ರಾಜ್ಯಾದ್ಯಂತ ಶ್ವಾನಗಳಿಗೆ ಉಚಿತ ಲಸಿಕೀಕರಣ

By Kannadaprabha NewsFirst Published Sep 28, 2021, 7:32 AM IST
Highlights
  • ‘ವಿಶ್ವ ರೇಬೀಸ್‌’ ದಿನಾಚರಣೆ ಪ್ರಯುಕ್ತ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಸೆ. 28ರಿಂದ 30ರವರೆಗೆ ಉಚಿತವಾಗಿ ನಾಯಿಗಳಿಗೆ ಲಸಿಕೆ
  • ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಮಾಹಿತಿ

 ಬೆಂಗಳೂರು (ಸೆ.28):‘ವಿಶ್ವ ರೇಬೀಸ್‌’ ದಿನಾಚರಣೆ ಪ್ರಯುಕ್ತ ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಸೆ. 28ರಿಂದ 30ರವರೆಗೆ ಉಚಿತವಾಗಿ ನಾಯಿಗಳಿಗೆ ಲಸಿಕೆ ನೀಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

ರೇಬೀಸ್‌ ರೋಗದ ನಿರ್ಮೂಲನೆಗಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆ.28ರಂದು ವಿಶ್ವ ರೇಬೀಸ್‌ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ರೇಬೀಸ್‌ ರೋಗದ ಕುರಿತು ಅರಿವು ಮೂಡಿಸುವುದು ಮತ್ತು ಉಚಿತ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಬೀದರ್‌ನ ಪಾಲಿಕ್ಲಿನಿಕ್‌ನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಯಿಗಳ ಆರೋಗ್ಯ ದೃಷ್ಟಿಯಿಂದ ಸಾರ್ವಜನಿಕರು ಸಮೀಪದ ಪಶು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಬೇಕು. ಪಶು ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.

ಶೀಘ್ರದಲ್ಲೇ ಪಶು ವೈದ್ಯರ ನೇಮಕಕ್ಕೆ ಪ್ರಭು ಚೌಹಾಣ್ ಅಸ್ತು

ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಯು ಯಾವುದೇ ವ್ಯಕ್ತಿಗೆ ಕಚ್ಚಿದಾಗ ಅಥವಾ ನೆಕ್ಕಿದಾಗ ಶರೀರದೊಳಗೆ ರೇಬೀಸ್‌ ವೈರಾಣು ಪ್ರವೇಶಿಸಿ ರೋಗ ಬರುತ್ತದೆ. ಅಲ್ಲದೇ, ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನಿಂದ ರೇಬೀಸ್‌ ವೈರಾಣು ಇತರೆ ಪ್ರಾಣಿಗಳಿಗೆ ಹರಡುತ್ತದೆ. ನಾಯಿ, ಬೆಕ್ಕು, ಕುರಿ, ಮೇಕೆ, ಹಸು, ಎಮ್ಮೆ, ಕೋತಿ, ತೋಳ, ನರಿ, ಕರಡಿ, ಮುಂಗುಸಿ, ಹಂದಿ, ಕತ್ತೆ, ಕುದುರೆ ಮತ್ತು ಒಂಟೆಗಳಿಂದ ರೇಬೀಸ್‌ ಹರಡುತ್ತದೆ. ಭಾರತದಲ್ಲಿ ಬಹುತೇಕ ಜನರಿಗೆ ಹುಚ್ಚು ನಾಯಿ ಕಡಿತದಿಂದ ರೇಬೀಸ್‌ ಹರಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಹುಚ್ಚು ನಾಯಿ ಕಡಿತಕ್ಕೊಳಗಾದ ಮನುಷ್ಯ ಅಥವಾ ಜಾನುವಾರುಗಳಿಗೆ 0, 3, 7, 14, 28ನೇ ದಿನಗಳಂದು ತಪ್ಪದೇ ರೇಬೀಸ್‌ ಲಸಿಕೆಯನ್ನು ನೀಡಬೇಕು. ಕಚ್ಚಿದ ಗಾಯವನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕಚ್ಚಿದ ಗಾಯಕ್ಕೆ ಡೆಟಾಲ್‌, ಸಾವಲಾನ್‌, ಪೊವೀಡೀನ್‌ ಐಯೋಡೀನ್‌ನಂತಹ ರೋಗ ನಿರೋಧಕ ಔಷಧಿಯನ್ನು ಹಚ್ಚಬೇಕು. ಯಾವುದೇ ಕಾರಣಕ್ಕೂ ಗಾಯದ ಭಾಗವನ್ನು ಬ್ಯಾಂಡೇಜ್‌/ಬಟ್ಟೆಯಿಂದ ಕಟ್ಟಬಾರದು. ರಕ್ತ ಸೋರುವಂತಹ ಗಾಯವಾದರೆ ತಕ್ಷಣ ರೇಬೀಸ್‌ ಇಮ್ಯೂನೋಗ್ಲೋಬುಲಿನ್‌ ಚುಚ್ಚುಮದ್ದನ್ನು ಗಾಯಕ್ಕೆ ಕೊಡಿಸಬೇಕು ಎಂದಿದ್ದಾರೆ.

ರೇಬೀಸ್‌ ಲಕ್ಷಣಗಳು

ಜೊಲ್ಲು ಸುರಿಸುವಿಕೆ, ಎಲ್ಲರ ಮೇಲೆ ಏರಿಹೋಗಿ ಕಚ್ಚಲು ಪ್ರಯತ್ನಿಸುವುದು, ಕರೆಗೆ ಪ್ರತಿಕ್ರಿಯೆ ನೀಡಿದಿರುವುದು, ಕ್ರಮೇಣ ಧ್ವನಿಯಲ್ಲಿ ವ್ಯತ್ಯಾಸ, ಗೊಂದಲ ಪಡುವುದು. ಪಾಶ್ರ್ವವಾಯು ಕಾಣಿಸಿ 8-10 ದಿನದಲ್ಲಿ ಸಾವು ಸಂಭವಿಸುತ್ತದೆ. ಮಂದ ಹುಚ್ಚುತನದಿಂದ ಕೂಡಿರುವ ಪ್ರಾಣಿಗಳು ಮೂಲೆಯಲ್ಲಿ ಮುದುಡಿ ಕೂತಿರುವುದು, ಊಟ ಮಾಡದಿರುವುದು, ಗಂಟಲು ಊದುವಿಕೆಯಾಗುತ್ತದೆ. ತೆರೆದ ಬಾಯಿಯನ್ನು ಮುಚ್ಚಲಾಗದೆ ಸಾವನ್ನಪುತ್ತವೆ ಎಂದು ತಿಳಿಸಿದ್ದಾರೆ.

click me!