ಕಾಂಗ್ರೆಸ್ ಸರ್ಕಾರವು 20 ತಿಂಗಳಲ್ಲಿ ಮೂರು ಬಾರಿ ಹಾಲಿನ ದರವನ್ನು ಏರಿಸಿದೆ, ಒಟ್ಟು 9 ರೂಪಾಯಿ ಹೆಚ್ಚಳವಾಗಿದೆ. ಈ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರು (ಮಾ.27): ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆವಲ 20 ತಿಂಗಳ ಆಡಳಿತದಲ್ಲಿ 3ನೇ ಬಾರಿಗೆ ಹಾಲಿನ ದರ ಏರಿಕೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ವಾಗ್ದಾನದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಪ್ರತಿ ಲೀಟರ್ ಹಾಲಿನ ಮೇಲೆ 9 ರೂ. ಹೆಚ್ಚಳ ಮಾಡುವ ಮೂಲಕ ಜನರಿಗೆ ಬರೆ ಎಳೆದಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕೆ ಮಾಡಿದ್ದಾರೆ.
ಆಗಸ್ಟ್ 2023 - ₹3 ಏರಿಕೆ
ಜೂನ್ 2024 - ₹2 ಏರಿಕೆ
ಮಾರ್ಚ್ 2025 - ₹4 ಏರಿಕೆ
20 ತಿಂಗಳಲ್ಲಿ ಒಟ್ಟು - ₹9 ಏರಿಕೆ
ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 20 ತಿಂಗಳಿನಲ್ಲಿ ಹಾಲಿನ ದರವನ್ನ ಮೂರು ಬಾರಿ ಒಟ್ಟು 9 ರೂಪಾಯಿ ಹೆಚ್ಚಿಸಿದ್ದೀರಿ. 2023ರ ಆಗಸ್ಟ್ ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ 2024 ಜೂನ್ ನಲ್ಲಿ 2 ರೂಪಾಯಿ ಏರಿಕೆ ಆಯ್ತು. ಈಗ ಮತ್ತೊಮ್ಮೆ ಏಕಾಏಕಿ 4 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ದಿನಬಳಕೆ ವಸ್ತುಗಳ ಬೆಲೆಯಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ.
ಇದನ್ನೂ ಓದಿ: ನಂದಿನಿ ಹಾಲಿನ ದರ 4 ರೂ. ಹೆಚ್ಚಳ; ಬೆಲೆ ಏರಿಕೆಯ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಬರೆ!
ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ. ಒಂದು ವೇಳೆ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಅನಿವಾರ್ಯವಾದರೆ, ಹೆಚ್ಚಳ ಮಾಡಿರುವ ₹4 ರೂಪಾಯಿ ನೇರವಾಗಿ ಹಾಲು ಉತ್ಪಾದಕರ ಕೈಸೇರುವಂತೆ ನೋಡಿಕೊಳ್ಳಿ. ಆಡಳಿತ ವೆಚ್ಚ, ಮತ್ತೊಂದು ವೆಚ್ಚ ಎಂದು ಅತ್ತ ರೈತರಿಗೂ ಲಾಭವಿಲ್ಲದೆ ಇತ್ತ ಗ್ರಾಹಕರ ಜೇಬಿಗೂ ಕತ್ತರಿ ಹಾಕಿದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ, ಎಚ್ಚರಿಕೆ.