ಲಾಕ್‌ಡೌನ್ ಸಡಿಲ ಇಲ್ಲ| ಮೇ 3ರವರೆಗೆ ನಿರ್ಬಂಧ ಮುಂದುವರಿಕೆ| ರಾಜ್ಯ ಸರ್ಕಾರದಿಂದ ಕಠಿಣ ತೀರ್ಮಾನ| 2-3 ದಿನ ಬಳಿಕ ಮತ್ತೆ ಸಭೆ ನಡೆಸಿ ಚರ್ಚೆ
ಬೆಂಗಳೂರು(ಏ.21): ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಲು ಕೈಗೊಂಡಿದ್ದ ನಿರ್ಧಾರವನ್ನು ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಕೈಬಿಟ್ಟಿದ್ದು, 2-3 ದಿನದಲ್ಲಿ ಸಭೆ ನಡೆಸಿ ಸಡಿಲಿಕೆ ಕುರಿತು ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಕೃಷಿ ವಲಯ, ತೋಟಗಾರಿಕೆ ಕ್ಷೇತ್ರಕ್ಕೆ ಈಗಾಗಲೇ ನೀಡಿರುವ ವಿನಾಯಿತಿ ಮುಂದುವರಿಯಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇ 3ರವರೆಗೆ ಲಾಕ್‌ಡೌನನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸೋರಿಗೆ ಗುಂಡಿಕ್ಕಿ ಎಂದ BJP ಶಾಸಕ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಲಾಕ್‌ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ಕೇಂದ್ರದ ಮಾರ್ಗಸೂಚಿಯನ್ವಯ ಕೆಲವು ಸಡಿಲಿಕೆ ಮಾಡಲು ಅವಕಾಶ ಇರುವ ಕಾರಣ ಎರಡ್ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟಂಥ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಕೃಷಿ ಉತ್ಪನ್ನಗಳು ಯಥಾಸ್ಥಿತಿಯಲ್ಲಿ ಸಾಗಣೆಯಾಗಲಿವೆ. ಪ್ರಸ್ತುತ ಜಾರಿಯಲ್ಲಿರುವ ನಿಬಂಧನೆಗಳು ಮುಂದುವರಿಯಲಿದ್ದು, ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರದ ಮಾರ್ಗಸೂಚಿ ಅನ್ವಯ ಕೆಲ ಸಡಿಲಿಕೆ ಮಾಡಲು 2-3 ದಿನದಲ್ಲಿ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೊರೋನಾ ಸೋಂಕು ತಡೆಯುವ ಸಂಬಂಧ ರಚನೆಯಾಗಿರುವ ಕಾರ್ಯಪಡೆಯ ಜತೆ ಸಮಾಲೋಚನೆ ನಡೆಸಲಿದ್ದಾರೆ. ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ನಂತರ ಸಡಿಲಿಕೆಯ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಪ್ರಸ್ತುತ ಜಾರಿಯಲ್ಲಿರುವ ಷರತ್ತುಗಳು ಮುಂದುವರಿಯಲಿವೆ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್; ದೂರು ದಾಖಲು
ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ಹಿರಿಯ ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಸಿ ಕೈಗಾರಿಕೆ, ಗಾರ್ಮೆಂಟ್ಸ್ ಕೆಲಸಕ್ಕೆ ಶೇ.33ರಷ್ಟುಅನುಮತಿ ನೀಡುವುದು, ಕಟ್ಟಡ ಕಾಮಗಾರಿಗೆ ಅವಕಾಶ ನೀಡುವುದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಸೇರಿ ಒಂದು ಜಿಲ್ಲೆಯಾಗಿ ಪರಿಗಣಿಸುವ ಬಗ್ಗೆ ತೀರ್ಮಾನಿಸಿದ್ದರು. ಕೊರೋನಾ ಸೋಂಕು ಹೆಚ್ಚಾಗುತ್ತಿರುವುದು ಮತ್ತು ಕೆಲವೆಡೆ ಕಾನೂನು ಸುವ್ಯವಸ್ಥೆ ಹಾಳಾದ ಕಾರಣಕ್ಕಾಗಿ ಸಡಿಲಿಕೆ ನಿರ್ಧಾರ ಕೈಬಿಟ್ಟು ಲಾಕ್‌ಡೌನ್ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ, ಕೇಂದ್ರದ ಮಾರ್ಗಸೂಚಿಗಳ ಪಾಲನೆ ಅವಧಿಯು ಮಂಗಳವಾರ ಮಧ್ಯರಾತ್ರಿವರೆಗೆ ವಿಸ್ತರಣೆಯಾಗಿರುವುದರಿಂದ ಸಡಿಲಿಕೆ ಮಾಡಲು ಕೈಗೊಂಡಿರುವ ಕ್ರಮವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. 2-3 ದಿನದಲ್ಲಿ ಮುಖ್ಯಮಂತ್ರಿಗಳು ಸಭೆ ನಡೆಸಿ ಈಗಾಗಲೇ ತೀರ್ಮಾನ ಕೈಗೊಂಡಿರುವ ಸಡಿಲಿಕೆಯನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸರ್ಕಾರ ಮತ್ತೊಮ್ಮೆ ಸಭೆ ನಡೆಸಿ ಸಡಿಲಿಕೆ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಸಡಿಲಿಕೆಗಳು ಅನ್ವಯವಾಗುವುದಿಲ್ಲ. ಕೈಗಾರಿಕೆಗಳು, ಕಾರ್ಖಾನೆಗಳು ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೇ, ಕೇಂದ್ರದ ಪರಿಷ್ಕೃತ ಮಾರ್ಗಸೂಚಿಯಲ್ಲಿನ ಸಡಿಲಿಕೆ ನಿಯಮಗಳನ್ನು ಗಮನಿಸಿ ರಾಜ್ಯದ ಪರಿಸ್ಥಿತಿಗೆ ತಕ್ಕಂತೆ ಸಡಿಲಿಕೆಯ ಕುರಿತು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.
ರೈಲು ಸಂಚಾರ ಇದ್ದಿದ್ರೆ ದೆಹಲಿಗೆ ಹೋಗಿ ಪ್ರತಿಭಟಿಸ್ತಿದ್ದೆ ಎಂದು ದೇವೇಗೌಡ
ಕೃಷಿಗೆ ವಿನಾಯ್ತಿ
- ಕೈಗಾರಿಕೆ, ಕಾರ್ಖಾನೆ, ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಿಲ್ಲ
- ಆದರೆ, ಕೃಷಿ ಚಟುವಟಿಕೆಗೆ ನೀಡಿದ ವಿನಾಯಿತಿ ಮುಂದುವರಿಕೆ
- ಉಳಿದಂತೆ ಈ ಹಿಂದಿನಂತೆಯೇ ಕಟ್ಟುನಿಟ್ಟಿನ ನಿರ್ಬಂಧಗಳು ಜಾರಿ
- ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ: ಸಚಿವ ಮಾಧುಸ್ವಾಮಿ