Belagavi: ಪಂಚಮಸಾಲಿ ಮೀಸಲಿಗಾಗಿ ಇಂದು ‘ವಿರಾಟ ಪಂಚಶಕ್ತಿ ಸಮಾವೇಶ’: ಕೂಡಲ ಶ್ರೀ

By Govindaraj S  |  First Published Dec 22, 2022, 8:58 AM IST

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಎಲ್ಲರೂ ಹೋರಾಟ ಮಾಡಿದ ಪರಿಣಾಮ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೀಸಲಾತಿ ಕೊಟ್ಟರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸನ್ಮಾನ ಮಾಡುತ್ತೇವೆ. 


ಬೆಳಗಾವಿ (ಡಿ.22): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಎಲ್ಲರೂ ಹೋರಾಟ ಮಾಡಿದ ಪರಿಣಾಮ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೀಸಲಾತಿ ಕೊಟ್ಟರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸನ್ಮಾನ ಮಾಡುತ್ತೇವೆ. ಇಲ್ಲದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಸುವರ್ಣವಿಧಾನಸೌಧದ ಬಳಿ ಬಸ್ತವಾಡ ಬಳಿಯ ಗುರುವಾರ ನಡೆಯುವ ವಿರಾಟ ಪಂಚಶಕ್ತಿ ಸಮಾವೇಶದ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಶಿಕ್ಷಣ ಮತ್ತು ಉದ್ಯೋಗದಲ್ಲಿ ನಮ್ಮ ಸಮುದಾಯ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ಇತಿಹಾಸದಲ್ಲಿ ಇಷ್ಟೊಂದು ಸುದೀರ್ಘವಾಗಿ ಹೋರಾಟ ಮಾಡಿದ್ದೇವೆ. ಹೋರಾಟ ಗುರುವಾರ ತಾರ್ಕಿಕ ಅಂತ್ಯ ಕಾಣಲಿದೆ ಎಂದರು. ಡಿ.22 ರಂದು ಬೆಳಗ್ಗೆ 11 ಗಂಟೆಗೆ ವಿರಾಟ ಪಂಚಶಕ್ತಿ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ನಾಡಿನ ಮೂಲೆ ಮೂಲೆಗಳಿಂದ 25 ಲಕ್ಷ ಜನರು ಆಗಮಿಸುತ್ತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅದಕ್ಕೆ ವಿರಾಟ ಪಂಚಶಕ್ತಿ ಸಮಾವೇಶ ಎಂಬ ಹೆಸರಿಡಲಾಗಿದ್ದು, ವೇದಿಕೆಗೆ ಕಿತ್ತೂರು ಚನ್ನಮ್ಮ ಹೆಸರು, ಮುಖ್ಯದ್ವಾರಕ್ಕೆ ಬೆಳವಡಿ ಮಲ್ಲಮ್ಮನ ಹೆಸರಿಡಲಾಗಿದೆ ಎಂದರು. 

Latest Videos

undefined

ಮೀಸಲಾತಿ ಸಿಗುವವರೆಗೂ ಹೋರಾಟ: ಬಸವಜಯ ಮೃತ್ಯುಂಜಯ ಶ್ರೀ

ಸಮಾವೇಶದ ಒಳಗಾಗಿ ಮೀಸಲಾತಿ ಘೋಷಣೆ ಮಾಡಿದರೆ, ಇದೇ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಡೈಮಂಡ್‌ ಕಲ್ಲು ಸಕ್ಕರೆ ತುಲಾಭಾರ ಮಾಡುತ್ತೇವೆ. ಹಸಿರುಶಾಲು ಹಾಕಿ, ಹಳದಿ ರೂಮಾಲು ಸುತ್ತಿ ಸನ್ಮಾನಿಸುತ್ತೇವೆ ಎಂದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮಗೆ ಮೀಸಲಾತಿ ಸಿಗುವ ವಿಶ್ವಾಸವಿದೆ. ಮೀಸಲಾತಿ ಕೊಟ್ಟರೆ ಸನ್ಮಾನದ ಜೊತೆ ಗೌರವ, ಇಲ್ಲವೆಂದರೆ ಅಪಮಾನ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಬೊಮ್ಮಾಯಿ ಅವರೇ ಡಿ.19ರ ಗಡುವು ಕೊಟ್ಟಿದ್ದರು. 19ರ ಒಳಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ತರಿಸಿಕೊಳುತ್ತೇನೆ ಎಂದಿದ್ದರು. ಅವರೇ ಕೊಟ್ಟಮಾತನ್ನು ತಿರುಚಿ ಬಂದಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ನಿರಾಸೆ ಆದರೂ ಯತ್ನಾಳ್‌ ಅವರ ಮಾತಿನಲ್ಲಿ ಸರ್ಕಾರದ ಮೇಲೆ ವಿಶ್ವಾಸದ ಮಾತನ್ನಾಡಿದ್ದಾರೆ. ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಈ ಸಮಾಜದ ಋುಣವನ್ನು ತೀರಿಸುತ್ತಾರೆ ಎನ್ನುವ ಭರವಸೆಯಲ್ಲಿ ನಾವಿದ್ದೇವೆ. ಮೀಸಲಾತಿ ಕೊಟ್ಟರೆ ಸನ್ಮಾನ. ಇಲ್ಲವಾದರೆ ಅವಮಾನ. ಅವಮಾನ ಅಂದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ಖಚಿತ ಎಂದರು. ಟೋಲ್ ಬ್ಲಾಕ್‌ ಮಾಡುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಸಮಾವೇಶಕ್ಕೆ ಹೋಗಬೇಡಿ ಎಂದು ಕೆಲವರು ಹೇಳುತ್ತಿದ್ದಾರಂತೆ. 

ಯಾರನ್ನಾದರೂ ಅಡ್ಡಿಪಡಿಸಿದರೆ, ಜನರು ಸಹನೆಯನ್ನ ಕಳೆದುಕೊಂಡು ಉಗ್ರ ರೂಪ ಪಡೆದುಕೊಳ್ಳುತ್ತಾರೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿದರೆ ಏನಾದರೂ ಅನಾಹುತ ಆದರೆ ಅದಕ್ಕೆ ಸರ್ಕಾರವೇ ಕಾರಣ. ಹಿಂದೆ ಡಿಸಿಎಂ ಆದವರು ಮೀಸಲಾತಿಗೆ ಅಡ್ಡಿಪಡಿಸುತ್ತಿದ್ದಾರೆ. ಸಮಯ ಬಂದಾಗ ಅವರು ಯಾರು ಅಂತ ಹೇಳುತ್ತೇನೆ ಎಂದ ಅವರು, ಮೀಸಲಾತಿ ಕೊಡದೇ ಅವರು ಹೇಗೆ ಹೋಗುತ್ತಾರೆ, ಹೋಗಲಿ ನೋಡೋಣ. ಮುಂದೆ ಕೆಲವೇ ತಿಂಗಳಲ್ಲಿ ಚುನಾವಣೆ ಇದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ದೊಡ್ಡಗೌಡರ, ರೋಹಿಣಿ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಪ್ರಯಾಣಿಕರಿಗೆ ತಟ್ಟಲಿದೆ ಪ್ರತಿಭಟನೆ ಬಿಸಿ: ಇಂದು ಬೆಳಗಾವಿಯಲ್ಲಿ ವಿರಾಟ ಪಂಚಶಕ್ತಿ ಸಮಾವೇಶ ಹಿನ್ನೆಲೆಯಲ್ಲಿ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪ್ರತಿಭಟನೆ ಬಿಸಿ ತಟ್ಟಲಿದೆ. ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಕೇಶ್ವರ  - ಎಂ.ಕೆ.ಹುಬ್ಬಳ್ಳಿ ಮಧ್ಯೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಲಘು ವಾಹನಗಳಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕೊಲ್ಲಾಪುರದಿಂದ ಆಗಮಿಸುವ ವಾಹನಗಳು ಸಂಕೇಶ್ವರದಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. 

ಕರ್ನಾಟಕಕ್ಕೆ ನೀರು ನಿಲ್ಲಿಸಲು ಯಾರಪ್ಪನಿಂದಲೂ ಆಗದು: ಸಚಿವ ಗೋವಿಂದ ಕಾರಜೋಳ

ಹುಬ್ಬಳ್ಳಿ - ಧಾರವಾಡದಿಂದ ಆಗಮಿಸುವ ವಾಹನಗಳು ಎಂ.ಕೆ.ಹುಬ್ಬಳ್ಳಿಯಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ಸಂಕೇಶ್ವರ - ಹುಕ್ಕೇರಿ - ಗೋಕಾಕ - ಸವದತ್ತಿ ಮಾರ್ಗವಾಗಿ ಧಾರವಾಡಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹುಬ್ಬಳ್ಳಿ ಧಾರವಾಡದಿಂದ ಬರುವ ವಾಹನಗಳು ಎಂ.ಕೆ.ಹುಬ್ಬಳ್ಳಿ - ಬೈಲಹೊಂಗಲ - ನೇಸರಗಿ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಂ.ಕೆ.ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ ಆದ್ರೆ ಕಿತ್ತೂರು - ಬೀಡಿ - ನಂದಗಡ ಮಾರ್ಗವಾಗಿ ಬೆಳಗಾವಿ ನಗರ ಪ್ರವೇಶಕ್ಕೆ ಅವಕಾಶವಿದ್ದು, ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. 

ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆ: 2ಎ ಮೀಸಲಾತಿಗಾಗಿ ಇಂದು ಪಂಚಶಕ್ತಿ ವಿರಾಟ್ ಸಮಾವೇಶ ಹಮ್ಮಿಕೊಂಡಿದ್ದು, ವಿರಾಟ್ ಸಮಾಜಕ್ಕೆ ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಜನ ಆಗಮಿಸಲಿದ್ದಾರೆ. ಹೀಗಾಗಿ ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮನೆ ಮನೆಗಳಿಂದ ರೊಟ್ಟಿ ಸಂಗ್ರಹ ಮಾಡಿ ಒಟ್ಟು ಐದು ಲಕ್ಷ ರೊಟ್ಟಿ ಸಂಗ್ರಹಿಸಲಾಗಿದೆ. 100 ಎಕರೆ ಪ್ರದೇಶದಲ್ಲಿ ಪಂಚಮಸಾಲಿಗಳ ಸಮಾವೇಶಗೊಳ್ಳಲಿದ್ದು, ಬೆಳಗಾವಿ ಸುವರ್ಣ ವಿಧಾನಸೌಧ ಹೊರ ವಲಯದ ರಾಘವೇಂದ್ರ ಬಡಾವಣೆಯಲ್ಲಿ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಗೆ ವರೆಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿಭಟನಾ ಸ್ಥಳದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.

click me!