BF.7 in India: ಕ್ರಿಸ್‌ಮಸ್, ನ್ಯೂ ಇಯರ್‌ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

By BK Ashwin  |  First Published Dec 22, 2022, 10:34 PM IST

ರಾಜ್ಯದಲ್ಲಿ ಓಮಿಕ್ರಾನ್ ಉಪತಳಿ BF.7 ಆತಂಕ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 


ಚೀನಾದಲ್ಲಿ (China) ಕೋವಿಡ್‌ (COVID) ಅಟ್ಟಹಾಸ ಮೆರೆಯುತ್ತಿದ್ದು, ಸೋಂಕು ಹೆಚ್ಚಳಕ್ಕೆ ಓಮಿಕ್ರಾನ್‌ (Omicron) ಉಪತಳಿ BF.7 ಪ್ರಮುಖ ಕಾರಣ ಎನಿಸಿಕೊಂಡಿದೆ. ಈ ಆತಂಕಕಾರಿ ರೂಪಾಂತರಿ ಭಾರತದಲ್ಲೂ (India) ಪತ್ತೆಯಾಗಿದೆ. ಈ ಹಿನ್ನೆಲೆ ರಾಜ್ಯದಲ್ಲೂ ಈ ಓಮಿಕ್ರಾನ್ ಉಪತಳಿ BF.7 ಆತಂಕ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ (State Health Department) ಕೊರೊನಾ ಮಾರ್ಗಸೂಚಿಯನ್ನು (COVID Guidelines) ಬಿಡುಗಡೆ ಮಾಡಿದೆ. ಅಲ್ಲದೆ, ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೂ ರಾಜ್ಯ ಆಹಾರ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಬೆಂಗಳೂರು ಸೇರಿ ನಗರಗಳಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗುವ ಹಿನ್ನೆಲೆ ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಚೇರಿಗಳು ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನಯಾನ ಸಂದರ್ಭದಲ್ಲಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದೆ. ವಿಶೇಷವಾಗಿ ವೃದ್ಧರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಒಳಾಂಗಣದಲ್ಲದ್ದಾಗಲೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. 

Latest Videos

undefined

ಇದನ್ನು ಓದಿ: Corona 4th Wave: ಚಿತ್ರಮಂದಿರ, ಹೋಟೆಲ್‌, ಮಾಲ್‌, ಮೆಟ್ರೋದಲ್ಲಿ ಮಾಸ್ಕ್‌ ಕಡ್ಡಾಯ: ಶೀಘ್ರ ಮಾರ್ಗಸೂಚಿ ಪ್ರಕಟ

ಅಲ್ಲದೆ, ನಾಗರಿಕರೆಲ್ಲರೂ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಹಾಗೂ, ಉಸಿರಾಟದ ಸಮಸ್ಯೆ ಹಾಗೂ ಕೋವಿಡ್ 19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು, ಸ್ವಯಂ ಪ್ರತ್ಯೇಕವಾಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಬೇಕು. ಇನ್ನು, ಕೋವಿಡ್ ಪಾಸಿಟಿವ್‌ ಬಂದರೆ ಕೊರೋನಾ ಮಾರ್ಗಸೂಚಿ ಪಾಲನೆ ಮಾಡಬೇಕು, ಪ್ರಮಾಣೀಕೃತ ಶಿಷ್ಠಾಚಾರದ ಅನ್ವಯ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದೂ ರಾಜ್ಯ ಆರೋಗ್ಯ ಇಲಾಖೆ ಸೂಚನೆ ನೀಡಿದೆ. 

ಈ ಮಧ್ಯೆ, ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ, ಉಸಿರಾಟದ ವ್ಯಾಯಾಮಗಳು ಹಾಗೂ ಧ್ಯಾನವನ್ನು ಮಾಡುವಂತೆಯೂ ಕರ್ನಾಟಕ ಆರೋಗ್ಯ ಇಲಾಖೆ ಸಲಹೆ ನೀಡಿದೆ. 

ಇದನ್ನೂ ಓದಿ: ಕೋವಿಡ್ ಆತಂಕದ ಬೆನ್ನಲ್ಲೇ ಪ್ರಧಾನಿ ಮೋದಿ ತುರ್ತು ಸಭೆ, ಮಹತ್ವದ ಸೂಚನೆ!

ಸಭೆ, ಸಮಾರಂಭಗಳಿಗೆ ಪ್ರತ್ಯೇಕ ಮಾರ್ಗಸೂಚಿ
ಹಲವು ದೇಶಗಳಲ್ಲಿ ಕೋವಿಡ್‌ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಹಾಗೂ ಸಮಾರಂಭಗಳ ಆಯೋಜಕರು ಈ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟು ಹೊರಾಂಗಣದಲ್ಲಿ ಮತ್ತು ಒಳ್ಳೆಯ ಗಾಳಿ - ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ, ಹಗಲು ಹೊತ್ತಿನಲ್ಲಿ ನಡೆಸುವುದರಿಂದ ಆರೋಗ್ಯದ ಮೇಲೆ ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಲ್ಲದೆ, ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್‌ ಧರಿಸುವಂತೆ ಸಲಹೆ ನೀಡಲಾಗಿದ್ದು, ದೈಹಿಕ ಅಂತರವನ್ನು ಪಾಲಿಸುವುದು ಅಗತ್ಯವಾಗಿದೆ. ಹಾಗೂ, ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದೂ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಿದೆ. 

ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ: ಬೆಂಗಳೂರಿನಲ್ಲಿ ಅಲರ್ಟ್

ಇದರ ಜತೆಗೆ, ಕೋವಿಡ್ - 19 ಮುನ್ನೆಚ್ಚರಿಕೆ ಹಾಗೂ ನಿಯಂತ್ರಣದಲ್ಲಿ ಈವರೆಗೆ ಸಾಧಿಸಲಾಗಿರುವ ಉತ್ತಮ ಅಂಶಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಮೇಲೆ ತಿಳಿಸಿರುವ ಸಲಹೆಗಳನ್ನು ಪಾಲಿಸಲು ಸಾರ್ವಜನಿಕರು ಹಾಗೂ ಸಭೆ / ಸಮಾರಂಭಗಳ ಆಯೋಜಕರಿಗೆ ಈ ಮಾಹಿತಿಯನ್ನು ನಿಖರವಾಗಿ ಪ್ರಚುರಪಡಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ / ಜಿಲ್ಲೆಗಳ ಆರೋಗ್ಯ ಪ್ರಾಧಿಕಾರಗಳಿಗೆ ಹಾಗೂ ಬಿ.ಬಿ.ಎಂ.ಪಿ ಆರೋಗ್ಯ ಪ್ರಾಧಿಕಾರಗಳಿಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. 

ಇದಕ್ಕೂ ಮುನ್ನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ಈಗಾಗಲೇ ಕೋವಿಡ್‌ ಸೋಂಕು ಹರಡುವ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದ್ದಾರೆ. ವಿವಿಧ ದೇಶಗಳಲ್ಲಿರುವ ಸೋಂಕು ಹರಡುವಿಕೆ ಪ್ರಮಾಣ ಮತ್ತು ಅದರಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಇದರ ಆಧಾರದಲ್ಲಿ ಐಎಲ್ ಐ ಹಾಗೂ ಸಾರಿ ಇರುವ ಎಲ್ಲ ಪ್ರಕರಣಗಳನ್ನು ಕಡ್ಡಾಯ ಟೆಸ್ಟಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. ಜೊತೆಗೆ ಒಳಾಂಗಣ ಪ್ರದೇಶದ ಮಾಸ್ಕ್  ಧರಿಸಲು ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು. 

click me!