
ಬೆಂಗಳೂರು (ಆ.11): ಕಾಮಗಾರಿ ಬಿಲ್ ಬಾಕಿ ಬಿಡುಗಡೆಗೆ ಗುತ್ತಿಗೆದಾರರಿಂದ ಕಮಿಶನ್ ಕೇಳುತ್ತಿದ್ದಾರೆಂಬ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಸರ್ಕಾರದ ವಿವಿಧ ಸಚಿವರು, ಕಾಮಗಾರಿಗಳ ಕುರಿತು ನಡೆಯುತ್ತಿರುವ ತನಿಖಾ ವರದಿ ಬಂದ ಮೇಲೆ ಕಾನೂನು ಪ್ರಕಾರ ಬಿಲ್ ಬಾಕಿ ಬಿಡುಗಡೆ ಮಾಡಲಾಗುವುದು, ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ನ್ಯಾಯ ಕೊಡಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಗುತ್ತಿಗೆದಾರರು ಕೈಗೊಂಡ ವಿವಿಧ ಯೋಜನೆಗಳ ಕಾಮಗಾರಿಗಳ ಬಾಕಿ ಹಣ ಪಾವತಿಸುವಂತೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡಿರುವ ಟೀಕೆ, ಆರೋಪಗಳಿಗೆ ಪ್ರತ್ಯೇಕವಾಗಿ ಉತ್ತರಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ ಅವರು, ‘ಗುತ್ತಿಗೆದಾರರು ಕಮಿಶನ್ ಬಗ್ಗೆ ಆರೋಪ ಮಾಡುತ್ತಿಲ್ಲ. ಬದಲಾಗಿ ಕಾಮಗಾರಿ ಬಿಲ್ ಬಾಕಿ ವಿಳಂಬವಾಗುತ್ತಿದೆ ಎಂದಿದ್ದಾರೆ. ಸರ್ಕಾರದ 5 ಗ್ಯಾರಂಟಿ ಕಾರ್ಯಕ್ರಮಗಳಿಂದ ನಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತಿದೆ. ಈ ಯಶಸ್ಸು ನೋಡಲಾರದೇ ಪ್ರತಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ಗುತ್ತಿಗೆದಾರರಿಗೆ ರಾಹುಲ್ ಗಾಂಧಿ ಹಣ ಕೊಡಿಸಲಿ: ಬೊಮ್ಮಾಯಿ
ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕಾನೂನು ಪ್ರಕಾರ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ದೂರು ಕೊಟ್ಟಿದ್ದು, ಅವರಿಗೆ ನ್ಯಾಯ ಒದಗಿಸಬೇಕು. ಕೆಲಸಕ್ಕೆ ನ್ಯಾಯ, ಸರ್ಕಾರಕ್ಕೆ ನ್ಯಾಯ ಒದಗಿಸಬೇಕು. ಗುತ್ತಿಗೆದಾರರು ತಾವು ಮಾಡಿರುವ ಕಾಮಗಾರಿಗಳನ್ನು ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು.
ಗುತ್ತಿಗೆದಾರರು ಪ್ರತಿಪಕ್ಷ ನಾಯಕರ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪ್ರಚಾರಕ್ಕೆ ಯಾರೂ ಬೇಕಾದರೂ ಹೋಗಬಹುದು. ದೆಹಲಿಗೆ ಬರುವಂತೆ ಯಾರು ಕರೆಯುತ್ತಿದ್ದಾರೆ ಎಂಬುದು ಗೊತ್ತಿದೆ. ದೆಹಲಿಗೆ ಬಂದು ಹೇಳಿಕೆ ನೀಡುವಂತೆ ಹಾಗೂ ಮಾಧ್ಯಮಗಳ ಮುಂದೆ ಯಾರು ಕಳಿಸುತ್ತಿದ್ದಾರೆಂಬುದು ತಮಗೆ ಗೊತ್ತಿದೆ’ ಎಂದು ಉತ್ತರಿಸಿದರು.
ಬಿಬಿಎಂಪಿ: ಮುಂದುವರಿದ ರಾಜ್ಯ ಗುತ್ತಿಗೆದಾರರ ಕಮಿಷನ್ ಗದ್ದಲ
ಬಿಲ್ ನೀಡದೇ ಕಮಿಶನ್ ಕೇಳಿದ ಆರೋಪ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ತನಿಖೆಗೆ ಸಮಿತಿ ರಚನೆಯಾಗಿದೆ. ಸಮಿತಿ ವರದಿ ಬಂದ ಮೇಲೆ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುತ್ತದೆ. ಕಾಮಗಾರಿಗಳ ಸಂಬಂಧ ಗುತ್ತಿಗೆದಾರರು ಬಿಲ್‌ಗಳನ್ನೇ ನೀಡಿಲ್ಲ. ಆಗಲೇ ಕೆಲವರು ಕಮಿಶನ್ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿಯವರು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಆದರೆ ಆದಷ್ಟುಬೇಗ ಗುತ್ತಿಗೆದಾರರ ಹಣ ಬಿಡುಗಡೆಯಾಗಬೇಕು ಎಂದು ಹೇಳುತ್ತೇನೆ. ಬಿಜೆಪಿ ಮೇಲಿದ್ದ ಶೇ. 40 ರಷ್ಟುಕಮಿಷನ್ ಆರೋಪ ಸತ್ಯ, ಆದರೆ ಈಗ ಮಾಡುತ್ತಿರುವ ಶೇ. 15ರಷ್ಟುಕಮಿಶನ್ ಆರೋಪ ಸುಳ್ಳು’ ಎಂದು ಉತ್ತರಿಸಿದರು.
ಭ್ರಷ್ಟಾಚಾರ ಆರೋಪ ಮಾಡುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಾವು ಭ್ರಷ್ಟಾಚಾರ ಆರೋಪ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಅವರ ಆರೋಪ ಇರುವುದು ಬಿಲ್ ಪಾವತಿ ವಿಳಂಬ ಆಗುತ್ತಿದೆ, ಬೇಗ ಪಾವತಿ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿಗಳು ಕಾಮಗಾರಿ ಪರಿಶೀಲನೆ ಮಾಡಿ ಬಿಲ್ ಪಾವತಿ ಮಾಡುತ್ತೇವೆ, ಸಹನೆಯಿಂದ ಇದ್ದರೆ ಬಿಲ್ ಪಾವತಿ ಮಾಡಲಾಗುವುದು, ಮೂರನೇ ಪಕ್ಷಗಾರರ ವರದಿ ಇದ್ದರೆ ಬಿಲ್ ಬಿಡುಗಡೆ ಮಾಡುವುದಾಗಿ ಹೇಳಿದ ಮೇಲೆ ಸಮಸ್ಯೆ ಏನು ಎಂದು ಪ್ರಶ್ನಿಸಿದರು
ಬಿಜೆಪಿ ಮುಖಂಡರ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಚುನಾವಣೆ ವೇಳೆ ಟೆಂಡರ್ ಕರೆದಿದ್ದರು. ಅವರ ಕಾಲದಲ್ಲಿ ಇದ್ದ ಕೆಲವು ಅಧಿಕಾರಿಗಳು ಈಗಲೂ ಅಲ್ಲಿಯೇ ಇದ್ದಾರೆ. ಹಳೆ ದಿನಾಂಕಗಳಿಗೆ ಬಿಲ್ ಮಾಡುತ್ತಾರೆ. ಸಾಕಷ್ಟುಉದಾಹರಣೆಗಳು ತಮ್ಮ ಇಲಾಖೆಯಲ್ಲಿ ಇವೆ. ಇಂತಹವುಗಳನ್ನು ತಮ್ಮ ಇಲಾಖೆಯಲ್ಲಿ ನಿಲ್ಲಿಸಿದ್ದೇನೆ. ಇತ್ತೀಚೆಗೆ ಕೆಲವು ಗುತ್ತಿಗೆದಾರರು ನಮ್ಮ ಬಳಿ ಬಂದಾಗ ಕಾನೂನು ಪ್ರಕಾರ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದೇನೆ’ ಎಂದರು.
ಜನಪ್ರಿಯತೆ ಹೆಚ್ಚಾದ್ದರಿಂದ ಆರೋಪ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜನಪ್ರಿಯತೆ ಹೆಚ್ಚಾಗಿರುವುದರಿಂದ ಇಂತಹ ಆರೋಪ ಬಂದಿರಬಹುದು, ಬಿಲ್ ಬಿಡುಗಡೆಯಾಗಿಲ್ಲ ಎಂದು ಆರೋಪ ಮಾಡುತ್ತಿದ್ದಾರೆಯೇ ಹೊರತು ಕಮಿಷನ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಕೆಲವು ಗುತ್ತಿಗೆದಾರರು ಮಾಡಿರುವ ಆರೋಪ ಸುಳ್ಳು. ಸಚಿವರ ವಿರುದ್ಧ ಬರೆದ ಪತ್ರ ನಕಲಿ ಎಂದು ಗೊತ್ತಾಗಿದೆ. ಅದೇ ರೀತಿ ಸಹ ಈ ಆರೋಪ ಸಹ ಸುಳ್ಳು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ