* ಮುಷ್ಕರ ನಡೆಸಿ ಕೆಲಸ ಕಳಕೊಂಡಿದ್ದವರ ಪುನರ್ ನೇಮಕಕ್ಕೆ ಶೀಘ್ರ ಆದೇಶ: ಶ್ರೀರಾಮುಲು
* ಕೋಡಿಹಳ್ಳಿ ಹೊರಗಿಟ್ಟು, ಅನಂತ ಸುಬ್ಬರಾವ್ ಟೀಂ ಜತೆ ಸಂಧಾನ ನಡೆಸಿದ ಸಾರಿಗೆ ಸಚಿವ
* ವಜಾಗೊಂಡ 4200 ಸಾರಿಗೆ ನೌಕರರ ಮರುನೇಮಕ
ಬೆಂಗಳೂರು(ಸೆ.22): ಸಾರಿಗೆ ನೌಕರರ ಮುಷ್ಕರದ ವೇಳೆ ಸೇವೆಯಿಂದ ವಜಾ ಹಾಗೂ ಅಮಾನತುಗೊಂಡಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯ ಸುಮಾರು 4,200 ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿದೆ. ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸಾರಿಗೆ ನೌಕರರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು ನೌಕರರ ಸಮಸ್ಯೆಗಳ ಬಗ್ಗೆ ಆಲಿಸಿದರು. ಮುಷ್ಕರದ ವೇಳೆ ವಜಾ ಹಾಗೂ ಅಮಾನತುಗೊಂಡಿರುವ ನೌಕರರ ಪುನರ್ ನೇಮಕ ಹಾಗೂ ವರ್ಗಾವಣೆಯಾಗಿರುವ ನೌಕರರನ್ನು ಹಿಂದಿನ ಘಟಕಗಳಿಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿ ಸಾರಿಗೆ ಮುಖಂಡರಿಗೆ ಭರವಸೆ ನೀಡಿದರು.
ವೇತನ ತಾರತಮ್ಯದ ಬಗ್ಗೆ ಗಮನಕ್ಕೆ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಇದೀಗ ಆದ್ಯತೆ ಮೇರೆಗೆ ವಜಾಗೊಂಡ ನೌಕರರ ಪುನರ್ ನೇಮಕ, ಅಮಾನತು, ವರ್ಗಾವಣೆ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು. ಗೈರು ಹಾಜರಿ ಸೇರಿದಂತೆ ವಿವಿಧ ಆರೋಪದಡಿ ದಾಖಲಾಗಿರುವ ಪ್ರಕರಣಗಳನ್ನು ರದ್ದುಗೊಳಿಸುವುದಾಗಿ ಸಚಿವರು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಸಾರಿಗೆ ನಿಗಮಗಳನ್ನು ಲಾಭಕ್ಕೆ ತರುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸುಧಾರಣೆ ತರಲಾಗುವುದು. ಮೊದಲಿಗೆ ನೌಕರರಲ್ಲಿ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲು ಒತ್ತು ನೀಡುತ್ತೇನೆ. ಇನ್ನು ಸಾರಿಗೆ ನೌಕರರ ಫೆಡರೇಶನ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ನೌಕರರೇ ನಮ್ಮ ಶಕ್ತಿ. ಆ ನೌಕರರನ್ನು ವಿಶ್ವಾಸ ಗಳಿಸುತ್ತೇನೆ. ಎಲ್ಲ ಬೇಡಿಕೆಗಳನ್ನು ಒಮ್ಮೆಗೆ ಈಡೇರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಟ್ರೇಡ್ ಯೂನಿಯನ್‌ಗಳ ಚುನಾವಣೆ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.
ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಸ್ಟ್ಯಾಪ್ ಅಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಅನಂತ ಸುಬ್ಬರಾವ್, ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್‌ನ ಅಧ್ಯಕ್ಷ ಎಚ್.ಡಿ.ರೇವಪ್ಪ, ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರು, ಭಾರತ್ ಮಜ್ದೂರ್ ಸಭಾದ ಅಧ್ಯಕ್ಷ ರಾಮಕೃಷ್ಣ ಪೂಂಜಾ ಮತ್ತಿತರರಿದ್ದರು.
ಸಭೆಯಿಂದ ಕೋಡಿಹಳ್ಳಿಗೆ ಕೊಕ್!
ಸಚಿವ ಶ್ರೀರಾಮುಲು ಅವರ ನಿವಾಸದಲ್ಲಿ ನಡೆದ ಸಾರಿಗೆ ನೌಕರರ ಸಂಘಟನೆ ಮುಖಂಡರ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಕಾಣಿಸಲಿಲ್ಲ. ಸಾರಿಗೆ ಮುಷ್ಕರದ ಸಾರಥ್ಯ ವಹಿಸಿದ್ದ ಕೋಡಿಹಳ್ಳಿ ಅವರನ್ನು ಹೊರಗಿಟ್ಟು ಸಚಿವ ಶ್ರೀರಾಮುಲು ಸಭೆ ನಡೆಸಿದರು.
ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮುಷ್ಕರಕ್ಕೆ ಕರೆ ನೀಡಿತ್ತು. ಈ ವೇಳೆ ಮುಷ್ಕರ ಬೆಂಬಲಿಸಿ ಸಕ್ರಿಯವಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೌಕರರ ಕೂಟದ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಮುಷ್ಕರಕ್ಕೆ ಕೋಡಹಳ್ಳಿ ಪ್ರವೇಶದಿಂದ ಕೆರಳಿದ ಸರ್ಕಾರ ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟವಾಗಿತ್ತು ಹೇಳಿತ್ತು. ಹೀಗಾಗಿ 15 ದಿನಗಳ ಕಾಲ ಮುಷ್ಕರ ಸಾಗಿತ್ತು. ಬಳಿಕ ಕೋವಿಡ್ ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಮುಷ್ಕರ ಹಿಂಪಡೆದ ಬಳಿಕ ನೌಕರರ ಕೂಟದ ಪದಾಧಿಕಾರಿಗಳ ನಡುವೆ ಒಡುಕು ಉಂಟಾಗಿತ್ತು. ಈ ದಿಢೀರ್ ಬೆಳವಣಿಗೆಗಳಿಂದ ಬೇಸರಗೊಂಡು ಕೋಡಿಹಳ್ಳಿ ಅವರು ಕೂಟದಿಂದ ದೂರು ಉಳಿದಿದ್ದಾರೆ ಎನ್ನಲಾಗಿದೆ. ಈ ನಡುವೆ ನೂತನ ಸಾರಿಗೆ ಸಚಿವ ಶ್ರೀರಾಮುಲು ಅವರು ಕೋಡಿಹಳ್ಳಿ ಅವರನ್ನು ಹೊರಗಿಟ್ಟು ಸಾರಿಗೆ ನೌಕರರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಒಪ್ಪಿಗೆ
ಮುಷ್ಕರದ ವೇಳೆ ವಜಾ ಹಾಗೂ ಅಮಾನತುಗೊಂಡಿರುವ ನೌಕರರ ಪುನರ್ ನೇಮಕ ಮಾಡಲಾಗುವುದು. ವರ್ಗಾವಣೆಯಾಗಿರುವ ನೌಕರರನ್ನು ಹಿಂದಿನ ಘಟಕಗಳಿಗೆ ವರ್ಗಾವಣೆ ಮಾಡಲಾಗುವುದು. ಇವೆರಡೂ ಪ್ರಸ್ತಾವಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು.
- ಶ್ರೀರಾಮುಲು, ಸಾರಿಗೆ ಸಚಿವ