ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ, ಬೇಧಿ ಉಂಟಾಗಿ ಬಾಲಕಿ ಸೇರಿದಂತೆ ಮೂವರ ಸಾವಿಗೆ ಕಾರಣವಾದ ಇಬ್ಬರು ಅಧಿಕಾರಿಗಳನ್ನು ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಕೊಪ್ಪಳ (ಜೂ.22): ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ, ಬೇಧಿ ಉಂಟಾಗಿ ಬಾಲಕಿ ಸೇರಿದಂತೆ ಮೂವರ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಇತ್ತೀಚೆಗೆ ರಾಯಚೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ಸಾವು-ನೋವು ಸಂಭವಿಸಿತ್ತು. ಇದರ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡ ಕಲುಷಿತ ನೀರು ಸೇವನೆಯಿಂದ ಬಸರಿಹಾಳ ಗ್ರಾಮದಲ್ಲಿ ನೂರಾರು ಜನರು ಕಲುಷಿತ ನೀರಿನ ಸೇವನೆಯಿಂದ ಒಂದು ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಈ ಬಗ್ಗೆ ತನಿಖೆ ಮಾಡುವಂತೆ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಇಲಾಖಾ ತನಿಖೆ ಮಾಡಲಾಗಿದ್ದು, ವಾಂತಿ ಬೇಧಿ ಕಾಣಿಸಿಕೊಂಡರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಂದು ಪರಿಗಣಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸರ್ಕಾರದ ತಪ್ಪಿನಿಂದ ಸಾವಾದರೆ 2 ಲಕ್ಷ ರೂ. ಪರಿಹಾರ, ಆನೆ ತುಳಿದರೆ 15 ಲಕ್ಷ ರೂ. ಪರಿಹಾರ: ಇದೆಂಥಾ ತಾರತಮ್ಯ
ಬಸರಿಹಾಳ, ಬಿಜಕಲ್ ಪಿಡಿಒಗಳ ಅಮಾನತು: ವಾಂತಿ ಬೇಧಿಗೆ ಕೊಪ್ಪಳ ಜಿಲ್ಲೆಯಲ್ಲಿ ಮೂವರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಅಮಾನತು ಮಾಡಲಾಗಿದೆ. ಕನಕಗಿರಿ ತಾಲೂಕು ಬಸರಿಹಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ ಹಾಗೂ ಬಿಜಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ಅಮಾನತು ಆಗಿದ್ದಾರೆ. ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಅಧಿಕಾರಿಗಳನ್ನ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ. ಜೊತೆಗೆ, ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಲೋಪ ಎಸಗಿದ್ದಾಗಿ ಉಲ್ಲೇಖ ಮಾಡಲಾಗಿದೆ.
ಅಮಾನತು ಮಾಡುವ ಎಚ್ಚರಿಕೆ ನೀಡಿದ್ದ ಸಚಿವ:
ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ವೇಳೆ ಲೋಪಗಳಾಗಿವೆ. ಇದರಿಂದ ಗ್ರಾಮದಲ್ಲಿ ಪೊರೈಸುವ ನೀರು ಕಲುಷಿತವಾಗಿದೆ. ಈ ಪ್ರಕರಣದಲ್ಲಿ ಮೂರು ಜನ ಜೀವ ಹಾನಿಯಾಗಿದೆ. ಮೃತರ ಕುಟುಂಬಗಳಿಗೆ ಮುಂದಿನ ಒಂದು ವಾರದಲ್ಲಿ 2 ಲಕ್ಷ ರೂ. ಪರಿಹಾರ ನೀಡಲಾಗತ್ತದೆ. ಕಲುಷಿತ ನೀರು ಪೋರೈಕೆಯಾಗಲು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಾಮಗಾರಿ ನಡೆಸಿದ ಕಾಂಟ್ರಾಕ್ಟರ್ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಜಿಲ್ಲಾಡಳಿತ ಮುಂದಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮದ ತನಿಖೆ ನಡೆಸುತ್ತೇವೆ. ಜೊತೆಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಸಹಕಾರ ನೀಡಿದ ಅಧಿಕಾರಿಗಳನ್ನ ಸಸ್ಪೆಂಡ್ ಮಾಡುತ್ತೇವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಈಗ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕನಕಗಿರಿಯಲ್ಲಿ ಬಾಲಕ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ
ಮೂವರ ಸಾವಿನ ವಿವರ:
ಮೇ 31: ಕನಕಗಿರಿ ತಾಲೂಕಿನ ಬಸರಿಹಾಳದ ನಟೇಗುಡ್ಡ ಸಾವು
ಜೂನ್ 5: ಕನಕಗಿರಿ ತಾಲೂಕಿನ ಬಸರಿಹಾಳದ ಬಾಲಕಿ ಶ್ರುತಿ ಸಾವು
ಜೂನ್ 8: ಕುಷ್ಟಗಿ ತಾಲೂಕಿನ ಬಿಜಕಲ್‌ನ ಬಾಲಕಿ ನಿರ್ಮಲಾ ಸಾವು