ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಖಾಲಿ ಚೊಂಬು ತುಂಬಿಸುವಂತಹ ತೀರ್ಪು ಸುಪ್ರೀಂ ನೀಡಿದೆ - ಸಚಿವ ದಿನೇಶ್ ಗುಂಡೂರಾವ್

By Ravi Janekal  |  First Published Apr 22, 2024, 7:43 PM IST

ಒಂದು ರಾಜ್ಯ ಕೋರ್ಟ್ ಮುಖಾಂತರ ಪರಿಹಾರ ಪಡೆಯುತ್ತಿದೆ ಎಂದರೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಕೇಂದ್ರ ಸರ್ಕಾರ ನಮಗೆ ಏನು ಖಾಲಿ ಚೊಂಬು ಕೊಟ್ಟಿದ್ದರು. ಆ ಖಾಲಿ ಚೊಂಬಿನಲ್ಲಿ‌ ಸ್ವಲ್ಪ ತುಂಬಿಸುವ ಕೆಲಸ ಸರ್ವೋಚ್ಛ ನ್ಯಾಯಾಲಯ ಮಾಡಿದೆ ಎಂದು  ಸರ್ಕಾರದ ಮುಖ್ಯ ವಕ್ತಾರರಾಗಿರುವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 


ಬೆಂಗಳೂರು (ಏ.22): ಬರ ಪರಿಹಾರದ ವಿಚಾರದಲ್ಲಿ ಕರ್ನಾಟಕವನ್ನ ಕಡೆಗಣಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ತೀವ್ರ ಮುಖಭಂಗವಾಗಿದೆ ಎಂದು ಸರ್ಕಾರದ ಮುಖ್ಯ ವಕ್ತಾರರಾಗಿರುವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕರ್ನಾಟಕದ ನ್ಯಾಯಯುತ ಹೋರಾಟಕ್ಕೆ ಸಂದಿರುವ ಜಯ ಎಂದರು. 

Tap to resize

Latest Videos

ಒಂದು ರಾಜ್ಯ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನ ರಚಿಸಲಾಗಿದೆ. ಆದರೆ ಕೇಂದ್ರ ತಮಗಿಷ್ಟ ಬಂದಂತೆ ಬೇಕಾಬಿಟ್ಟಿಯಾಗಿ ನಡೆದುಕೊಳ್ತು. ಮೂರು ಬಾರಿ ರಾಜ್ಯದ ಬರ ಪರಿಸ್ಥಿತಿ ಕುರಿತು ವರದಿ ನೀಡಿದ್ವಿ. ಆದರೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಅನಿವಾರ್ಯವಾಗಿ ಕರ್ನಾಟಕ ಸರ್ಕಾರದ ಕಾನೂನು ಹೋರಾಟಕ್ಕೆ ಇಳಿಯಬೇಕಾಯಿತು. 

 

10 ವರ್ಷದಲ್ಲಿ ಅಚ್ಚೇದಿನ್ ತರಲಾಗದವರು ಈಗ 23 ವರ್ಷ ಸಮಯ ಕೇಳುತ್ತಿರುವುದು ಹಾಸ್ಯಾಸ್ಪದ - ಸಚಿವ ದಿನೇಶ್ ಗುಂಡೂರಾವ್ 

ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿಯುವ ಉದ್ದೇಶದಿಂದ ನಾವು ಕೋರ್ಟ್ ಮೊರೆ ಹೋಗಿರಲಿಲ್ಲ. ಕರ್ನಾಟಕದ ರೈತರು ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಸಿಗಬೇಕಾದ ಪರಿಹಾರಕ್ಕಾಗಿ ನಾವು ಕೋರ್ಟ್ ಗೆ ಹೋಗಿದ್ವಿ. ರಾಜ್ಯ ಸರ್ಕಾರಗಳ ಜೊತೆ ಏಕೆ ಸಂಘರ್ಷಕ್ಕೆ ಇಳಿಯುತ್ತಿದ್ದೀರಿ ಎಂದು  ಸ್ವತಃ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಸುಪ್ರೀಂ ಕೋರ್ಟ್ ಗೆ ಬಂದಿವೆ. ಇದನ್ನ ಬಗೆಹರಿಸಿಕೊಳ್ಳಬೇಕು ಅಂತ ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಚೀಮಾರಿ ಹಾಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದೆ ಇದ್ದಿದ್ದರೆ ಪರಿಹಾರ ಸಿಗ್ತಿತ್ತೋ ಇಲ್ವೋ, ಕರ್ನಾಟಕಕ್ಕೆ ಪರಿಹಾರ ಕೊಡುವ ಮನಸ್ಸು ಮೋದಿಯವರಿಗೆ ಇದ್ದಿರಲಿಲ್ಲ. ಕೋರ್ಟ್ ಮುಂದೆ ಮತ್ತೆ ಮುಖಭಂಗ ಆಗಬಾರದು  ಎಂಬ ಕಾರಣಕ್ಕೆ ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡ್ತೇವೆ ಅಂತ ಕೇಂದ್ರ ಸರ್ಕಾರ ಕೋರ್ಟ್ ಮುಂದೆ ಹೇಳಿಕೆ ನೀಡಿದೆ. ಸೋಮವಾರದ ಒಳಗಡೆ ಬರ ಪರಿಹಾರ ಬಿಡುಗಡೆ ಆಗುವ ನೀರಿಕ್ಷೆ ರಾಜ್ಯಕ್ಕಿದೆ. ಒಂದು ರಾಜ್ಯ ಕೋರ್ಟ್ ಮುಖಾಂತರ ಪರಿಹಾರ ಪಡೆಯುತ್ತಿದೆ ಎಂದರೆ ಯಾವ ಮನಸ್ಥಿತಿ ಕೇಂದ್ರ ಸರ್ಕಾರಕ್ಕೆ ಇತ್ತು. ಜನರ ಸಮಸ್ಯೆಗೆ ಸ್ಪಂದನೆ ಮಾಡೋದಕ್ಕೆ ಕೇಂದ್ರ ಸರ್ಕಾರಕ್ಕೆ ಆಗಿಲ್ಲ ಎಂಬುದು ಸಾಬೀತಾಗಿದೆ.‌ ಬರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಥವಾಗುವ ಗಾಂಭೀರ್ಯತೆ ಮತ್ತು ಸೂಕ್ಷ್ಮತೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಏಕೆ ಅರ್ಥವಾಗಲಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. 

ಕೇಂದ್ರ ಸರ್ಕಾರ ನಮಗೆ ಏನು ಖಾಲಿ ಚೊಂಬು ಕೊಟ್ಟಿದ್ದರು. ಆ ಖಾಲಿ ಚೊಂಬಿನಲ್ಲಿ‌ ಸ್ವಲ್ಪ ತುಂಬಿಸುವ ಕೆಲಸ ಸರ್ವೋಚ್ಛ ನ್ಯಾಯಾಲಯ ಮಾಡಿದೆ. ರಾಜ್ಯ ಸರ್ಕಾರ ನಮ್ಮ ರಾಜ್ಯದ ಹಕ್ಕಿನ ಪ್ರತಿಪಾದನೆ ಮಾಡ್ತಿರುವುದು ಸರಿ ಇದೆ. ಮುಂದಿನ ದಿನಗಳಲ್ಲಿ ಅನೇಕ ವಿಚಾರಗಳಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಬೇಕಿದೆ. ನಾವು ರಾಜ್ಯದ ಜನತೆಯ ಪರವಾಗಿ ಎಲ್ಲಾ ರೀತಿಯ ಹೋರಾಟ ಮಾಡಲು ತಯಾರಾಗಿದ್ದೇವೆ.‌ ನಾಳೆ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಅವರಿಗೆ ಇದು ಕಪಾಳ ಮೋಕ್ಷ. ಈ ಅಹಂಕಾರವನ್ನು ಬಿಟ್ಟುಬಿಡಿ.. ಜನರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ಎಂದು ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.‌

ಕೊಟ್ಟ ಕುದುರೆಯನ್ನು ಏರದ ಯಡಿಯೂರಪ್ಪ

ಭದ್ರಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದಾಗಿ ಯಡಿಯೂರಪ್ಪ ಹೇಳಿಕೆ ನೀಡಿದ್ರು.‌ ಈಗ ನಾವು ಮುಂದೆ ಅಧಿಕಾರಕ್ಕೆ ಬಂದರೆ ಭದ್ರಾ ಮೇಲ್ದಂಡೆ ಯೋಜನೆ ನ್ಯಾಯ ಕೊಡುಸ್ತೀವಿ ಅಂತಿದ್ದಾರೆ.  ಹಿಂದಿನ ಅವಧಿಯಲ್ಲಿ 26 ಸಂಸದರು, ಯಡಿಯೂರಪ್ಪನವರು ಏನು ಮಾಡಿದ್ರು. ಕುದುರೆ ನಿಮ್ಮ ಬಳಿಯೇ ಇತ್ತು ಕುದುರೆಯನ್ನು ಏರೋದಕ್ಕೆ ಆಗದೇ ಇರುವವರು ಯಡಿಯೂರಪ್ಪನವರು. ನೀವು ಆಗ ವೀರರು ಆಗಲಿಲ್ಲ ಶೂರರು ಆಗಲಿಲ್ಲ. ಎಂದು ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ರು.‌

ಬೆಂಗಳೂರಿನ ನೀರಿನ ಮೂಲಗಳ ಅಭಿವೃದ್ದಿಗೆ 3 ಸಾವಿರ ಕೋಟಿ, ಫೆರಿಫಿರಲ್  ರಿಂಗ್ ರೋಡ್ ಗೆ ಮೂರುವರೆ ಸಾವಿರ ಕೋಟಿ ಕೊಡ್ತೇವೆ ಎಂದರು. ಜಿಎಸ್ ಟಿ ಯಲ್ಲಿ ಕರ್ನಾಟಕಕ್ಕೆ ಆಗುವ ಅನ್ಯಾಯ ಸರಿಪಡಿಸಲು 5495 ಕೋಟಿ ನೀಡಲು 15 ನೇ ಹಣಕಾಸು ಆಯೋಗ ಶಿಫಶರಸ್ಸು ಮಾಡಿತ್ತು. ಹಣಕಾಸು ಆಯೋಗದಲ್ಲಿ ಶಿಫಾರಸ್ಸಾಗಿಯೂ ಕೇಂದ್ರ ಸರ್ಕಾರ ಹಣ ನೀಡದಿರುವ ವಿಚಾರಗಳನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮುಂದಟ್ಟು ಕಾನೂನು ಹೋರಾಟ ನಡೆಸಲಿದೆ ಎಂದು ಸಚಿವ ಗುಂಡೂರಾವ್ ಇದೇ ವೇಳೆ ತಿಳಿಸಿದರು. 

ಕಾಂಗ್ರೆಸ್ 20 ಕ್ಷೇತ್ರ ಅಲ್ಲ, ಗೆಲ್ಲುವ 4 ಕ್ಷೇತ್ರದ ಹೆಸರು ಹೇಳಲಿ ನೋಡೋಣ; ಸಿಎಂಗೆ ಬಿಎಸ್‌ವೈ ಟಾಂಗ್

ಮಹಿಳೆಯರ ಮಂಗಳಸೂತ್ರ ಕಸಿಯುವ ಪ್ರಧಾನಿ ಹೇಳಿಕೆ ಕೀಳು ಮಟ್ಟದ್ದು 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳ ಸೂತ್ರ ಕಸಿಯಲಿದೆ ಎಂಬ ಮೋದಿಯವರ ಹೇಳಿಕೆ ಅವರ ಮನಸ್ಥಿತಿಯನ್ನ ತೋರಿಸುತ್ತದೆ. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯು ಈ ಕೆಳಮಟ್ಟಕ್ಕೆ ಇಳಿದು ಮಾತನಾಡಿರುವುದು ನಾನು ನೋಡಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.‌

ಸೋಲಿನ ಭೀತಿಯಲ್ಲಿ ಹತಾಶರಾಗಿ ಮತ್ತೆ ವೈಷಮ್ಯವನ್ನು ಬೆಳೆಸಬೇಕು. ದೇಶದ ಜನರನ್ನ ಒಡೆಯಬೇಕು ಭಾವನೆಗಳನ್ನು ಕೆರಳಿಸಬೇಕು ಅಂತ ಕೀಳು ಮಟ್ಟದ ಭಾಷಣ ಪ್ರಧಾನ ಮಂತ್ರಿ ಮೋದಿ ಮಾಡಿದ್ದಾರೆ. ನಿಜವಾಗಿಯೂ ಇದನ್ನು ಕೇಳಿದರೆ ಆಶ್ಚರ್ಯ ಆಗುತ್ತೆ. ಒಬ್ಬ ಪ್ರಧಾನಿ ಈ ರೀತಿ ಮಾತನಾಡಬಹುದೇ.? ಮೊದಲ ಹಂತದ ಮತದಾನದಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ಇಂಡಿಯಾ ಮೈತ್ರಿಕೂಟ ಮುಂದೆ ಹೋಗಿದೆ ಅನ್ನೋದು ಮೋದಿಯವರ ಈ ಹೇಳಿಕೆಯ ತಾತ್ಪರ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

click me!