ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ, ದರ್ಶನ್ ಪರವಾಗಿ ಲಾಬಿ ಮಾಡಿದ ಸಂಪುಟ ಸಹೋದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಈ ವಿಚಾರದಲ್ಲಿ ಯಾರೂ ನನ್ನ ಬಳಿ ಬರಲೇಬೇಡಿ ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರು (ಜೂ.20): ದರ್ಶನ್ & ಗ್ಯಾಂಗ್‌ನಿಂದ ದಾರುಣವಾಗಿ ಕೊಲೆಗೀಡಾದ ರೇಣುಕಾಸ್ವಾಮಿ ವಿಚಾರ ಗುರುವಾರ ಕ್ಯಾಬಿನೆಟ್ ಸಭೆಯಲ್ಲೂ ಸದ್ದು ಮಾಡಿದೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನನ್ನ ಬಳಿ ಸುಳಿಯಬೇಡಿ ಎಂದು ಸಿಎಂ ಸಿದ್ಧರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ವಾರ್ನಿಂಗ್ ನೀಡಿದ ಸಿಎಂ ಸಿದ್ದರಾಮಯ್ಯ, ಇದಕ್ಕಿಂತ ಕ್ರೂರ ಕೃತ್ಯ ಮತ್ತೊಂದಿಲ್ಲ. ಯಾರೂ ಈ ವಿಚಾರದಲ್ಲಿ ನನ್ನ ಹತ್ತಿರ ಬರುವ ಕೆಲಸ ಮಾಡಬೇಡಿ. ಯಾರೂ ಒತ್ತಡ ಹಾಕೋದಾಗಲೀ, ಮನವಿ ಮಾಡೋದಕ್ಕಾಗಲೀ ಬರಬೇಡಿ. ಈ ಘಟನೆ ಎಂಥದ್ದು ಅಂತ ನಾನು ನೋಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ. ಆ ಮೂಲಕ ದರ್ಶನ್ ಪರ ಲಾಬಿ ಮಾಡಲು ಮುಂದಾದ ಕೆಲ ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ವಾರ್ನಿಂಗ್ ಕೊಟ್ಟಿದ್ದಾರೆ.
ಅದರಂತಹ ಕ್ರೂರತನ ನಾನು ನೋಡೇ ಇಲ್ಲ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸಂಪುಟ ಸಭೆಯಲ್ಲಿ ಸಿದ್ಧರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಪೊಲೀಸರು ತಮಗೆ ತೋರಿಸಿದ ದೃಶ್ಯಾವಳಿಯನ್ನೂ ಕೂಡ ಸಿಎಂ ಸಿದ್ಧರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ದೃಶ್ಯಗಳನ್ನು ತೋರಿಸಿದ ಬಳಿಕವೇ ಸಿಎಂ ಪ್ರಕರಣದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕೆಲಸ ಮಾಡಲು ಸೂಚನೆ ನೀಡಿದ್ದರು.
ಇನ್ನು ಪ್ರಕರಣದ ಕುರಿತು ಯಾರೂ ಹೆಚ್ಚಿಗೆ ಮಾತನಾಡುವ ಅಗತ್ಯವಿಲ್ಲ. ಅನಗತ್ಯವಾಗಿ ಮಾತಿಗೆ ಸಿಕ್ಕಬೇಡಿ. ಪರ - ವಿರೋಧ ಯಾವ ಚರ್ಚೆ ಕೂಡ ಬೇಡ. ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಸಂಪುಟ ಸಭೆಯ ಆರಂಭದಲ್ಲೇ ಸಚಿವರಿಗೆ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಸರ್ಕಾರದ ಹೆವಿವೇಟ್ ಸಚಿವರು ಸೈಲೆಂಟ್ ಆಗಿ ಕುಳಿತುಬಿಟ್ಟಿದ್ದರು.
ದರ್ಶನ್‌ರನ್ನು ಬಂಧನ ಮಾಡುವ ಮುನ್ನ ಪೊಲೀಸ್ ಕಮೀಷನರ್ ದಯಾನಂದ್, ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಕೊಲೆಗೆ ಸಂಬಂಧಪಟ್ಟ ಪ್ರಮುಖ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಎಂಗೆ ತೋರಿಸಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ನೋಡಿದ ಸಿಎಂ, ಇವನು ಮನುಷ್ಯನಾ? ರಾಕ್ಷಸನಾ? ಯಾವುದೇ ಕಾರಣಕ್ಕೂ ದರ್ಶನ್‌ನ ಬಿಡಬೇಡಿ. ಆರೋಪಿಗಳು ಯಾರೆಲ್ಲಾ ಇದ್ದಾರೆ ಎಲ್ಲರನ್ನೂ ಒದ್ದು ಹೆಡೆಮುರಿ ಕಟ್ಟಿಒಳಗೆ ಕಳಿಸಿ ಎಂದು ಸಿಎಂ ಪೊಲೀಸರಿಗೆ ಸೂಚನೆ ನೀಡಿದ್ದರು. ಸಿಎಂ ಸೂಚನೆ ಸಿಕ್ಕ ಮರುದಿನವೇ ಪೊಲೀಸರು ಕಾರ್ಯಪ್ರವೃತ್ತರಾಗಿ ನಟ ದರ್ಶನ್ ಬಂಧನ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರ ಮಾಡಿದ್ದರು. ಅದೇ ದಿನವೇ ದರ್ಶನ್ ಬಂಧನವೂ ಆಗಿತ್ತು.
ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್ ಸೇರ್ಪಡೆ ಮಾಡಿದ ಪೊಲೀಸರು; ಜೈಲೂಟ ಫಿಕ್ಸ್!
ಸಿಎಂ ಅವರ ಕಾವೇರಿ ನಿವಾಸದಲ್ಲಿ ಕ್ಲೋಸ್ಡ್ ಡೋರ್ ಮೀಟಿಂಗ್‌ನಲ್ಲಿ ಪೊಲೀಸ್ ಕಮೀಷನರ್ ಈ ದೃಶ್ಯಗಳನ್ನು ಸಿಎಂಗೆ ತೋರಿಸಿದ್ದರು. ದರ್ಶನ್‌ರನ್ನು ಬಂಧಿಸುವ ವೇಳೆ ಮುಂದಾಗಬಹುದಾದ ಅಡೆತಡೆಗಳ ಬಗ್ಗೆ ಅರಿವು ಪೊಲೀಸರಿಗೂ ಇತ್ತು. ಅದೇ ಕಾರಣಕ್ಕಾಗಿ ಮೊದಲು ಸಿಎಂಗೆ ಈ ಕುರಿತಾದ ವಿವರಗಳನ್ನು ತೋರಿಸಿ, ಅವರಿಂದಲೇ ಅನುಮತಿಯನ್ನು ಪೊಲೀಸರು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಗ ಇದೇ ವಿಚಾರವನ್ನು ಅವರು ಕ್ಯಾಬಿನೆಟ್ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದಾರೆ.
ದರ್ಶನ್ ಮರ್ಯಾದೆ ಉಳಿಸಲು ಮುಂದಾದ ಪತ್ನಿ, ಮಾಧ್ಯಮಗಳಿಗೆ ತಡೆಯಾಜ್ಞೆ ತಂದ ವಿಜಯಲಕ್ಷ್ಮಿ!