
ಬೆಂಗಳೂರು (ಜ.07): ಜಯನಗರ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರು ಯುವತಿಯೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ್ದಾರೆ ಎನ್ನಲಾದ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಶಾಸಕರು, ತಮ್ಮ ಅಧಿಕೃತ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅನುಷ್ಕಾ ಎಂಬ ಯುವತಿಯ ಇನ್‌ಸ್ಟಾಗ್ರಾಮ್ ಖಾತೆಗೆ ಶಾಸಕ ಸಿ.ಕೆ. ರಾಮಮೂರ್ತಿ ಅವರ ಅಧಿಕೃತ ಖಾತೆಯಿಂದ 'ಗುಡ್ ಮಾರ್ನಿಂಗ್' ಮತ್ತು 'ಗುಡ್ ನೈಟ್' ಎಂಬ ಸಂದೇಶಗಳು ಬಂದಿವೆ ಎನ್ನಲಾಗಿದೆ. ಶಾಸಕರು ತಮಗೆ ಸಂದೇಶ ಕಳುಹಿಸಿರುವ ಸ್ಕ್ರೀನ್ ಶಾಟ್‌ಗಳನ್ನು (Screenshots) ಯುವತಿ ತನ್ನ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾಳೆ. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ವಿರುದ್ಧ ಟ್ರೋಲ್‌ಗಳು ಶುರುವಾದವು.
ಈ ವಿಚಾರವಾಗಿ ತಕ್ಷಣವೇ ಪ್ರತಿಕ್ರಿಯಿಸಿರುವ ಶಾಸಕ ಸಿ.ಕೆ. ರಾಮಮೂರ್ತಿ, 'ನನ್ನ ಇನ್‌ಸ್ಟಾಗ್ರಾಮ್ ಖಾತೆಯು ದುಷ್ಕರ್ಮಿಗಳಿಂದ ಹ್ಯಾಕ್ ಆಗಿದೆ. ನಾನು ಯಾರಿಗೂ ಈ ರೀತಿಯ ಸಂದೇಶಗಳನ್ನು ಕಳುಹಿಸಿಲ್ಲ. ಈ ಕೃತ್ಯದ ಹಿಂದೆ ನನ್ನ ತೇಜೋವಧೆ ಮಾಡುವ ಸಂಚು ಅಡಗಿರಬಹುದು' ಎಂದು ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ಈ ನಕಲಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ಸೈಬರ್ ಕ್ರೈಂ ಪೊಲೀಸರಿಗೆ (Cyber Police) ದೂರು ನೀಡಲು ನಿರ್ಧರಿಸಿದ್ದಾರೆ. ಹ್ಯಾಕರ್‌ಗಳು ತಮ್ಮ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಇಂತಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂಬುದು ಶಾಸಕರ ವಾದವಾಗಿದೆ.
ಒಟ್ಟಾರೆಯಾಗಿ ವಿಚಾರ ಏನಿದ್ದರೂ, ರಾಜಕೀಯ ಮುಖಂಡರೊಬ್ಬರ ಖಾತೆಯಿಂದ ಯುವತಿಯೊಬ್ಬಳಿಗೆ ವೈಯಕ್ತಿಕ ಸಂದೇಶ ಹೋಗಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕೆಲವರು ಇದನ್ನು ಟ್ರೋಲ್ ಮಾಡುತ್ತಿದ್ದರೆ, ಇನ್ನು ಕೆಲವರು ಹ್ಯಾಕಿಂಗ್ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸೈಬರ್ ಪೊಲೀಸರ ತನಿಖೆಯ ನಂತರವಷ್ಟೇ ಈ ಸಂದೇಶಗಳನ್ನು ಶಾಸಕರೇ ಕಳುಹಿಸಿದ್ದೇ ಅಥವಾ ಹ್ಯಾಕರ್ಸ್ ಕೈವಾಡವೇ ಎಂಬ ಸತ್ಯಾಂಶ ಹೊರಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ