
ಬೆಂಗಳೂರು (ಜು.25): ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು /ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಪ್ರಯೋಗ ಶಾಲೆಗಳಲ್ಲಿ ನಡೆಸುವ ಕೋವಿಡ್ ಸೇರಿ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಗಳನ್ನು ಪತ್ತೆ ಹಚ್ಚಲು ನಡೆಸಲಾಗುವ INFLUENZA PANEL TEST ದರವನ್ನು 1,700 ರೂ.ಗೆ ಮಿತಿಗೊಳಿಸಿ ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು / ಆಸ್ಪತ್ರೆಗಳು, ಖಾಸಗಿ ಪ್ರಯೋಗಶಾಲೆಗಳು / ಡಯಾಗೋಸ್ಟಿಕ್ ಲ್ಯಾಬೊರೇಟರಿಗಳು ಈ ಮೇಲೆ ತಿಳಿಸಿದ INFLUENZA PANEL TEST ದರವನ್ನು ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಪಾಲಿಸುವುದು ಹಾಗೂ ಎಲ್ಲಾ SARI ಮತ್ತು ILI ಪ್ರಕರಣಗಳನ್ನು IHIP Portal ನಲ್ಲಿ ಖಡ್ಡಾಯವಾಗಿ ದಾಖಲಿಸುವುದು. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಧಿನಿಯಮದಡಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಭಾರತ ಸರ್ಕಾರದಿಂದ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಪರೀಕ್ಷೆಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ, ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು / ಪ್ರಯೋಗ ಶಾಲೆಗಳು ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಎಲ್ಲಾ SARI ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ನಡೆಸುವುದು ಮತ್ತು ILI ಪ್ರಕರಣದ ಶೇ.5 ರಷ್ಟನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲು ಸೂಚಿಸಿರುತ್ತಾರೆ. ಆದರೆ, ರಾಜ್ಯದ ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು, ಖಾಸಗಿ ಪ್ರಯೋಗ ಶಾಲೆಗಳು, ಸಾಮಾನ್ಯ ಜ್ವರಕ್ಕೂ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಪಡೆದು SRF IDಯನ್ನೂ ಸಹ ಸೃಜಿಸದೇ INFLUENZA PANEL ಕಿಟ್ ಬಳಸಿ ಅವಶ್ಯವಿಲ್ಲದ ಪರೀಕ್ಷೆಗಳನ್ನು 8,000 ರೂ.ಗಳಿಂದ 10,000 ರೂ. ಹಣ ಪಡೆದು ಪರೀಕ್ಷೆ ನಡೆಸಿ, ವರದಿಯನ್ನು ರೋಗಿಗಳಿಗೆ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.
ಜ್ವರ ಅಥವಾ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಿಗಳಿಗೆ, ಕೆಲವು ಖಾಸಗಿ ಆಸ್ಪತ್ರೆಗಳು ರೋಗ ನಿರ್ಣಯಕ್ಕಾಗಿ INFLUENZA PANEL ಪರೀಕ್ಷೆಯನ್ನು ದಿನನಿತ್ಯದ ಪರೀಕ್ಷೆಯಾಗಿ ಮಾಡುತ್ತಾರೆ. ಆರೋಗ್ಯ ಇಲಾಖೆ ನಿರ್ದೇಶಕರ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು / ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಪ್ರಯೋಗ ಶಾಲೆಗಳಲ್ಲಿ ನಡೆಸುವ ಕೋವಿಡ್ ಸೇರಿ ಯಾವುದೇ ರೀತಿಯ ವೈರಲ್ ಸೋಂಕುಗಳಿರುವ ರೋಗಗಳನ್ನು ಪತ್ತೆ ಹಚ್ಚಲು ನಡೆಸಲಾಗುವ INFLUENZA PANEL TEST ದರವನ್ನು 1,700 ರೂ. ಮಿತಿಗೊಳಿಸಲು ನಿರ್ಣಯಿಸಲಾಗಿರುತ್ತದೆ.
ಅದರಂತೆ, ರೋಗಿಗಳು ಅತಿಯಾದ ಶುಲ್ಕಕ್ಕೆ ಒಳಗಾಗದಂತೆ ಮತ್ತು ರಾಜ್ಯದಾದ್ಯಂತ ಕೈಗೆಟುಕುವ ದರದಲ್ಲಿ INFLUENZA PANEL ವೈರಸ್ ಪರೀಕ್ಷೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಶುಲ್ಕವನ್ನು ಪ್ರಮಾಣೀಕರಿಸುವುದು ಮತ್ತು ಇನ್ನು ಮುಂದೆ ಎಲ್ಲಾ SARI ಮತ್ತು ILI ಪ್ರಕರಣಗಳನ್ನು IHIP Portal ನಲ್ಲಿ ಕಡ್ಡಾಯವಾಗಿ ದಾಖಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಈ ಪ್ರಸ್ತಾವನೆ ಅನ್ವಯ ದರ ಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ