* ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋಪೂಜೆ ಮಾಡಲು
* ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ
* ಬಲಿಪಾಡ್ಯಮಿ ದಿನದಂದು ಇಲಾಖೆಯ ದೇವಾಲಯಗಳಲ್ಲಿ ಗೋಮಾತೆಗೆ ಪೂಜೆ
ಬೆಂಗಳೂರು,(ಅ.26): ದೀಪಾವಳಿ ಬಲಿಪಾಡ್ಯಮಿ ದಿನದಂದು (Deepavali Balipadyami) (ನವೆಂಬರ್ 5) ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋಮಾತೆಯನ್ನು ಪೂಜಿಸಿ ಆರಾಧಿಸಲು ಆದೇಶ ಹೊರಡಿಸಲಾಗಿದೆ.
ಬಲಿಪಾಡ್ಯಮಿ ದಿನದಂದು ಇಲಾಖೆಯ ದೇವಾಲಯಗಳಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ ಇಂದು (ಅ.26) ಆದೇಶ ಹೊರಡಿಸಿದೆ.
Covid 19: ದೀಪಾವಳಿ ನಂತರ ದೇಶದ ಅಲ್ಲಲ್ಲಿ ಸೋಂಕು ಏರಿಕೆ, ಮತ್ತೊಂದು ದೊಡ್ಡ ಅಲೆ ? ಏನಂತಾರೆ ತಜ್ಞರು ?
ಬಲಿಪಾಡ್ಯಮಿ ದಿನ ಸಂಜೆ 5.30ರಿಂದ 6.30ರ ಸಮಯದಲ್ಲಿ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ದೇವಾಲಯದಲ್ಲಿ ಅರಿಶಿಣ, ಕುಂಕುಮ, ಹೂವುಗಳಿಂದ ಪೂಜಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸಿಗಳ ಗೋಗ್ರಾಸಗಳನ್ನು ಹಸುಗಳಿಗೆ ನೀಡಿ ಆರಾಧಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಮುಜರಾಯಿ ಚಿವೆ ಶಶಿಕಲಾ ಜೊಲ್ಲೆ ಮಾತು
ಇನ್ನು ಈ ಬಗ್ಗೆ ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಅವರು ಪತ್ರಿಕಾ ಹೇಳಿಕೆ ಹೊರಡಿಸಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗಗಳಾದ ಗೋವುಗಳ ಮಹತ್ವ ಹಾಗೂ ಗೋವುಗಳ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ನ. 5ರ ಬಲಿಪಾಡ್ಯಮಿಯಂದು ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋಮಾತೆಯನ್ನು ಪೂಜಿಸಿ ಆರಾಧಿಸಲು ಆದೇಶಿಸಲಾಗಿದೆ ಮಾಹಿತಿ ನೀಡಿದ್ದಾರೆ.
ಹಿಂದೂ ಧರ್ಮದ ಪುರಾಣ, ಉಪನಿಷತ್ತುಗಳಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಗೋವಿಗೆ ಮಾತೆಯ ಸ್ಥಾನ ನೀಡಲಾಗಿದೆ. ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆ ವಾಸ್ತುದೋಷಕ್ಕೂ ಪರಿಹಾರ ದೊರೆಯುವುದೆಂಬ ನಂಬಿಕೆ ನಮ್ಮ ಸಮಾಜದಲ್ಲಿರುವುದರಿಂದ ಬಲಿಪಾಡ್ಯಮಿ ದಿನದಂದು ಇಲಾಖೆಯ ದೇವಾಲಯಗಳಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾನಗರಗಳಲ್ಲಿ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ಮಧ್ಯೆ ಗೋಪೂಜೆಯಂತಹ ಕೆಲಸವನ್ನು ಮರೆಯುತ್ತಿದ್ದಾರೆ. ಸನಾತನ ಧರ್ಮದ ಗೋಮಾತೆಯ ಪೂಜೆಯನ್ನು ಪೂಜಿಸುವ ಸಂಪ್ರದಾಯ ನಮ್ಮ ಮುಂದಿನ ಪೀಳಿಗೆಗೂ ಗೊತ್ತಾಗಬೇಕಿದೆ. ಈ ಹಿನ್ನೆಲೆಯಲ್ಲಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಲು ವರ್ಷದಲ್ಲಿ ಒಂದು ದಿನ ಇಲಾಖೆಯ ದೇವಾಲಯಗಳಲ್ಲಿ ಪೂಜಿಸುವುದನ್ನು ಕಡ್ಡಾಯ ಮಾಡುವುದರಿಂದೊಂದಿಗೆ ಗೋಮಾತೆಯ ಪೂಜೆಯನ್ನು ಪರಿಚಯಿಸಲು ಬಲಿಪಾಡ್ಯಮಿ ದಿನ ಸೂಕ್ತವಾಗಿರುವುದರಿಂದ ಆ ದಿನದಂದು ಗೋಪೂಜೆ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಸಚಿವೆ ಜೊಲ್ಲೆ ಹೇಳಿದ್ದಾರೆ.