ಕರ್ನಾಟಕದಲ್ಲೂ ಬ್ರಿಟನ್ನಿನ ಎವೈ 4.2 ವೈರಸ್‌ ತಳಿ ಪತ್ತೆ!

Published : Oct 26, 2021, 06:13 AM ISTUpdated : Oct 26, 2021, 11:58 AM IST
ಕರ್ನಾಟಕದಲ್ಲೂ ಬ್ರಿಟನ್ನಿನ ಎವೈ 4.2 ವೈರಸ್‌ ತಳಿ ಪತ್ತೆ!

ಸಾರಾಂಶ

* ರಾಜ್ಯದ ಇಬ್ಬರಲ್ಲಿ ರೂಪಾಂತರಿ ಸೋಂಕು: ವರದಿ * ದೇಶದ ಒಟ್ಟು 24 ಜನರಲ್ಲಿ ಎವೈ 4.2 ತಳಿ ಸೋಂಕು *  ಕರ್ನಾಟಕದಲ್ಲೂ ಬ್ರಿಟನ್ನಿನ ಎವೈ 4.2 ವೈರಸ್‌ ತಳಿ ಪತ್ತೆ!

ನವದೆಹಲಿ(ಅ.26): ಬ್ರಿಟನ್‌ ಮತ್ತು ರಷ್ಯಾದಲ್ಲಿ(Russia) ಹೊಸ ಕೊರೋನಾ ಪ್ರಕರಣಗಳ ಸ್ಫೋಟಕ್ಕೆ ಕಾರಣವಾಗಿರುವ ‘ಎವೈ 4.2‘(AY 4.2) ಎಂಬ ಕೊರೋನಾದ ಹೊಸ ರೂಪಾಂತರಿ ತಳಿ ಇದೀಗ ಕರ್ನಾಟಕಕ್ಕೂ(Karnataka) ಕಾಲಿಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಾಂಕ್ರಾಮಿಕ ವೈರಸ್‌ಗಳ ಕುರಿತು ಜಾಗತಿಕ ಮಟ್ಟದಲ್ಲಿ ಮಾಹಿತಿ ಹಂಚಿಕೊಳ್ಳುವ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿದೆ.

ಈಗಾಗಲೇ ಮಧ್ಯಪ್ರದೇಶದಲ್ಲಿ(Madhya Pradesh) ಈ ರೂಪಾಂತರಿ ಪತ್ತೆಯಾಗಿತ್ತು. ಈಗ ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಹೊಸ ತಳಿ ಇರುವುದು ಪತ್ತೆಯಾಗಿದೆ. ಆದರೆ, ಕಳೆದ ಮೇ ತಿಂಗಳಿನಲ್ಲೇ ಈ ವೈರಸ್‌ ಭಾರತಕ್ಕೆ ಕಾಲಿಟ್ಟಿತ್ತು ಎಂಬುದು ಜಿನೋಮ್‌ ಸ್ವೀಕ್ವೆನ್ಸಿಂಗ್‌ಗೆ ವರದಿಯಿಂದ ಖಚಿತಪಟ್ಟಿದೆ ಎಂದು ಹೇಳಲಾಗಿದೆ.

"

ಭಾರತದಲ್ಲಿ ಮೊದಲಿಗೆ ಪತ್ತೆಯಾಗಿ, ನಂತರ ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಸೋಂಕು ಸಾವಿಗೆ ಕಾರಣವಾಗಿದ್ದ ಡೆಲ್ಟಾತಳಿಯ ಉಪ ತಳಿಗೆ ‘ಎವೈ 4.2‘ ಎಂದು ಹೆಸರಿಡಲಾಗಿದೆ. ಇದು ಡೆಲ್ಟಾಗಿಂತ ಹೆಚ್ಚು ಸೋಂಕುಕಾರಕ ಎಂಬುದು ವಿಜ್ಞಾನಿಗಳ ಪ್ರಾಥಮಿಕ ವಿಶ್ಲೇಷಣೆಗಳಿಂದ ಕಂಡುಬಂದಿದೆ. ಹೀಗಾಗಿಯೇ ಈ ಹೊಸ ರೂಪಾಂತರಿ ಬಗ್ಗೆ ಇದೀಗ ವಿಶ್ವದಾದ್ಯಂತ ಆತಂಕ ಎದುರಾಗಿದೆ. ಇದು ಭಾರತ ಮತ್ತು ವಿಶ್ವದ ಹಲವು ದೇಶಗಳಲ್ಲಿ 3 ಮತ್ತು 4ನೇ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರ್ನಾಟಕದಲ್ಲೂ ಹೊಸ ತಳಿ:

ಕರ್ನಾಟಕ ಸೇರಿದಂತೆ ಭಾರತದ 7 ರಾಜ್ಯಗಳಲ್ಲಿ ಎವೈ 4.2 ತಳಿ ಪತ್ತೆಯಾಗಿದೆ ಎಂದು ಸಾಂಕ್ರಾಮಿಕ ವೈರಸ್‌ಗಳ ಕುರಿತು ಜಾಗತಿಕ ಮಟ್ಟದಲ್ಲಿ ಮುಕ್ತ ಮಾಹಿತಿ ಹಂಚಿಕೆಗಾಗಿ ಇರುವ ‘ಗ್ಲೋಬಲ್‌ ಇನಿಷಿಯೇಟಿವ್‌ ಆನ್‌ ಅಲ್‌ ಇನ್‌ಫ್ಲುಯೆಂಜಾ ಡಾಟಾ’ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ವರದಿ ಮಾಡಿದೆ. ಈ ಕೇಂದ್ರದ ಜರ್ಮನಿಯ ಮ್ಯೂನಿಚ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ.

ಈ ವೆಬ್‌ಸೈಟ್‌ ವರದಿ ಅನ್ವಯ ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ 2, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಕೇಸು ಪತ್ತೆಯಾಗಿದೆ ಎಂದು ಹೇಳಿದೆ. ಅಂದರೆ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚೆಗೆ ಪತ್ತೆಯಾದ 7 ಪ್ರಕರಣಗಳನ್ನೂ ಸೇರಿಸಿದರೆ ಭಾರತದ 7 ರಾಜ್ಯಗಳಲ್ಲಿ ಒಟ್ಟು 24 ಕೇಸುಗಳು ಪತ್ತೆಯಾದಂತೆ ಆಗಲಿದೆ.

ಇದುವರೆಗೆ ವಿಶ್ವದಾದ್ಯಂತ 18207 ಎವೈ 4.2 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬ್ರಿಟನ್‌ ಪಾಲೇ 16891 ಇದೆ. ಸದ್ಯಕ್ಕೆ ಈ ವೈರಾಣುವನ್ನು ಇನ್ನೂ ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌ ಎಂದೇ ಪರಿಗಣಿಸಲಾಗಿದೆ. ಇದು ಕೂಡಾ ಡೆಲ್ಟಾಅಥವಾ ಡೆಲ್ಟಾಪ್ಲಸ್‌ನಷ್ಟೇ ಅಪಾಯಕಾರಿ ಎಂದು ಹೆಚ್ಚಿನ ಅಧ್ಯಯನ ವರದಿಗಳಿಂದ ಸಾಬೀತಾದರೆ ಬಳಿಕ ಅದನ್ನು ವೇರಿಯಂಟ್‌ ಆಫ್‌ ಕನ್ಸರ್ನ್‌ ಎಂದು ಪಟ್ಟಿಮಾಡಲಾಗುತ್ತದೆ.

ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಕೇಸು?

ಮಧ್ಯಪ್ರದೇಶ 7

ಆಂಧ್ರಪ್ರದೇಶ 7

ಕೇರಳ 4

ಕರ್ನಾಟಕ 2

ತೆಲಂಗಾಣ 2

ಮಹಾರಾಷ್ಟ್ರ 1

ಜಮ್ಮು ಮತ್ತು ಕಾಶ್ಮೀರ 1

ತಜ್ಞರ ಜೊತೆ ಚರ್ಚಿಸಿದ್ದೇವೆ

ರಷ್ಯಾ, ಇಂಗ್ಲೆಂಡ್‌ಗಳಲ್ಲಿ ಮಾತ್ರವಲ್ಲದೆ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಕೊರೋನಾದ ಹೊಸ ತಳಿ ಬಂದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಹಿರಿಯ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಈ ತಳಿ ಕಂಡುಬಂದಲ್ಲಿ ಸರ್ಕಾರದ ಗಮನಕ್ಕೆ ತರಬೇಕೆಂದು ಸೂಚನೆ ನೀಡಿದ್ದೇವೆ.

- ಡಾ ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ