Karnataka High Court : ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ

By Kannadaprabha News  |  First Published Dec 24, 2021, 7:26 AM IST
  • ಹೈಕೋರ್ಟ್‌ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮ 
  • ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ -    ವಾರದಲ್ಲಿ ನಿಯಮ ಪ್ರಕಟ

ಬೆಂಗಳೂರು (ಡಿ.24): ಹೈಕೋರ್ಟ್‌ (High Court) ಕಲಾಪಗಳನ್ನು ಯೂಟ್ಯೂಬ್‌ನಲ್ಲಿ (Youtube) ನೇರಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳನ್ನು ಒಂದು ವಾರದಲ್ಲಿ ರಾಜ್ಯ ಪತ್ರದಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.  ಇ-ಫೈಲಿಂಗ್‌ ಮತ್ತು ಕಲಾಪದ ನೇರ ಪ್ರಸಾರ ಕುರಿತಂತೆ ವಕೀಲ ದಿಲ್ರಾಜ್‌ ರೋಹಿತ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ (Judge) ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ರೂಪಿಸಿರುವ ನಿಯಮಗಳನ್ನು ಯಾವುದೇ ತಿದ್ದುಪಡಿ ಮಾಡದೆ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಶೀಘ್ರ ನಿಯಮಗಳನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.  ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ನಿಯಮಗಳನ್ನು ಒಂದು ವಾರದಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.

Latest Videos

undefined

ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್‌ (High Court) ಪೂರ್ಣ ಪೀಠವು 2021ರ ಸೆ.17ರಂದು ಒಪ್ಪಿಗೆ ನೀಡಿತ್ತು. ಅದನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ನಡುವೆ ಪೂರ್ವ ತಯಾರಿಯ ಭಾಗವಾಗಿ ಮುಖ್ಯ ನ್ಯಾಯಮೂರ್ತಿ ಪೀಠದಿಂದ ಆಯ್ದ ಪ್ರಕರಣಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.

ಒಂದು ವಾರ ಕೋರ್ಟ್ ರಜೆ : 

 ರಾಜ್ಯ ಹೈಕೋರ್ಟ್‌ಗೆ (Karnataka High Court)  ಡಿ.24ರಿಂದ 2022ರ ಜ.1ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ನ್ಯಾಯಾಂಗ ರಿಜಿಸ್ಟ್ರಾರ್‌ ಕೆ.ಎಸ್‌. ಭರತ್‌ ಕುಮಾರ್‌(Bharath Kumar) ನೋಟಿಫಿಕೇಷನ್‌ ಹೊರಡಿಸಿದ್ದಾರೆ. ಹೈಕೋರ್ಟ್‌ನ ಬೆಂಗಳೂರು (Bengaluru) ಪ್ರಧಾನ ಪೀಠ, ಧಾರವಾಡ ಮತ್ತು ಕಲುಬುರಗಿ (Kalaburagi) ಪೀಠಗಳಿಗೆ ಡಿ.4ರಿಂದ ಜ.1ರ ವರೆಗೆ ಚಳಿಗಾಲದ ರಜೆ (Winter Holiday) ಇರಲಿದೆ. ಈ ಅವಧಿಯಲ್ಲಿ ದೈನಂದಿನ ಕಲಾಪ ನಡೆಯುವುದಿಲ್ಲ. 

ಆದರೆ, ಡಿ.27ರಂದು ಬೆಂಗಳೂರು (Bengaluru) ಪ್ರಧಾನ ಪೀಠದಲ್ಲಿ ಮಾತ್ರ ರಜಾಕಾಲದ ನ್ಯಾಯಪೀಠಗಳು ಕಲಾಪ ನಡೆಸಲಿದ್ದು, ತುರ್ತು ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಲಿವೆ. ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳಲ್ಲಿ ರಜಾಕಾಲದ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಜತೆಗೆ, ಡಿ.29ರಂದು ಬೆಂಗಳೂರು ಪ್ರಧಾನ ಪೀಠದಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಕಲಾಪ ನಡೆಸಲಾಗುತ್ತದೆ. ಧಾರವಾಡ ಮತ್ತು ಕಲಬುರಗಿ ನ್ಯಾಯಪೀಠಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕೇವಲ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಾಗುತ್ತದೆ. ನ್ಯಾ.ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ.ಎ.ಆರ್‌. ಹೆಗ್ಡೆ ಅವರ ವಿಭಾಗೀಯ ಪೀಠ, ನ್ಯಾ.ಬಿ.ಎಂ. ಶ್ಯಾಮ್‌ ಪ್ರಸಾದ್‌, ನ್ಯಾ.ಇ.ಎಸ್‌. ಇಂದಿರೇಶ್‌, ನ್ಯಾ.ವಿ.ಶ್ರೀಷಾನಂದ ಮತ್ತು ನ್ಯಾ.ಎಂ.ಎಸ್‌. ಕಮಲ್‌ ಅವರು ಏಕ ಸದಸ್ಯ ನ್ಯಾಯಪೀಠಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಶೇ.55ರಷ್ಟು ಕೇಸ್ ಪೆಂಡಿಂಗ್ : ಕಳೆದ ಮೂರು ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚಿನ ವರ್ಷದಲ್ಲಿ ದೇಶದ 25 ಹೈಕೋರ್ಟ್ ಮೆಟ್ಟಿಲೇರಿದ 56.38 ಲಕ್ಷ ಕೇಸ್ ಗಳ ಪೈಕಿ ಶೇಕಡಾ 55 ರಷ್ಟು ಕೇಸ್ ಗಳೂ ಇನ್ನೂ ಇತ್ಯರ್ಥವಾಗದೇ ಉಳಿದಿವೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ ಶೇಕಡಾ 30.61ರಷ್ಟು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿದೆ. ಇದರಲ್ಲಿ 40%ನಷ್ಟು ಸಿವಿಲ್ ಪ್ರಕರಣಗಳಾಗಿವೆ ಎಂದು ನ್ಯಾಷನಲ್ ಜ್ಯುಡೀಷಲ್ ಗ್ರಿಡ್ ಡೇಟಾ (National Judicial Data Grid ) (ಎನ್‌ಜೆಡಿಜಿ) ತಿಳಿಸಿದೆ. ಎನ್‌ಜೆಡಿಜಿ ನ್ಯಾಯಾಂಗದ ಡೇಟಾವನ್ನು ಮೇಲ್ವಿಚಾರಣೆ ಮಾಡುವ ಸರ್ಕಾರದ ಸಂಸ್ಥೆಯಾಗಿದೆ.

ಒಟ್ಟು 56.38 ಲಕ್ಷ ಪ್ರಕರಣಗಳಲ್ಲಿ, ಸುಮಾರು 77 ಪ್ರತಿಶತ  ಅಂದರೆ 43.40 ಲಕ್ಷ ಪ್ರಕರಣಗಳು  ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದಿವೆ ಮತ್ತು ಶೇಕಡಾ 20 ಕ್ಕಿಂತ ಹೆಚ್ಚು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದ ಪ್ರಕರಣಗಳಾಗಿವೆ.  ಇನ್ನು ಕಾನೂನು ಮತ್ತು ನ್ಯಾಯ ಸಚಿವಾಲಯದ (Ministry of Law and Justice) ಮಾಹಿತಿ ಅಧರಿಸಿ ಹೇಳುವುದಾದರೆ, ಅಲಹಾಬಾದ್ ಹೈಕೋರ್ಟ್ ನಲ್ಲಿ (Allahabad High Court ) ಮಂಜೂರಾಗಿರುವ 160 ಹುದ್ದೆಗಳ ಪೈಕಿ ಶೇ.40ರಷ್ಟು ಹುದ್ದೆ ಇನ್ನೂ ಖಾಲಿಯಾಗಿಯೇ ಉಳಿದುಕೊಂಡಿದ್ದರಿಂದ ಇಲ್ಲಿನ ಕೋರ್ಟ್ ಈಗಲೂ ಶೇ.60ರ ಕಾರ್ಯಕ್ಷಮತೆಯಲ್ಲಿ ಕೆಲಸ ನಡೆಸುತ್ತಿದೆ.

ಒಟ್ಟಾರೆ ದೇಶದಲ್ಲಿರುವ ಹೈಕೋರ್ಟ್ ಗಳಿಗೆ ಸರ್ಕಾರ 1098 ನ್ಯಾಯಾಧೀಶ ಹುದ್ದೆಯನ್ನು ಮಂಜೂರು ಮಾಡಿದೆ. ಇವುಗಳ ಪೈಕಿ ಕೇವಲ 694 ನ್ಯಾಯಾಧೀಶರು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು, 404 ಹುದ್ದೆಗಳು ಖಾಲಿ ಉಳಿದಿವೆ. ಒಟ್ಟಾರೆಯಾಗಿ ದೇಶದಲ್ಲಿ ಶೇ.37ರಷ್ಟು ನ್ಯಾಯಾಧೀಶರ ಹುದ್ದೆಯಲ್ಲಿ ಖಾಲಿಯಾಗಿಯೇ ಉಳಿದುಕೊಂಡಿದೆ.

"ಉನ್ನತ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ನಿರಂತರ, ಸಮಗ್ರ ಮತ್ತು ಸಹಯೋಗದ ಪ್ರಕ್ರಿಯೆಯಾಗಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಮಟ್ಟದ ವಿವಿಧ ಸಾಂವಿಧಾನಿಕ ಪ್ರಾಧಿಕಾರಗಳಿಂದ ಸಮಾಲೋಚನೆ ಮತ್ತು ಅನುಮೋದನೆಯ ಅಗತ್ಯವಿದೆ. ಅಸ್ತಿತ್ವದಲ್ಲಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ನಿವೃತ್ತಿ, ರಾಜೀನಾಮೆ ಅಥವಾ ನ್ಯಾಯಾಧೀಶರ ಉನ್ನತೀಕರಣ ಮತ್ತು ನ್ಯಾಯಾಧೀಶರ ಬಲದ ಹೆಚ್ಚಳದ ಕಾರಣದಿಂದಾಗಿ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಖಾಲಿ ಹುದ್ದೆಗಳು ಉದ್ಭವಿಸುತ್ತಲೇ ಇರುತ್ತವೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯವು ಕಳೆದ ವಾರ ಲೋಕಸಭೆಯಲ್ಲಿ ( Lok Sabha) ಹೇಳಿತ್ತು.

click me!