
ಬೆಂಗಳೂರು (ಮೇ.25): ಕೋವಿಡ್ ಸೋಂಕಿನಿಂದ ಅಥವಾ ಇತರೆ ಕಾರಣಗಳಿಂದ ಸಾವನ್ನಪ್ಪಿರುವ ವ್ಯಕ್ತಿಯ ಅಸ್ಥಿ ವಿಸರ್ಜನೆಗೆ ತೆರಳುವವರನ್ನು ಮಾರ್ಗ ಮಧ್ಯೆ ಯಾರೂ ತಡೆಯಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೃತ ವ್ಯಕ್ತಿಗಳ ಅಸ್ಥಿಯನ್ನು ಅವರವರ ಧಾರ್ಮಿಕ ವಿಧಾನಗಳನ್ವಯ ಅವರಿಗೆ ಸೂಕ್ತ ಎನಿಸುವ ಸ್ಥಳಗಳಲ್ಲಿ ವಿಸರ್ಜಿಸಲು, ಇದಕ್ಕಾಗಿ ಗರಿಷ್ಠ ನಾಲ್ಕು ಜನರು ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ವೇಳೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮೃತರ ಅಸ್ಥಿ ವಿಸರ್ಜನೆಗೆ ಸಾರ್ವಜನಿಕರಾಗಲಿ ಅಥವಾ ಸಂಬಂಧಿಸಿದ ಪ್ರಾಧಿಕಾರಗಳಾಗಲಿ ಅಡ್ಡಿಪಡಿಸುವಂತಿಲ್ಲ. ಈ ಆದೇಶವನ್ನು ಬಿಬಿಎಂಪಿ, ಪೊಲೀಸ್ ಇಲಾಖೆ, ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಸ್ಥಳೀಯ ಪ್ರಾಧಿಕಾರಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಸರ್ಕಾರದ ಬಳಿ 1000 ಅನಾಥ ಶವಗಳ ಅಸ್ಥಿ: ಸಚಿವ ಅಶೋಕ್ ..
ಮೃತ ವ್ಯಕ್ತಿಗಳ ಅಂತ್ಯಸಂಸ್ಕಾರ ಬಳಿಕ ಅಸ್ಥಿಯನ್ನು ಅವರವರ ಧರ್ಮಾನುಸಾರ ವಿಸರ್ಜಿಸುವ ಪದ್ಧತಿ ರೂಢಿಯಲ್ಲಿದೆ. ಇಂತಹ ಕ್ರಿಯೆಗೆ ತೆರಳುವ ಮೃತರ ಸಂಬಂಧಿಕರು ಅಥವಾ ವಾರಸುದಾರರ ಸಂಚಾರಕ್ಕೆ ಮತ್ತು ವಿಸರ್ಜನಾ ಸ್ಥಳದಲ್ಲಿ ಅವಕಾಶ ಮಾಡಿಕೊಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇದನ್ನು ಪರಿಗಣಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರು ಮೃತರ ಅಸ್ಥಿಯನ್ನು ಅವರವರ ಧಾರ್ಮಿಕ ವಿಧಿ-ವಿಧಾನಗಳನುಸಾರ ಅವರಿಗೆ ಸೂಕ್ತವೆನಿಸುವ ಸ್ಥಳದಲ್ಲಿ ವಿಸರ್ಜಿಸಲು ಯಾವುದೇ ಅಡಚಣೆಯನ್ನು ನೀಡದೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಆದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ