾರ

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ನ್ಯಾಯಪೀಠ, 2024ರ ಮಾರ್ಚ್‌ ತಿಂಗಳಲ್ಲಿ ಆನ್‌ ಕೋರ್ಸ್‌ ಮತ್ತು ಆಫ್‌ ಕೋರ್ಸ್‌ ಕುದುರೆ ಪಂದ್ಯ ಮತ್ತು ಬೆಟ್ಟಿಂಗ್‌ ಚಟುವಟಿಕೆಗಳನ್ನು ನಡೆಸಲು ಸರ್ಕಾರ ನೀಡಿದ್ದ ಪರವಾನಗಿಯ ಷರತ್ತಿನಂತೆ ಕುದುರೆ ಪಂದ್ಯ ಆಯೋಜಿಸಬಹುದು ಎಂದು ತಿಳಿಸಿ ನ್ಯಾಯಪೀಠ ಮಂಗಳವಾರ ಮಧ್ಯಂತರ ಆದೇಶ ಮಾಡಿದೆ.

ಯಾವುದೇ ಅಡತಡೆ ಹಾಗೂ ಅಡಚಣೆ ರಹಿತವಾಗಿ ಪಂದ್ಯ ಆಯೋಜಿಸಲು ಅರ್ಜಿದಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಕುದುರೆ ಪಂದ್ಯ ಹಾಗೂ ಬೆಟ್ಟಿಂಗ್‌ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ನಿಯಂತ್ರಿಸುವ ಸ್ವಾತಂತ್ರ್ಯ ರಾಜ್ಯ ಸರ್ಕಾರಕ್ಕೆ ಇರಲಿದೆ. ಈ ಮಧ್ಯಂತರ ಆದೇಶ ಅರ್ಜಿಗಳ ಕುರಿತ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ನಿರ್ದೇಶಿಸಿದ ನ್ಯಾಯಪೀಠ, ಅರ್ಜಿಗಳ ವಿಚಾರಣೆಯನ್ನು ನಾಲ್ಕು ವಾರಗಳ ನಂತರಕ್ಕೆ ಮುಂದೂಡಿದೆ.

ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ

ಪ್ರಕರಣದ ಹಿನ್ನೆಲೆ: ನಿಗದಿತ ವೇಳಾಪಟ್ಟಿಯಂತೆ ಟರ್ಫ್‌ ಕ್ಲಬ್‌ನಲ್ಲಿ 2024ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಆನ್‌ ಕೋರ್ಸ್‌-ಆಫ್‌ ಕೋರ್ಸ್‌ ಕುದುರೆ ಪಂದ್ಯಗಳು ಹಾಗೂ ಬೆಟ್ಟಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ಕೋರಿ ಬಿಟಿಸಿ 2024ರ ಮಾ.21ರಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತ್ತು. ಅದನ್ನು ಸರ್ಕಾರ ಪರಿಗಣಿಸದ ಹಿನ್ನೆಲೆಯಲ್ಲಿ ಬಿಟಿಸಿ ಮತ್ತಿತರರು ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಜೂ.6ರವರೆಗೆ ಕಾಲಾವಕಾಶ ನೀಡಿ ಹೈಕೋರ್ಟ್‌ ಮೇ 21 ಹಾಗೂ 23ರಂದು ಆದೇಶಿಸಿತ್ತು. ಅದರಂತೆ ಬಿಟಿಸಿಯ ಮನವಿ ಪರಿಶೀಲಿಸಿದ್ದ ರಾಜ್ಯ ಸರ್ಕಾರ, ತೆರಿಗೆ ವಂಚನೆ ಹಾಗೂ ಬೆಟ್ಟಿಂಗ್‌ ಅಕ್ರಮ ಸೇರಿದಂತೆ ವಿವಿಧ ಅವ್ಯವಹಾರಗಳನ್ನು ಮುಂದಿಟ್ಟುಕೊಂಡು ಕುದುರೆ ಪಂದ್ಯ ಆಯೋಜಿಸಲು ಅನುಮತಿ ನಿರಾಕರಿಸಿ ಜೂ.6ಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ತಿದ್ದುಪಡಿ ಅರ್ಜಿ ಸಲ್ಲಿಸಿದ್ದರು.

ವಾದ-ಪ್ರತಿವಾದ: ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪ ಎದುರಿಸುತ್ತಿರುವ ಬುಕ್ಕಿಗಳ ಪರವಾನಗಿ ರದ್ದುಪಡಿಸಲು ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪನಿಗಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಪ್ರತಿ ದಿನ ಒಂದು ಕೋಟಿಗಿಂತಲೂ ಹೆಚ್ಚು ರು.ಗಳ ತೆರಿಗೆ ಸಂಗ್ರಹವಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಕುದುರೆ ಪಂದ್ಯಗಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡು ಸಾವಿರಕ್ಕೂ ಹೆಚ್ಚು ಜನ ಜೀವನಾಧಾರ ಅವಲಂಬಿಸಿದೆ. ಆದ್ದರಿಂದ ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಬೇಕು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಅದನ್ನು ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ರೇಸ್ ಕೋರ್ಸ್‌ ಅಕ್ರಮಗಳ ತಾಣವಾಗಿದೆ. ಪ್ರತಿದಿನ ಕೋಟ್ಯಂತರ ರು.ಗಳ ಅವ್ಯವಹಾರ ನಡೆಯುತ್ತಿದೆ. ಜತೆಗೆ, ತೆರಿಗೆ ವಂಚನೆಗೆ ಬುಕ್ಕಿಗಳು ಪ್ರಯತ್ನ ಮಾಡುತ್ತಿದ್ದು, ದಾಳಿ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನೂರಾರು ಮಂದಿ ಸಾಮಾನ್ಯ ಜನ ಕುದುರೆ ಪಂದ್ಯಗಳಲ್ಲಿ ತೊಡಗಿ ಹಣ ಕಳೆದುಕೊಂಡು ಜೀವನ ನಡೆಸುವುದಕ್ಕೆ ಪರದಾಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಪಂದ್ಯಗಳ ಆಯೋಜನೆಗೆ ಅನುಮತಿ ನಿರಾಕರಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ನ್ಯಾಯಪೀಠದ ಆದೇಶದಲ್ಲೇನಿದೆ?

*ಯಾವುದೇ ಅಡತಡೆ, ಅಡಚಣೆ ರಹಿತ ಪಂದ್ಯ ಆಯೋಜನೆಗೆ ಅನುಮತಿ ನೀಡಿ

*ಕುದುರೆ ಪಂದ್ಯ, ಬೆಟ್ಟಿಂಗ್‌, ನಿಯಂತ್ರಿಸುವ ಸ್ವಾತಂತ್ರ್ಯ ಸರ್ಕಾರಕ್ಕೆ ಇರಲಿದೆ

*ಮಧ್ಯಂತರ ಆದೇಶ ಅರ್ಜಿಗಳ ಕುರಿತ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ

*ಅರ್ಜಿಗಳ ವಿಚಾರಣೆಯನ್ನು ನಾಲ್ಕು ವಾರಗಳ ನಂತರಕ್ಕೆ ಮುಂದೂಡಿದೆ

click me!