ಭತ್ತ, ರಾಗಿ, ಬಿಳಿಜೋಳಕ್ಕೆ ಬೆಂಬಲ ಬೆಲೆ

By Kannadaprabha NewsFirst Published Dec 13, 2019, 8:38 AM IST
Highlights

ರಾಗಿ ಭತ್ತ  ಹಾಗೂ ಜೋಳದ ಮೇಲೆ ಬೆಂಬಲ ನೀಡಿ ಖರೀದಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು [ಡಿ.13]:  ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 1.75 ಲಕ್ಷ ಟನ್‌ ಭತ್ತ, 2 ಲಕ್ಷ ಟನ್‌ ರಾಗಿ ಹಾಗೂ 1,241 ಟನ್‌ ಬಿಳಿ ಜೋಳ ಖರೀದಿಸಲು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ರೈತರಿಂದ ಖರೀದಿಸುವ ಪ್ರತಿ ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ 1,815 ರು., ‘ಎ’ ಗ್ರೇಡ್‌ ಭತ್ತ ಪ್ರತಿ ಕ್ವಿಂಟಲ್‌ಗೆ 1,835 ರು., ಬಿಳಿ ಜೋಳ 2550-2570 ರು. ಹಾಗೂ ಪ್ರತಿ ಕ್ವಿಂಟಲ್‌ ರಾಗಿಗೆ 3,150 ರು. ನಿಗದಿ ಮಾಡಲಾಗಿದೆ. ಪ್ರತಿ ರೈತರಿಂದ 40 ಕ್ವಿಂಟಲ್‌ ಭತ್ತ, 75 ಕ್ವಿಂಟಲ್‌ ರಾಗಿ ಹಾಗೂ 75 ಕ್ವಿಂಟಲ್‌ ಬಿಳಿ ಜೋಳ ಖರೀದಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೃಷಿ ಇಲಾಖೆ ಸಚಿವರೂ ಆದ ಲಕ್ಷ್ಮಣ ಸವದಿ ಅವರು, ಭತ್ತ, ರಾಗಿ ಮತ್ತು ಬಿಳಿ ಜೋಳವನ್ನು ಜ.1, 2020ರಿಂದ ಮಾ.31, 2020ರವರೆಗೆ ಖರೀದಿಸಲು ತೀರ್ಮಾನಿಸಲಾಗಿದೆ. ಭತ್ತ ಖರೀದಿ ಬಳಿಕ ಆಯಾ ಜಿಲ್ಲೆಗಳಲ್ಲಿ ಅಕ್ಕಿಯನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಂದ ಆಯ್ಕೆ ಮಾಡಿ ಗುರುತಿಸಿದ ಅಕ್ಕಿ ಗಿರಣಿಗೆ ನೀಡಲಾಗುವುದು. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ ಹಾಗೂ ಬಿಳಿ ಜೋಳ ಖರೀದಿಗೆ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗಳಿಗೆ ಆಯಾ ನಿಯೋಜಿತ ಜಿಲ್ಲೆಗಳಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ರಚನೆ:

ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಂದ ಉತ್ಪನ್ನಗಳನ್ನು ಖರೀದಿ ಮಾಡಲಾಗುವುದು. ಇದಕ್ಕಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಲಾಗುವುದು. ಸಮಿತಿಗಳ ಮೂಲಕ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜತೆಗೆ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಯಾಬೀನ್‌ ಖರೀದಿಗೂ ಅನುಮೋದನೆ

ರಾಜ್ಯದಲ್ಲಿ ಬೆಳೆದ ಸೋಯಾಬೀನ್‌ ಉತ್ಪನ್ನಗಳನ್ನು ಕೂಡ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಮಾರುಕಟ್ಟೆಒಕ್ಕೂಟದ ಮೂಲಕ ಖರೀದಿಸಲು ಅನುಮೋದಿಸಲಾಗಿದೆ. ಜತೆಗೆ, ಶೇಂಗಾ ಹಾಗೂ ತೊಗರಿ ಬೆಳೆ ಉತ್ಪನ್ನಗಳನ್ನು ಕೂಡ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ಸಭೆಯಲ್ಲಿ ಸಚಿವ ಸಂಪುಟ ಸಭೆ ಉಪ ಸಮಿತಿ ಸದಸ್ಯರಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹಾಜರಿದ್ದರು.

click me!