ಕೋಗಿಲು ಲೇಔಟ್ ಕೇಸಲ್ಲಿ ಎಚ್ಚೆತ್ತ ಸರ್ಕಾರ: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಹಣ ವಸೂಲಿ ಮಾಡಿದ ನಾಲ್ವರ ಮೇಲೆ FIR!

Published : Jan 07, 2026, 01:32 PM IST
Kogilu Layout FIR

ಸಾರಾಂಶ

ಯಲಹಂಕದ ಕೋಗಿಲು ಗ್ರಾಮದಲ್ಲಿ ಜಿಬಿಎಗೆ ಸೇರಿದ ಸರ್ಕಾರಿ ಜಾಗ ಒತ್ತುವರಿ ಮಾಡಿ, ಅಕ್ರಮ ಮನೆ ನಿರ್ಮಾಣಕ್ಕೆ ಪ್ರಚೋದಿಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ FIR ದಾಖಲಾಗಿದೆ. ಈ ಜಾಗದಲ್ಲಿ ನಿರ್ಮಿಸಲಾಗಿದ್ದ 160ಕ್ಕೂ ಹೆಚ್ಚು ಮನೆಗಳನ್ನು ಜಿಲ್ಲಾಡಳಿತ ಈಗಾಗಲೇ ತೆರವುಗೊಳಿಸಿದೆ.

ಬೆಂಗಳೂರು (ಜ.07): ಯಲಹಂಕದ ಕೋಗಿಲು ಗ್ರಾಮದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ, ಅಲ್ಲಿ ಅನಧಿಕೃತ ಮನೆಗಳ ನಿರ್ಮಾಣಕ್ಕೆ ಪ್ರಚೋದನೆ ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಇಂಜಿನಿಯರ್ ಸಂತೋಷ್ ಕುಮಾರ್ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ

ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶದಂತೆ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಈ ಜಾಗದಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳನೀರು ಬುರುಡೆ ಸಂಸ್ಕರಣೆ ಹಾಗೂ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು 2023ರಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ಈ ಸರ್ಕಾರಿ ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ 160ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿತ್ತು. ಡಿಸೆಂಬರ್ 20, 2025 ರಂದು ಜಿಲ್ಲಾಡಳಿತ ಮತ್ತು ಬಿಎಸ್‌ಡಬ್ಲ್ಯೂಎಂಎಲ್ ಜಂಟಿ ಕಾರ್ಯಾಚರಣೆ ನಡೆಸಿ ಈ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿತ್ತು.

ಹಣ ವಸೂಲಿಯ ಗಂಭೀರ ಆರೋಪ

ಒತ್ತುವರಿ ತೆರವು ಕಾರ್ಯಾಚರಣೆಯ ಸಮಯದಲ್ಲಿ ಮತ್ತು ಮಾಧ್ಯಮಗಳ ವರದಿಗಳ ಪ್ರಕಾರ, ಈ ಅಕ್ರಮ ವಸತಿಗಳ ನಿರ್ಮಾಣದ ಹಿಂದೆ ದೊಡ್ಡ ಜಾಲವಿರುವುದು ಬೆಳಕಿಗೆ ಬಂದಿದೆ. ಎ1 ವಿಜಯ್, ಎ2 ವಾಸಿಂ ಉಲ್ಲಾ ಬೇಗ್, ಎ3 ಮುನಿ ಆಂಜಿನಪ್ಪ ಹಾಗೂ ಎ4 ರಾಬಿನ್ ಎಂಬುವವರು ಸ್ಥಳೀಯರಿಂದ ಹಣ ಪಡೆದು ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಕಾರ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಾರ್ವಜನಿಕರನ್ನು ನಂಬಿಸಿ, ಸರ್ಕಾರಿ ಜಾಗವನ್ನು ಖಾಸಗಿ ಆಸ್ತಿಯಂತೆ ಬಿಂಬಿಸಿ ಹಣ ಲೂಟಿ ಮಾಡಿದ ಈ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಸಕರ ಇನ್‌ಸ್ಟಾಗ್ರಾಮ್‌ನಿಂದ ಯುವತಿಗೆ ಮೆಸೇಜ್: ಖಾತೆ ಹ್ಯಾಕ್ ಆಗಿರುವ ದೂರು ದಾಖಲಿಸಿದ ಸಿ.ಕೆ. ರಾಮಮೂರ್ತಿ!
ಊರಲ್ಲಿ ಹೇಳೋದಕ್ಕೆ ದೊಡ್ಡ ರೌಡಿ, ಹೆಂಡತಿ ಕೈಗೆ ಸಿಕ್ಕು ಮೂಳೆ ಪುಡಿ-ಪುಡಿ; ರಕ್ಷಣೆಗಾಗಿ ಪೊಲೀಸ್ ಠಾಣೆಗೆ ದಾಂಗುಡಿ!