Asianet Suvarna News Asianet Suvarna News

ವಿವಾದಿತ ಎತ್ತಿನಹೊಳೆ ಯೋಜನೆ ಗೌರಿಹಬ್ಬದ ದಿನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿ ಹಬ್ಬದ ದಿನವಾದ ಸೆ.6ರಂದು ಏಳು ವಿಯರ್‌ಗಳ ಮೂಲಕ ನೀರು ಮೇಲೆತ್ತುವ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
 

Controversial Yettinahole project inaugurated by CM Siddaramaiah on Gauri Festival gvd
Author
First Published Sep 2, 2024, 6:47 AM IST | Last Updated Sep 2, 2024, 6:47 AM IST

ಬೆಂಗಳೂರು (ಸೆ.02): ರಾಜ್ಯದಲ್ಲಿ ಹಲವು ಕಾರಣಗಳಿಗೆ ವಿವಾದಕ್ಕೆ ಗುರಿಯಾಗಿದ್ದ ಹಾಗೂ ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಬಹು ನಿರೀಕ್ಷಿತ ಎತ್ತಿನ ಹೊಳೆ ಯೋಜನೆಯ ಏತ ಕಾಮಗಾರಿಗಳು ಕೊನೆಗೂ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿ ಹಬ್ಬದ ದಿನವಾದ ಸೆ.6ರಂದು ಏಳು ವಿಯರ್‌ಗಳ ಮೂಲಕ ನೀರು ಮೇಲೆತ್ತುವ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಯೋಜನೆಯ ಮೊದಲ ಹಂತವಾದ 8 ವಿಯರ್‌ಗಳ ಮೂಲಕ 28 ಟಿಎಂಸಿ ನೀರನ್ನು ಮೇಲೆತ್ತುವ ಲಿಫ್ಟ್‌ ಕಾಂಪೊನೆಂಟ್‌ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. 3ನೇ ಸಂಖ್ಯೆಯ ವಿಯರ್‌ ಹೊರತುಪಡಿಸಿ ಉಳಿದೆಲ್ಲವೂ ಸಿದ್ಧವಾಗಿದ್ದು, ಸೆ.6ರಂದು ಶುಕ್ರವಾರ 7 ವಿಯರ್‌ಗಳಿಂದ ನೀರು ಮೇಲೆತ್ತುವ ಮೂಲಕ ಎತ್ತಿನ ಹೊಳೆ ಮೊದಲ ಹಂತಕ್ಕೆ ಚಾಲನೆ ದೊರೆಯಲಿದೆ. ಶುಕ್ರವಾರ 3,000 ಕ್ಯೂಸೆಕ್‌ ಲಿಫ್ಟ್‌ ಸಾಮರ್ಥ್ಯದಲ್ಲಿ 1,500 ಕ್ಯೂಸೆಕ್‌ ನೀರನ್ನು ಲಿಫ್ಟ್‌ ಮಾಡಲಾಗುವುದು. ಬಳಿಕ 48 ಕಿ.ಮೀ. ತೆರೆದ ಕಾಲುವೆ ಮೂಲಕ ಸಾಗಿ ವೇದ ವ್ಯಾಲಿ ಮೂಲಕ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುವುದು ಎಂದು ತಿಳಿದುಬಂದಿದೆ.

ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ: ಸಂಸದ ಬೊಮ್ಮಾಯಿ

ಡಿಕೆಶಿ ಘೋಷಣೆ: ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಸೆ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮೊನ್ನೆಯಷ್ಟೇ ಯೋಜನೆಯ ಕಾಮಗಾರಿಗಳ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿದ್ದೆವು. ಈ ಯೋಜನೆಗಳ ವಿಚಾರವಾಗಿ ಅನೇಕ ಟೀಕೆಗಳು ಬರುತ್ತಿದ್ದವು. ಇದೀಗ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಕಾಲುವೆಗಳಿಗೆ ಹರಿಸುತ್ತಿದ್ದೇವೆ. ಈ ಯೋಜನೆ ಮಾರ್ಗದ ಮಧ್ಯೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಅವುಗಳನ್ನು ಬಗೆಹರಿಸಿದ್ದೇವೆ. ಈಗ ತಾತ್ಕಾಲಿಕವಾಗಿ ವಾಣಿ ವಿಲಾಸ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.

ಎಲ್ಲರೂ ಬಂದು ಸಾಕ್ಷಿಯಾಗಿ: ಈ ಯೋಜನೆಯ ಫಲಾನುಭವಿ ಜಿಲ್ಲೆಯ ಜನರು ನೀರನ್ನು ಎತ್ತುವ ದೃಶ್ಯ ಕಣ್ತುಂಬಿಕೊಳ್ಳಬಹುದು. ಅಲ್ಲಿ ಜಾಗ ಕಿರಿದಾಗಿದ್ದರೂ ಪೊಲೀಸರಿಗೆ ಹೇಳಿ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷಭೇದ ಮರೆತು ಎಲ್ಲ ನಾಯಕರು, ರೈತರಿಗೆ ಆಹ್ವಾನಿಸಲಾಗುವುದು. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಪವಿತ್ರವಾದ ಕಾರ್ಯಕ್ಕೆ ಬಂದು ಸಾಕ್ಷಿಯಾಗಬೇಕು ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು.

ಏನಿದು ಯೋಜನೆ?: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ, ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಬರಪೀಡಿತ ಜಿಲ್ಲೆಗಳಿಗೆ ನೀರು ತರುವ ಯೋಜನೆಯಿದು. ಮುಂಗಾರು ಅವಧಿಯಲ್ಲಿ (139 ದಿನಗಳು) 24.01 ಟಿಎಂಸಿ ಪ್ರವಾಹದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ತರಲಾಗುತ್ತದೆ. ಇಲ್ಲಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.05 ಟಿಎಂಸಿ ನೀರು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶ.

ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಮರುಪೂರಣ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.95 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡಲು ಉದ್ದೇಶಿಸಲಾಗಿದೆ.

ವೆಚ್ಚ ಎಷ್ಟು?: 23,252 ಕೋಟಿ ರು. ಮೊತ್ತದ ಈ ಯೋಜನೆಗೆ ಆಗಸ್ಟ್‌ ವೇಳೆಗೆ 16,152 ಕೋಟಿ ರು. ವೆಚ್ಚವಾಗಿದೆ ಎಂದು ತಿಳಿದು ಬಂದಿದೆ.

10 ವರ್ಷ ನಡೆದ ಕಾಮಗಾರಿ: 2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೇ ಹಂತದ ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳ ಕಾಲ ಅಡಚಣೆಗಳೇ ಇತ್ತು. ಪ್ರಸ್ತುತ ವಿಯರ್ 1,4 ಮತ್ತು 5 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-3ರ ವರೆಗೆ ಪೂರೈಸಿ ನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-4 ರ ಮುಖಾಂತರ ಗುರುತ್ವ ಕಾಲುವೆಗೆ ನೀರನ್ನು ಹರಿಸಲು ಯೋಜಿಸಲಾಗಿದೆ.

ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭ: ಮೊದಲ ದಿನ ಅಭಿಮನ್ಯು ಮೈಮೇಲೆ 520 ಕೆ.ಜಿ ಭಾರ

2027ಕ್ಕೆ ಯೋಜನೆ ಪೂರ್ಣ?: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2026-27ನೇ ಸಾಲಿನಲ್ಲಿ ಅಂದರೆ 2027ರ ಮಾ.31ಕ್ಕೆ ಪೂರ್ಣಗೊಳಿಸಲು ಸರ್ಕಾರ ಉದ್ದೇಶಿಸಿದೆ.

Latest Videos
Follow Us:
Download App:
  • android
  • ios