
ಬೆಂಗಳೂರು (ಅ.16): ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಯಾಕ್ಲಾಗ್ (ಹಿಂಬಾಕಿ) ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಪ್ರಕಟಿಸಬೇಕು ಹಾಗೂ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಜತೆಗೆ ವಿಲೀನ ಮಾಡದೆ ಪ್ರತ್ಯೇಕವಾಗಿ ಇಡೀ ರಾಜ್ಯಕ್ಕೆ ಒಮ್ಮೆಲೇ ನೋಟಿಫಿಕೇಷನ್ ಹೊರಡಿಸಲು ಸಚಿವ ಸಂಪುಟ ಉಪವಸಮಿತಿ ನಿರ್ಧರಿಸಿದೆ. ವಿಕಾಸಸೌಧದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಕುರಿತು ಪರಾಮರ್ಶಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂಪುಟ ಉಪಸಮಿತಿ ಸಭೆಯಲ್ಲಿ ಬ್ಯಾಗ್ಲಾಗ್ ಹುದ್ದೆ ಭರ್ತಿ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಯಲ್ಲಿ ಬಾಕಿ ಇರುವ ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳ ಮಾಹಿತಿ ಪಡೆದ ಸಮಿತಿ, ಕೂಡಲೇ ನೇಮಕಾತಿಗೆ ಚಾಲನೆ ನೀಡುವಂತೆ ಸೂಚಿಸಿತು. ಜತೆಗೆ ಪ್ರಸ್ತುತ ಚಾಲನೆ ನೀಡಲಾಗಿರುವ ನೇಮಕಾತಿ ಜತೆಗೆ ಬ್ಯಾಕ್ಲಾಗ್ ನೇಮಕಾತಿ ಸೇರ್ಪಡೆ ಮಾಡಬಾರದು. ಪ್ರತಿ ಜಿಲ್ಲೆಗೂ ಪ್ರತ್ಯೇಕ ನೋಟಿಫಿಕೇಷನ್ ಹೊರಡಿಸದೆ, ರಾಜ್ಯಕ್ಕೆ ಅನ್ವಯವಾಗುವಂತೆ ಅಧಿಸೂಚನೆ ಪ್ರಕಟಿಸಬೇಕು. ನಂತರ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳನ್ನು ಹಂಚಬೇಕು ಎಂಬುದನ್ನು ನಿರ್ಧಾರ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಎಸ್ಸಿ/ಎಸ್ಟಿ ನೇಮಕಾತಿ ಹಿಂಬಾಕಿ ಹೆಚ್ಚು ಪ್ರಮಾಣದಲ್ಲಿ ಉಳಿದಿರುವುದನ್ನು ಗಮನಿಸಿದ ಉಪಸಮಿತಿ ಸದಸ್ಯರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಯಾವ ಶಿಕ್ಷಣ ಸಂಸ್ಥೆಗಳು ಇದರ ಕುರಿತು ನಿರ್ಲಕ್ಷ್ಯ ವಹಿಸುತ್ತವೋ ಅಂತಹ ಸಂಸ್ಥೆಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನ ಸೇರಿ ಇನ್ನಿತರ ನೆರವು ಸ್ಥಗಿತಕ್ಕೆ ಸೂಚನೆ ನೀಡಲಾಯಿತು.
ಇದೇ ವೇಳೆ ಅನುದಾನಿತ ಶಾಲಾ-ಕಾಲೇಜುಗಳು ಬ್ಯಾಕ್ಲಾಗ್ ಹುದ್ದೆ ನೇಮಕಾತಿಗೆ ಆಡಳಿತ ಮಂಡಳಿ ಆಸಕ್ತಿ ವಹಿಸಿದರೂ ಸರ್ಕಾರದ ಅಧಿಕಾರಿಗಳು ಅದಕ್ಕೆ ಒಪ್ಪಿಗೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಪ್ರಸ್ತಾಪಿಸಲಾಯಿತು. ಅದಕ್ಕೆ ಉಪಸಮಿತಿ ಸದಸ್ಯರು, ಒಪ್ಪಿಗೆ ಕೊಡಲು ಅಡ್ಡಿ ಮಾಡುತ್ತಿರುವುದೇಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ, ಉಪಸಮಿತಿ ಸಭೆಗೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಗೈರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಲಾಯಿತು.
ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ವಿಶೇಷ ಕಾರ್ಯಾಚರಣೆ ನಡೆಸಬೇಕು. ಮುಂದಿನ ಒಂದೂವರೆ ವರ್ಷದಲ್ಲಿ ಎಲ್ಲ ಹಿಂಬಾಕಿ ಹುದ್ದೆ ಭರ್ತಿಯಾಗಬೇಕು. ನೇಮಕಾತಿ ವೇಳೆ ಕೇವಲ ಅಂಕ ಮತ್ತು ವಯಸ್ಸು ಪರಿಗಣಿಸಬೇಕು. ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಮತ್ತೊಮ್ಮೆ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ನೇರವಾಗಿ ನೇಮಕಾತಿ ನಡೆಸಬಹುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಸಚಿವರಾದ ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಟಿ.ರಘುಮೂರ್ತಿ, ಕೆ.ಎಸ್.ಬಸವಂತಪ್ಪ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಎಸ್ಸಿಎಸ್ಪಿ-ಟಿಎಸ್ಪಿ ನೋಡಲ್ ಏಜೆನ್ಸಿ ಸಲಹೆಗಾರ ಡಾ.ಇ.ವೆಂಕಟಯ್ಯ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ