ಜೂಜಿನ ವಿರುದ್ಧ ಬ್ರಹ್ಮಾಸ್ತ್ರ: ರಾಜ್ಯವನ್ನು ಸಂಪೂರ್ಣ ಜೂಜುಮುಕ್ತ ಮಾಡಲು ಮುಂದಾದ ಸರ್ಕಾರ!

By Kannadaprabha NewsFirst Published Sep 22, 2021, 7:29 AM IST
Highlights

* ಆನ್‌ಲೈನ್‌ ಜೂಜಿನ ನಂತರ ಆಫ್‌ಲೈನ್‌ ಜೂಜಿನ ಮೇಲೂ ಸರ್ಕಾರದ ಪ್ರಹಾರ

* ರಾಜ್ಯಾದ್ಯಂತ ಜೂಜು ಅಡ್ಡೆಗಳ ನಿಯಂತ್ರಣಕ್ಕೆ ಕಾಯ್ದೆ ತಿದ್ದುಪಡಿ: ಬೊಮ್ಮಾಯಿ

* ಅರಿವಿಲ್ಲದ ಅಪರಾಧದ ಬದಲು ಉದ್ದೇಶಪೂರ್ವಕ ಅಪರಾಧವೆಂದು ತಿದ್ದುಪಡಿ

ವಿಧಾನಸಭೆ(ಸೆ.22): ರಾಜ್ಯಾದ್ಯಂತ ಆನ್‌ಲೈನ್‌ ಜೂಜು(Online Gambling) ನಿಷೇಧಿಸಿ ವಿಧೇಯಕ ಮಂಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಜೂಜು ಅಡ್ಡೆಗಳ ನಿಯಂತ್ರಣಕ್ಕೆ ಕಾಯ್ದೆಗೆ ತಿದ್ದುಪಡಿ(Amendment) ತರುವ ಮೂಲಕ ರಾಜ್ಯವನ್ನು ಸಂಪೂರ್ಣ ಜೂಜುಮುಕ್ತ ಮಾಡಲು ಮುಂದಾಗಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಜೂಜು ನಿಯಂತ್ರಣ ಕುರಿತು ಪೊಲೀಸರ ಕೈ ಬಲಪಡಿಸಲು ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವೆ. ಈ ಕುರಿತು ವಿಧೇಯಕ ಮಂಡನೆ ಮಾಡುವ ಮೂಲಕ ಜೂಜು ನಿಯಂತ್ರಿಸಲು ಮುಂದಾಗಿದ್ದೇವೆ. ಈವರೆಗೆ ಜೂಜು ಎಂಬುದು ಅರಿವಿಲ್ಲದೆ ಮಾಡಿದ ಅಪರಾಧ ಎಂದು ಕಾಯ್ದೆಯಲ್ಲಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡುವ ಅಪರಾಧ ಎಂಬುದಾಗಿ ಬದಲಿಸಬೇಕು. ಜತೆಗೆ ಹಲವು ಬಾರಿ ಹೈಕೋರ್ಟ್‌ಗಳು ನೀಡಿರುವ ಆದೇಶಗಳನ್ನು ದುರ್ಬಳಕೆ ಮಾಡಿಕೊಂಡು ಜೂಜಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ತಿದ್ದುಪಡಿ ತರುತ್ತಿದ್ದೇವೆ. ಪ್ರತಿಪಕ್ಷಗಳು ಸಹಕರಿಸಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ರಾಜ್ಯದಲ್ಲಿ ಜೂಜಾಟದ ಅಡ್ಡೆಗಳು ಹೆಚ್ಚಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದಲೇ ಜೂಜಾಟದ ಅಡ್ಡೆಗಳು ನಿಯಂತ್ರಣವಾಗುತ್ತಿವೆ ಎಂದು ಕುಣಿಗಲ್‌ ಶಾಸಕ ರಂಗನಾಥ್‌ ಹಾಗೂ ಜೆಡಿಎಸ್‌ ಸದಸ್ಯ ಡಿ.ಸಿ.ತಮ್ಮಣ್ಣ ಪ್ರಶ್ನೋತ್ತರ ಅವಧಿಯಲ್ಲಿ ಆರೋಪಿಸಿದರು.

ಜೂಜುಮುಕ್ತ ಕರ್ನಾಟಕ:

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜೂಜು ಮುಕ್ತ ಕರ್ನಾಟಕ(Karnataka) ನಮ್ಮ ಗುರಿ. ಹೀಗಾಗಿ ಕಾಯಂ ಆಗಿ ಜೂಜನ್ನು ನಿಲ್ಲಿಸಲು ಮುಂದಾಗಿದ್ದೇವೆ. ಜೂಜಾಟದ ವಿರುದ್ಧ ಇನ್ನಷ್ಟುಹೆಚ್ಚಿನ ಹಾಗೂ ಕಠಿಣ ಕ್ರಮಗಳನ್ನು ಜರುಗಿಸಲು ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆ-2021ಕ್ಕೆ ಅಂಗೀಕಾರ ಪಡೆದು ಕರ್ನಾಟಕ ಪೊಲೀಸ್‌ ಕಾಯಿದೆ -1963ರ ಕಾನೂನು ತಿದ್ದುಪಡಿ ಮಾಡಲಾಗುವುದು. ಈ ಮೂಲಕ ಮತ್ತಷ್ಟುಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆರಗ ಜ್ಞಾನೇಂದ್ರ ಅವರಿಗೆ ಸಾಥ್‌ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದಕ್ಕಾಗಿ ಪ್ರತ್ಯೇಕ ತಿದ್ದುಪಡಿ ವಿಧೇಯಕವನ್ನೇ ತರುತ್ತಿದ್ದೇವೆ ಎಂದು ಹೇಳಿದರು.

click me!