ಶಿವಮೊಗ್ಗ (ಸೆ.28): ರೇಷ್ಮೆ ಇಲಾಖೆಯಿಂದ (Silk Board) 10 ಲಕ್ಷ ರು. ಮೌಲ್ಯದ ರೇಷ್ಮೆ ಸೀರೆ ಬಿಡುಗಡೆಗೆ ಚಿಂತನೆ ನಡೆದಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ (Narayana Gowda) ಹೇಳಿದ್ದಾರೆ.
ರಾಜ್ಯದ ರೇಷ್ಮೆ ಅತ್ಯಂತ ನೈಜವಾಗಿದೆ. ಆದ್ದರಿಂದ ಜಗತ್‌ಪ್ರಸಿದ್ಧಿ ಪಡೆದಿದೆ. .10 ಲಕ್ಷಕ್ಕೆ ಒಂದು ಸೀರೆ (Saree) ಮಾರುವ ಯೋಚನೆ ಇದೆ. ರೇಷ್ಮೆ ಮಾರುಕಟ್ಟೆವೃದ್ಧಿಸಲು ಪ್ರತಿ ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆಗಳನ್ನು ತೆರೆಯಲು ಯೋಜನೆ ತಯಾರಿಸಲಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ
ಅಲ್ಲದೆ ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಸಹಕರಿಸಲು ಶೀಘ್ರದಲ್ಲೇ ಸಹಾಯವಾಣಿ ತೆರೆಯಲಾಗುವುದು ಎಂದರು. ರೇಷ್ಮೆ ಬೆಳೆಗಾರರು ಗೂಡ್ಸ್ ಗಾಡಿಗಳಲ್ಲಿ ರಾಮನಗರದ ಮಾರುಕಟ್ಟೆಗೆ ಸಾಗುವಾಗ ದಾರಿ ಮಧ್ಯೆ ತಡೆಯದಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗುತ್ತದೆ. ರೈತರಿಗೆ ವಿಐಪಿ ರೀತಿಯಲ್ಲಿ ಪಾಸ್ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ವಿವಿಧ ಬೇಡಿಕೆಗೆ ನೇಕಾರರ ಆಗ್ರಹ : ರಾಷ್ಟ್ರೀಯಕೃತ, ಸಹಕಾರಿ ಸಂಘ ಹಾಗೂ ಮೈಕ್ರೊ ಫೈನಾನ್ಸ್‌ಗಳಲ್ಲಿರುವ ರಾಜ್ಯ ನೇಕಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು ಹಾಗೂ ನೇಕಾರರಿಗೂ ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಜಾರಿ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ನೇತೃತ್ವದಲ್ಲಿ ನೇಕಾರರು ಬೆಳಗಾವಿ (Belagavi) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅನೇಕ ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ವೃತ್ತಿಪರ ನೇಕಾರರು ಕಾರ್ಮಿಕ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ. 5ರಿಂದ 6 ಲಕ್ಷ ಜನ ಕಾರ್ಮಿಕರು ನೇಕಾರಿಕೆಯನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ ಕಳೆದ 10 ವರ್ಷಗಳಲ್ಲಿ ಬರಗಾಲ , ಅತೀವೃಷ್ಟಿ, ಅನಾವೃಷ್ಟಿ, ಜಿಎಸ್‌ಟಿ, ನೋಟ್ ರದ್ದು ಇದರ ನಡುವೆ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಪೂರ್ಣ ಉದ್ಯಮ ನೆಲಕಚ್ಚಿದೆ. ಅಲ್ಲದೇ ಪಕ್ಕಾ ವಸ್ತುವಿನ ಮಾರಾಟವಾಗದೆ ದುಡಿಮೆ ನಿಂತು ಹೋಗಿದೆ. ಆರ್ಥಿಕ ಸಾಲದ ಹೊರೆಯಿಂದಾಗಿ ರಾಜ್ಯದಲ್ಲಿ 26 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆ ಹಾವಳಿಯಿಂದ ಮಗ್ಗ ಹಾಗೂ ಮನೆಗಳು ಹಾಳಾಗಿವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದುರುವ ನೇಕಾರರಿಗೆ ಔದ್ಯೋಗಿಕ ಭದ್ರತೆ ಇಲ್ಲದಂತಾಗಿದೆ. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.