
ಬೆಂಗಳೂರು (ಏ.09): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ಮುಂದಿನ 15 ವರ್ಷದ ಅಗತ್ಯತೆಯನ್ನು ಮನಗಂಡು ರಾಜ್ಯ ಸರ್ಕಾರದಿಂದ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ನಿರ್ಮಿಸಲು 3 ಜಾಗಗಳನ್ನು ಗುರುತಿಸಿದೆ. ಇದೀಗ ಕೇಂದ್ರ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ತಂಡವು ಸ್ಥಳ ಪರಿಶೀಲನೆಗೆ ಆಗಮಿಸಿದ್ದು, ನೆಲಮಂಗಲದ ಬಳಿ ಗುರುತಿಸಲಾದ ಭೂಮಿಯ ಬ್ಲೂಪ್ರಿಂಟ್ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣದ ಬ್ಲೂ ಪ್ರಿಂಟ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಬೆಂಗಳೂರು ಹೊರವಲಯದ ಎರಡನೇ ವಿಮಾನ ನಿಲ್ದಾಣದ ನೀಲಿ ನಕ್ಷೆ ಇದಾಗಿದೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಸುತ್ತಮುತ್ತಲಿನ ಒಂದು ಭಾಗ ಹಾಗೂ ಮೋಟಗಾನಹಳ್ಳಿ ಒಂದು ಭಾಗದ ಭೂಮಿಯನ್ನು ಕೇಂದ್ರದಿಂದ ಆಗಮಿಸಿರುವ ತಂಡವು ವೀಕ್ಷಣೆ ಮಾಡಿದೆ. ಕೇಂದ್ರ ವಿಮಾನ ಪ್ರಾಧಿಕಾರದ ಅಧಿಕಾರಿಗಳು ಈ ಎರಡು ಭಾಗದ ಭೂಮಿ ವೀಕ್ಷಣೆ ಮಾಡಿ ತೆರಳಿದ್ದಾರೆ. ಅಂದರೆ, ಬಹುತೇಕವಾಗಿ ಈ ಎರಡರಲ್ಲಿ ಒಂದು ಜಾಗದಲ್ಲಿಯೇ 2ನೇ ವಿಮಾನ ನಿಲ್ದಾಣವನ್ನು ನಿರ್ಮಿಸುವ ಸಾಧ್ಯತೆ ಹೆಚ್ಚಾಗಿದೆ.
ನೆಲಮಂಗಲ ತಾಲೂಕಿನ ಭಾಗ ಹಾಗೂ ಮೋಟಗಾನಹಳ್ಳಿ ಸೇರಿದಂತೆ ಎರಡು ಜಾಗದಲ್ಲಿಯೂ ಸುಮಾರು 5000ಕ್ಕೂ ಹೆಚ್ಚು ಎಕರೆ ವಿಶಾಲವಾದ ಪ್ರದೇಶವನ್ನು ಕೇಂದ್ರ ತಂಡವು ವೀಕ್ಷಣೆ ಮಾಡಿದೆ. ಜೊತೆಗೆ, ಇದರಲ್ಲಿ ಸರ್ಕಾರಿ ಭೂಮಿ ಯಾವ ಭಾಗದಲ್ಲಿ ಹೆಚ್ಚಾಗಿದೆಯೋ ಆ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಆಯ್ಕೆ ಮಾಡುವುದಕ್ಕೆ ಆದ್ಯತೆ ಕೊಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ವಿಮಾನ ನಿಲ್ದಾಣ ನಿರ್ಮಾಣದ ಖರ್ಚು ಕೂಡ ತಗ್ಗಲಿದೆ ಎಂಬುದು ಲೆಕ್ಕಾಚಾರವಾಗಿದೆ. ಇನ್ನು ಈ ನೀಲಿ ನಕ್ಷೆಯನ್ನು ರಾಜ್ಯ ಸರ್ಕಾರಿ ಅಧಿಕಾರಿಗಳು ಸರ್ವೆ ನಡೆಸಿ ತಯಾರು ಮಾಡಿದ್ದರು.
ಇದನ್ನೂ ಓದಿ: ಶಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲ್ಲ: ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ
ಮಂಗಳವಾರ ಕನಕಪುರ ಭಾಗದ ಸ್ಥಳ ಪರಿಶೀಲನೆ: ಬೆಂಗಳೂರು ನಗರದಲ್ಲಿ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರಕಾರವು ಗುರುತಿಸಿರುವ 3 ಸ್ಥಳಗಳ ಪೈಕಿ ಮಂಗಳವಾರ ಕನಕಪುರ ರಸ್ತೆಯಲ್ಲಿರುವ 2 ತಾಣಗಳ ಪರಿಶೀಲನೆಯನ್ನು ಮಾಡಿತ್ತು. ಈ ವೇಳೆ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವಂತೆ ಸೂಚಿಸಿದ್ದರು. ಸರಕಾರದ ಪರವಾಗಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹೆಚ್ಚುವರಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಖುಷ್ಬೂ ಗೋಯಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಹಾಜರಿದ್ದರು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣ ಜಾಲತಾಣದಲ್ಲಿ ಕನ್ನಡ ಭಾಷಾ ಆಯ್ಕೆ! ಟಿಕೆಟ್ ಬುಕಿಂಗ್, ವೇಳಾಪಟ್ಟಿ ಕನ್ನಡದಲ್ಲೇ ಲಭ್ಯ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ