ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಶೇ. 25 ರಷ್ಟು ಏರಿಕೆಗೆ ಸಮಿತಿ ಶಿಫಾರಸು!

Gowthami K   | Kannada Prabha
Published : Oct 16, 2026, 06:31 AM IST
KSRTC bus

ಸಾರಾಂಶ

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ನಷ್ಟವನ್ನು ಸರಿದೂಗಿಸಲು ಬಸ್ ಪ್ರಯಾಣ ದರವನ್ನು ಶೇ.25ರಷ್ಟು ಹೆಚ್ಚಿಸುವಂತೆ ಅತುಲ್ ತಿವಾರಿ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಡೀಸೆಲ್ ಬೆಲೆ ಏರಿಕೆ ಮತ್ತು ಶಕ್ತಿ ಯೋಜನೆಯ ಬಾಕಿಯಿಂದಾಗಿ ನಿಗಮಗಳು ಸಂಕಷ್ಟದಲ್ಲಿವೆ. ನವೆಂಬರ್‌ನಲ್ಲಿ ಸರ್ಕಾರವು ಶೇ.15-17ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ.

 ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಹೊರೆ ತಗ್ಗಿಸಲು ಮತ್ತು ನಿಗಮಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಸ್‌ ಪ್ರಯಾಣ ದರವನ್ನು ಕನಿಷ್ಠ ಶೇ.25 ರಷ್ಟು ಹೆಚ್ಚಳ ಮಾಡಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಆರ್ಥಿಕ ನೆರವಿಗಾಗಿ ಪದೇ ಪದೇ ಸರ್ಕಾರದ ಮೊರೆ ಹೋಗಲಾಗುತ್ತಿದೆ. ಅದರ ಜತೆಗೆ ಸಿಬ್ಬಂದಿ ವೇತನ ಹೆಚ್ಚಳ, ಡೀಸೆಲ್‌ ದರ ಹೆಚ್ಚಳದಿಂದಾಗಿ ನಿಗಮಗಳ ಪರಿಸ್ಥಿತಿ ಮತ್ತಷ್ಟು ಹಾಳಾಗಿದೆ. ಹೀಗಾಗಿ ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಅದಕ್ಕೂ ಮುನ್ನ ನಿಗಮಗಳ ಆರ್ಥಿಕ ಪರಿಸ್ಥಿತಿ ಅರಿಯಲು ಹಾಗೂ ಪ್ರಯಾಣ ದರ ಹೆಚ್ಚಳದ ಪ್ರಮಾಣ ನಿರ್ಧರಿಸುವ ಸಂಬಂಧ ನಿವೃತ್ತ ಐಎಎಸ್‌ ಅಧಿಕಾರಿ ಅತುಲ್‌ ತಿವಾರಿ ನೇತೃತ್ವದಲ್ಲಿ ದರ ಪರಿಷ್ಕರಣೆ ಸಮಿತಿ ರಚಿಸಲಾಗಿತ್ತು. ಸಮಿತಿಯು ಇದೀಗ ವರದಿ ಸಲ್ಲಿಸಿದ್ದು, ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕನಿಷ್ಠ ಶೇ.25ರಷ್ಟು ಬಸ್‌ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಷ್ಟದ ಬಗ್ಗೆ ಅಧ್ಯಯನ:

ಸಮಿತಿ ಕಳೆದ ಮೂರ್ನಾಲ್ಕು ತಿಂಗಳಿಗೂ ಹೆಚ್ಚಿನ ಅವಧಿ ನಾಲ್ಕೂ ನಿಗಮಗಳ ಘಟಕ ಸೇರಿ ಇನ್ನಿತರ ಕಡೆಗಳಿಗೆ ಭೇಟಿ ನೀಡಿ ಸಮಗ್ರ ಆರ್ಥಿಕ ಪರಿಸ್ಥಿತಿ ಮತ್ತು ನಷ್ಟದ ಕುರಿತು ಅಧ್ಯಯನ ನಡೆಸಿದೆ. ನಿಗಮಗಳ ಉಳಿವಿಗೆ ಕೈಗೊಳ್ಳಬೇಕಾದ ತುರ್ತು ಕ್ರಮಗಳು, ದೀರ್ಘಾವಧಿ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಿದೆ. ವರದಿಯಲ್ಲಿ ದರ ಏರಿಕೆ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಹೊರೆಯಾಗಲಿದೆ. ಆದರೆ, ನಿಗಮಗಳ ಆರ್ಥಿಕ ಪರಿಸ್ಥಿತಿ ಸದೃಢಗೊಳಿಸಲು ದರ ಪರಿಷ್ಕರಣೆ ಮಾಡಬೇಕಿದೆ. ಒಂದು ವೇಳೆ ದರ ಏರಿಕೆ ವಿಳಂಬವಾದರೆ ನಿಗಮಗಳ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಎಂದು ಹೇಳಲಾಗಿದೆ.

ಸಿಬ್ಬಂದಿ ವೇತನ ಹೆಚ್ಚಳ, ಬಿಡಿಭಾಗಗಳು, ಡೀಸೆಲ್‌ ಬೆಲೆ ಹೆಚ್ಚಳದಿಂದಾಗಿ ಸಾರಿಗೆ ನಿಗಮಗಳಿಗೆ ವಾರ್ಷಿಕ ಅಂದಾಜು 8 ಸಾವಿರ ಕೋಟಿ ರು.ನಷ್ಟು ನಷ್ಟವುಂಟಾಗುತ್ತಿದೆ. ಅದರ ನಡುವೆ ಶಕ್ತಿ ಯೋಜನೆ ಸೇರಿ ಸರ್ಕಾರದಿಂದ 6600 ಕೋಟಿ ರು.ಗಳಷ್ಟು ಬಾಕಿ ಬರಬೇಕಿದೆ. ಅಲ್ಲದೆ ಶಕ್ತಿ ಯೋಜನೆ ಜಾರಿ ನಂತರ ನಿಗಮಗಳಿಗೆ ಹಣ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ನಿಗಮಗಳನ್ನು ಸದೃಢಗೊಳಿಸಲು ಶೇ.25ರಷ್ಟು ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

15-17% ಹೆಚ್ಚಳ?

ದರ ಪರಿಷ್ಕರಣೆ ಸಮಿತಿಯು ಶೇ.25ರಷ್ಟು ಪ್ರಯಾಣ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದ್ದರೂ, ಸದ್ಯಕ್ಕೆ ನಾಲ್ಕೂ ನಿಗಮಗಳ ಪ್ರಯಾಣ ದರ ಶೇ. 15ರಿಂದ 17ರಷ್ಟು ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಅದರಲ್ಲಿ ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿಗಳಿಗೆ ಶೇ.13ರಿಂದ 15 ಮತ್ತು ಬಿಎಂಟಿಸಿಗೆ ಶೇ.17ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಆದೇಶಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಲಾಗುತ್ತಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅತುಲ್‌ ತಿವಾರಿ ಸಮಿತಿ ವರದಿ ಮಂಡಿಸಿ, ಅದರ ಬಗ್ಗೆ ಚರ್ಚಿಸಿ ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸದ್ಯ ವಿಧಾನಪರಿಷತ್‌ ಚುನಾವಣೆ ನಡೆಯುತ್ತಿದ್ದು, ನವೆಂಬರ್‌ ಮೊದಲ ವಾರದಲ್ಲಿ ಪ್ರಯಾಣ ದರ ಹೆಚ್ಚಳದ ಆದೇಶಿಸುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷದಿಂದ ಸಿಗದ ಜಾತಿ ಸಿಂಧುತ್ವಸರ್ಟಿಫಿಕೆಟ್‌: ಉತ್ತರ ಕನ್ನಡ ಜಿಲ್ಲಾಡಳಿತ ವಿರುದ್ಧ ಹೈಕೋರ್ಟ್‌ ಆಕ್ರೋಶ
ಲಿವರ್ ಪೂಲ್ ವಿವಿ ಬೆಂಗಳೂರು ಕ್ಯಾಂಪಸ್ ಆರಂಭ, ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯ