ಎತ್ತಿನಹೊಳೆ ಯೋಜನೆ: ಹಾಸನ, ಚಿಕ್ಕಮಗಳೂರಿಗೆ ನೀರು; ಕೋಲಾರ, ಚಿಕ್ಕಬಳ್ಳಾಪುರಕ್ಕೆ ಖಾಲಿ ಚೊಂಬು?

By Sathish Kumar KH  |  First Published Sep 5, 2024, 4:46 PM IST

ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದ್ದರೂ, ಚಿಕ್ಕಬಳ್ಳಾಪುರ ಮತ್ತು ಕೋಲಾರದಂತಹ ಬರಪೀಡಿತ ಜಿಲ್ಲೆಗಳಿಗೆ ನೀರು ತಲುಪುತ್ತದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. 


ವರದಿ -  ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಬಳ್ಳಾಪುರ (ಸೆ.05): ಗೌರಿ ಗಣೇಶ ಹಬ್ಬಕ್ಕೆ ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡೋದಾಗಿ ಹೇಳಿದ್ದು, ಚಾಲನೆ ನೀಡಲು ಎಲ್ಲಾ ಸಿದ್ಥತೆಗಳನ್ನು ಮಾಡಿಕೊಂಡಿದೆ. ಆದರೆ ಉದ್ದೇಶಿತ ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಸಿಗುತ್ತೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿದೆ.

Tap to resize

Latest Videos

undefined

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಯಾವುದೇ ನದಿ ಮೂಲಗಳಿಲ್ಲದೇ ಮಳೆಯನ್ನು ಆಶ್ರಯಿಸಿರುವ ಜಿಲ್ಲೆಗಳಾಗಿವೆ. ಈ ಜಿಲ್ಲೆಗಳಲ್ಲಿ ಅಂತರ್ಜಲಮಟ್ಟ ಪಾತಾಳಕ್ಕಿಳಿದಿದ್ದು, ಫ್ಲೋರೈಡ್, ನೈಟ್ರೇಟ್, ಆರ್ಸೆನಿಕ್, ಹಿರೇನಿಯಂ ಅಂಶಗಳಿಂದ ಕೂಡಿರೋ ನೀರನ್ನು ಜನರು ಕುಡಿಯಲು ಬಳಸುತ್ತಿದ್ದಾರೆ. ಹೀಗಾಗಿ, ಈ ಭಾಗಕ್ಕೆ ಶಾಶ್ವತ ನೀರಾವರಿಗಾಗಿ ನಡೆಸಿದ ಹೋರಾಟದ ಫಲವಾಗಿಯೇ ಹುಟ್ಟಿದ ಕೂಸೇ ಎತ್ತಿನಹೊಳೆ ಯೋಜನೆ.

ಕಳೆದ 15 ವರ್ಷಗಳ ಹಿಂದೆ ಎತ್ತಿನ ಹೊಳೆ ಎಂಬ ನೀರಾವರಿ ಯೋಜನೆ ಹೆಸರು ಕೇಳಿಬಂದರೂ 2014 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಕನಸಿನ ಕೂಸು ಎತ್ತಿನಹೊಳೆ ಅಂದರೆ ತಪ್ಪಾಗುವುದಿಲ್ಲ. 2014ರಿಂದ ಶುರುವಾದ ಈ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಯೋಜನೆಯ ವೆಚ್ಚ 8,300 ಕೋಟಿ ರೂ. ಇದ್ದದ್ದು ಈಗ 23,251 ಕೋಟಿ ರೂ.ಗೆ ಹೆಚ್ಚಳವಾಗಿದೆ. ವಿಶೇಷವೆಂದರೆ ಚಿಕ್ಕಬಳ್ಳಾಪುರ, ಕೋಲಾರ, ಜಿಲ್ಲೆಯಲ್ಲಿ ಈ ಯೋಜನೆಯ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲೆ ನಡದೇ ಇಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹಾಗೂ ಗೌರಿಬಿದನೂರು ಬಳಿ ಕೆಲವು ಕಡೆ ಪೈಪ್ ಲೈನ್ ಅಳವಡಿಸಲಾಗಿದೆ. ಇನ್ನು ನೀರನ್ನು ಲಿಫ್ಟ್ ಮಾಡಬೇಕಾದ ಬೈರಗೊಂಡ್ಲು ಜಲಾಶಯದ ಕಾಮಗಾರಿ ಮುಗಿದಿಲ್ಲ. ಇಷ್ಟೆಲ್ಲಾ ಇದ್ದರೂ ಈಗ ಸರ್ಕಾರ ಹಾಸನ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ. ಮೂಲ ಡಿಪಿಆರ್ ನಲ್ಲಿದ್ದ ಈ ಯೋಜನೆಯ ಪಥವನ್ನೆ ಬದಲಿಸಿರುವ ಸರ್ಕಾರ, ಬಯಲುಸೀಮೆ ಜಿಲ್ಲೆಗಳ ನೀರಾವರಿ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿದೆ.

ಎತ್ತಿನಹೊಳೆ ಯೋಜನೆ ಕಾಂಗ್ರೆಸ್ ಸರ್ಕಾರದ ಭಗೀರಥ ಕೆಲಸ: ಶಿವಲಿಂಗೇಗೌಡ

15 ವರ್ಷಗಳ ಹಿಂದೆ ಹುಟ್ಟಿದ ಎತ್ತಿನಹೊಳೆ ಯೋಜನೆ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರನ್ನು ಒದಗಿಸುವ ಉದ್ದೇಶದಿಂದಲೇ ಅಂದಿನ ಕೇಂದ್ರ ಸಚಿವರಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರು ಈ ಭಾಗಕ್ಕೆ ನೀರಾವರಿ ಒದಗಿಸಬೆಕೇಂಬ ಉದ್ದೇಶದಿಂದ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಈ ಭಾಗಕ್ಕೆ ಹರಿಸಲು ಎತ್ತಿನಹೊಳೆ ಯೋಜನೆ ರೂಪಿಸಿದ್ದರು. 2014ರಲ್ಲಿ ಈ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯ ಸಾನಿಧ್ಯದಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಬಳಿಕ ಈ ಯೋಜನೆಯನ್ನು ವಿಸ್ತರಣೆ ಮಾಡುತ್ತಲೇ ಬರಲಾಗಿದೆ. 

24 ಟಿಎಂಸಿ ಗಾತ್ರದ ನೀರಾವರಿ ಯೋಜನೆ:  ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ಅಂದಾಜಿಸಿದ್ದು, ಮಳೆ ನಿರೀಕ್ಷೆ ಪ್ರಮಾಣದಲ್ಲಿ ಆದರೆ ಮಾತ್ರ ಇಷ್ಟೊಂದು ನೀರು ಸಿಗಲಿದೆ. 24 ಟಿಎಂಸಿ ನೀರಿನ ಪೈಕಿ, ಚಿಕ್ಕಬಳ್ಳಾಪುರಕ್ಕೆ 2.75 ಟಿಎಂಸಿ, ಕೋಲಾರ ಜಿಲ್ಲೆಗೆ 2.25 ಟಿಎಂಸಿ ಸೇರಿ ಒಟ್ಟು 5 ಟಿಎಂಸಿ ನೀರು ಹಂಚಿಕೆ ಮಾಡೋದಾಗಿ ಹೇಳಲಾಗಿತ್ತು. ಉಳಿದ ನೀರನ್ನು ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತದೆ.

527 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ : ಕುಡಿಯುವ ನೀರಿನ ಉದ್ದೇಶಕ್ಕಾಗಿಯೇ ಎತ್ತಿನಹೊಳೆ ಯೋಜನೆಯನ್ನು ಜಾರಿಗೊಳಿಸಿದ್ದು, 7 ಜಿಲ್ಲೆಗಳ ವ್ಯಾಪ್ತಿಯ 527 ಕೆರೆಗಳನ್ನು ತುಂಬಿಸುವ ಉದ್ದೇಶವನ್ನು ಹೊಂದಲಾಗಿದೆ. ಆದರೆ, ಈಗಾಗಲೇ ಎತ್ತಿನಹೊಳೆ ಯೋಜನೆಗೆ ಸರ್ಕಾರ ಚಾಲನೆ ನೀಡಲು ಮುಂದಾಗಿದ್ದರೂ, ನೀರು ತುಂಬಿಸಬೇಕಾದ ಕೆರೆಗಳಲ್ಲಿ ಹೂಳೆತ್ತುವ ಕೆಲಸವನ್ನೇ ಅಧಿಕಾರಿಗಳು ಆರಂಭಿಸಿಲ್ಲ. ಕೆರೆಗಳಿಗೆ ಕೇವಲ ಪೈಪ್ ಲೈನ್  ಹಾಕಿ ಸುಮ್ಮನಾಗಿದ್ದಾರೆ ಎಂಬ ಆರೋಪವಿದೆ.

ವಿವಾದಿತ ಎತ್ತಿನಹೊಳೆ ಯೋಜನೆ ಗೌರಿಹಬ್ಬದ ದಿನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಬರದ ಜಿಲ್ಲೆಗಳಿಗೆ ನೀರು ಯಾವಾಗ ಬರುತ್ತೆ?
ಕೋಲಾರ, ಚಿಕ್ಕಬಳ್ಳಾಪುರ ಹಾಗೂ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ ಭಾಗದಲ್ಲಿ ನದಿ ನೀರಿನ ಮೂಲ ಇಲ್ಲ. ಬೋರ್‌ವೆಲ್‌ ನೀರು ವಿಷವಾಗಿರುವುದರಿಂದ ಇಲ್ಲಿನ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಈ ಭಾಗದ ಜನಕ್ಕೆ ಶಾಶ್ವತ ನೀರಾವರಿ ಒದಗಿಸುವ ಸಲುವಾಗಿ ಎತ್ತಿನಹೊಳೆ ಯೋಜನೆ ರೂಪಿಸಲಾಯಿತು. ಆದರೆ, ಈ ಭಾಗದಲ್ಲಿ ಇನ್ನೂ ಕಾಮಗಾರಿಯೇ ಶುರುವಾಗಿಲ್ಲ. ಅದಕ್ಕೂ ಮುಂಚೆ ನಿರಾವರಿ ವ್ಯವಸ್ಥೆ ಇರುವ ಜಿಲ್ಲೆಗಳಿಗೆ ಪುನಃ ನೀರು ಹರಿಸಲು ಸರ್ಕಾರ ಮುಂದಾಗಿದೆ. ಇದನ್ನು ನೋಡುತ್ತಿದ್ದರೆ, ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಎತ್ತಿನ ಹೊಳೆ ನೀರು ಗಗನ ಕುಸುಮವಾಗುತ್ತಾ ಎಂಬ ಅನುಮಾನ ಮೂಡತೊಡಗಿದೆ.

click me!