
ಬೆಂಗಳೂರು (ನ.18): ಗೇಣಿಗೆ (ಹಿಡುವಳಿ) ನೀಡಲಾಗಿದ್ದ ಜಮೀನಿನ ಸ್ವಾಧೀನಕ್ಕಾಗಿ ಹಲವು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಗೋಪಾಲಕೃಷ್ಣ ಭಟ್‌ಗೆ ಸಮಾಧಾನ ತರುವ ತೀರ್ಪನ್ನು ಹೈಕೋರ್ಟ್ ನೀಡಿದೆ. ಗೇಣಿಗೆ ನೀಡಲಾಗಿದ್ದ ನಾಲ್ಕು ಎಕರೆ ಜಮೀನಿನ ಸ್ವಾಧೀನವನ್ನು ಎಂಟು ವಾರದಲ್ಲಿ ಗೇಣಿದಾರರಿಂದ ನಿವೃತ್ತ ಯೋಧರಾದ ಗೋಪಾಲಕೃಷ್ಣ ಅವರ ಸುಪರ್ದಿಗೆ ಕೊಡಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ವಿವಾದಿತ ಜಮೀನಿನ ಮಾಲಿಕತ್ವ ಕೋರಿ ನಫೀಜಾ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ, ಅರ್ಜಿದಾರರು ಕೂಡಲೇ ಜಮೀನಿನ ಸ್ವಾಧೀನವನ್ನು ಗೋಪಾಲಕೃಷ್ಣ ಅವರಿಗೆ ಬಿಟ್ಟುಕೊಡಬೇಕು. ಈ ಆದೇಶವನ್ನು ಅರ್ಜಿದಾರರು ಪಾಲಿಸದಿದ್ದರೆ, ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟಪ್ರಾಧಿಕಾರದ ಅಧಿಕಾರಿಗಳು ಜಮೀನಿನಿಂದ ಒಕ್ಕಲೆಬ್ಬಿಸಬೇಕು. ಗೋಪಾಲಕೃಷ್ಣ ಭಟ್ ಅವರಿಗೆ ಜಮೀನಿನ ಸ್ವಾಧೀನ ನೀಡಬೇಕು ಎಂದು ಆದೇಶಿಸಿದೆ.
Jamia Masjid Srirangapatna: ಶ್ರೀರಂಗಪಟ್ಟಣ ದೇಗುಲ ಕೆಡವಿ ಮಸೀದಿ: ಪಿಐಎಲ್
ಅಲ್ಲದೆ, ಕೈ ತಪ್ಪಿದ್ದ ಜಮೀನನ್ನು ಮರಳಿ ಪಡೆಯಲು 1990ರಿಂದಲೂ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ರ 15 (5)ರ ಅನುಸಾರ ಸೈನಿಕರು ನಿವೃತ್ತಿಯಾದ ಮೇಲೆ ತಮ್ಮ ಮಾಲಿಕತ್ವದ ಹಿಡುವಳಿ ಜಮೀನನ್ನು ಪುನಃ ಪಡೆಯಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನಿರಂತರ ಕಾನೂನು ಹೋರಾಟ: ಅರ್ಜಿದಾರರ ಪೂರ್ವಜರಾದ ಉಮರ್ ಬ್ಯಾರಿ ಎಂಬುವರು ಗೋಪಾಲಕೃಷ್ಣ ಅವರ ತಂದೆಯ ಮಾಲಿಕತ್ವದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ನಾಲ್ಕು ಎಕರೆ ಜಮೀನಿನಲ್ಲಿ 1940ರಿಂದ ಗೇಣಿ ಮಾಡುತ್ತಿದ್ದರು. ಗೋಪಾಲಕೃಷ್ಣ ಭಟ್ ಅವರು 1993ರಲ್ಲಿ ಸೇನೆಯ ಸೇವೆಯಿಂದ ನಿವೃತ್ತರಾಗಿದ್ದರು. 1994ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 15(4) ಅಡಿಯಲ್ಲಿ ಜಮೀನಿನ ಮರು ಸ್ವಾಧೀನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿದಾರರಿಗೆ ನೋಟಿಸ್ ನೀಡಿದ್ದರೂ ಅವರು ಪೂರಕವಾಗಿ ಸ್ಪಂದಿಸಿರಲಿಲ್ಲ.
Karnataka High Court: ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತನ ಜಾಮೀನು ಅರ್ಜಿ ವಜಾ
ನಂತರ ಭೂ ನ್ಯಾಯಾಧಿಕರಣವು ಜಮೀನಿನ ಹಕ್ಕುಪತ್ರವನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಸಲು ಆದೇಶಿಸಿತ್ತು. ಆ ಆದೇಶವನ್ನು ವಜಾಗೊಳಿಸಿ 2000ನೇ ಇಸವಿಯಲ್ಲಿ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೆ, ಗೋಪಾಲಕೃಷ್ಣ ಭಟ್ ಅವರ ಅರ್ಜಿಯ ಮೇಲೆ ವಿಚಾರಣೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸ್ಥಳೀಯ ತಹಶೀಲ್ದಾರ್‌ಗೆ ನಿರ್ದೇಶಿಸಿತ್ತು. ನಂತರ ತಹಶೀಲ್ದಾರ್ ಅವರು ಗೋಪಾಕೃಷ್ಣ ಭಟ್ ಪರವಾಗಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು 2016ರಲ್ಲಿ ಉಪ ವಿಭಾಗಾಧಿಕಾರಿ ವಜಾಗೊಳಿಸಿ, ತಹಶೀಲ್ದಾರ್ ಆದೇಶವನ್ನು ಎತ್ತಿಹಿಡಿದಿದ್ದರು. ಈ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ