ಕೆಪಿಎಸ್‌ಸಿ ಅಧ್ಯಕ್ಷತೆಗೆ ಷಡಕ್ಷರಿ, ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥ

By Kannadaprabha NewsFirst Published Jan 27, 2023, 11:47 AM IST
Highlights

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಷಡಕ್ಷರಿಸ್ವಾಮಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ 2019ರಲ್ಲಿ ಹೊರಡಿಸಿದ್ದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದೆ.

ಬೆಂಗಳೂರು (ಜ.27): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನಕ್ಕೆ ಷಡಕ್ಷರಿಸ್ವಾಮಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ 2019ರಲ್ಲಿ ಹೊರಡಿಸಿದ್ದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದೆ. ಈ ಕುರಿತು ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಿಚಾರಣೆಗೆ ಹಾಜರಾಗಿ, ಸದ್ಯ ಷಡಕ್ಷರಿ ಸ್ವಾಮಿ ಕೆಪಿಎಸ್‌ಸಿ ಅಧ್ಯಕ್ಷರಾಗಿಲ್ಲ. ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ. ಇದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರ ಪರ ವಕೀಲ ಎಸ್‌.ಉಮಾಪತಿ ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ 2016ರ ಜ.21ರಂದು ಹೊರಡಿಸಿರುವ ಆದೇಶ ಜಾರಿ ಕುರಿತಂತೆ ಅರ್ಜಿದಾರರು ಪರ್ಯಾಯ ಪರಿಹಾರ ಕ್ರಮ ಕೈಗೊಳ್ಳಬಹುದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಅಂಗವಿಕಲರಿಗೆ ಲಿಪಿಕಾರರ ಸೌಲಭ್ಯಕ್ಕೆ ಮಾರ್ಗಸೂಚಿ
ದೃಷ್ಟಿಮಾಂದ್ಯತೆ, ಚಲನವಲನ ವೈಕಲ್ಯ ಹಾಗೂ ಮೆದುಳಿನ ಪಾಶ್ರ್ವ ಅಂಗವಿಕಲತೆ ಮತ್ತಿತರ ಅಂಗವಿಲಕತೆ ಹೊಂದಿರುವ ನೌಕರರು/ಸಿಬ್ಬಂದಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಇಲಾಖಾ ಪರೀಕ್ಷೆಗಳಿಗೆ ಲಿಪಿಕಾರರ ಸೇವೆಯನ್ನು ಒದಗಿಸಲು ಹೊಸದಾಗಿ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ.

BBMP Recruitment 2023: ಬಿಬಿಎಂಪಿಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016 ಕಲಂ 2 (ಆರ್‌)ಅಡಿಯಲ್ಲಿ ವ್ಯಾಖ್ಯಾನಿಸಿರುವಂತೆ ಎದ್ದು ಕಾಣುವ ಅಂಗವಿಕಲತೆ ಹೊಂದಿರುವ ಯಾವುದೇ ಸರ್ಕಾರಿ ನೌಕರರು ಲಿಪಿಕಾರರ ಸೌಲಭ್ಯವನ್ನು ಒದಗಿಸಬೇಕೆಂದು ಇಚ್ಛೆಪಟ್ಟಲ್ಲಿ ಆತನಿಗೆ ಆ ಸೌಲಭ್ಯ ಒದಗಿಸಬೇಕು. ಅದೇ ರೀತಿ ಬರೆಯಲು ದೈಹಿಕ ಅಸಮರ್ಥತೆ ಹೊಂದಿದ್ದಾರೆ ಎಂದು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದಲ್ಲಿ ಅಂತಹ ನೌಕರನಿಗೆ ಲಿಪಿಕಾರರ ಸೌಲಭ್ಯ ಒದಗಿಸಬೇಕು. ಲಿಪಿಕಾರ ಮತ್ತು ಅಂಗವಿಕಲ ನೌಕರನ ನಡುವೆ ನಡೆಯುವ ಸಂವಾದವು ಪರೀಕ್ಷಾ ಕೊಠಡಿಯಲ್ಲಿನ ಶಾಂತಿಗೆ ಭಂಗ ತರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಬೀದರ್‌ನ ಚೀನಾ ಡಾಕ್ಟರ್‌ಗೆ ಸರ್ಕಾರಿ ಹುದ್ದೆ ಇಲ್ಲ: ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಇಲಾಖಾ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಕೆಪಿಎಸ್‌ಸಿ ಈ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.

click me!