
ಬೆಂಗಳೂರು (ಏ.09): ರಾಜ್ಯದಲ್ಲಿ ಇನ್ನುಮುಂದೆ ಮತ್ತೊಬ್ಬ ಧಾರ್ಮಿಕ ಮಹಾನ್ ಪುರುಷ ಭಗವಾನ್ ಗೌತಮ ಬುದ್ಧನ ಜಯತಂತಿಯನ್ನು ಸರ್ಕಾರದ ವತಿಯಿಂದಲೇ ಆಚರಣೆ ಮಾಡುವುದಕ್ಕೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಬುದ್ಧ ಆಚರಣೆಗೆ ಮಾಡಲಾಗುವ ವೆಚ್ಚವನ್ನು ಭರಿಸುವ ಬಗ್ಗೆ ಆದೇಶದಲ್ಲಿ ತಿಳಿಸಲಾಗಿದೆ.
ಮೈಸೂರಿನ ಸಹಕಾರ ಸಂಘಗಳ ಅಪರ ನಿಬಂಧಕರು (ನಿ) 2023ರಲ್ಲಿ ಪತ್ರವನ್ನು ಬರೆದು, ರಾಜ್ಯದಲ್ಲಿ ಮಹಾವೀರ, ವಾಲ್ಮೀಕಿ, ಕನಕದಾಸರು ಮುಂತಾದ ಮಹಾತ್ಮ ದಾರ್ಶನಿಕರ ಜಯಂತಿಗಳನ್ನು ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅವುಗಳ ಆಚರಣೆಯನ್ನು ಜಾರಿಗೆ ತರಲಾಗಿದೆ. ಆದರೆ, ಏಷ್ಯಾ ಖಂಡದ ಹಲವಾರು ರಾಷ್ಟ್ರಗಳು ಬುದ್ಧ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ವೈಭವದಿಂದ ಆಚರಿಸಲಾಗುತ್ತಿದೆ. ವಿಶ್ವದ ಪ್ರಥಮ ಹಾಗೂ ಶ್ರೇಷ್ಠ ದಾರ್ಶನಿಕರಾದ ಬುದ್ಧರ ಜಯಂತಿಯನ್ನು ಅವರು ಜನಿಸಿದ ಭಾರತದಲ್ಲಿ ಸರ್ಕಾರದ ವತಿಯಿಂದ ಆಚರಿಸುವುದು ಸೂಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಗೌತಮ ಬುದ್ಧ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಸರ್ಕಾರದ ವತಿಯಿಂದ ಪ್ರತಿವರ್ಷ ಆಯೋಜಿಸಿ ಆಚರಿಸಲು ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಈಗಾಗಲೇ ವಾರ್ಷಿಕವಾಗಿ ವಿವಿಧ ಮಹಾಪುರುಷರ 32 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಭಗವಾನ್ ಬುದ್ಧರ ಜಯಂತಿಯನ್ನು ಇಲಾಖಾ ವತಿಯಿಂದ ಆಚರಿಸುವ ಬಗ್ಗೆ ಸರ್ಕಾರದ ಮಾರ್ಗದರ್ಶನ ನೀಡುವಂತೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೋರಿದ್ದರು.
ಇದನ್ನೂ ಓದಿ: ಬಣಜಗಳ ಮೇಲ್ಮಟ್ಟದಲ್ಲಿದೆ, ತಳಮಟ್ಟದಲ್ಲಿ ಅಲ್ಲ: ಮುಖಾಮುಖಿಯಲ್ಲಿ ಶಾಸಕ ವಿ.ಸುನೀಲ್‌ಕುಮಾರ್ ಹೇಳಿದ್ದೇನು?
ಈ ಹಿನ್ನೆಲೆಯಲ್ಲಿ ಭಗವಾನ್ ಬುದ್ಧರ ಜಯಂತಿಯನ್ನು ಪ್ರತಿ ವರ್ಷ ಬುದ್ಧ ಪೌರ್ಣಿಮೆಯಂದು ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಿಸಲು ಸರ್ಕಾರವು ಆದೇಶಿಸಿದೆ. ಸದರಿ ಜಯಂತಿಯ ಆಚರಣೆಗೆ ತಗಲುವ ವೆಚ್ಚವನ್ನು ಮಹಾಪುರುಷರ ಜಯಂತಿಗಳ ಆಚರಣೆಗೆ 2025-26ನೇ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯಪಾಲರ ಆದೇಶದ ಅನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ