ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಆಶ್ರಯ ಯೋಜನೆಗೆ ಆಯ್ಕೆ ಮಾಡುವ ವೇಳೆ ಸಾಕಷ್ಟುಅವ್ಯವಹಾರ, ಅಧಿಕಾರ ದುರುಪಯೋಗವಾಗಿರುವುದು ಕಂಡುಬಂದಿದೆ. ಇದರಿಂದ 7 ಲಕ್ಷ ಮನೆ ಮಂಜೂರಾತಿಗೆ ತಡೆ ಹಿಡಿಯಲಾಗಿದೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.
ಮೈಸೂರು [ಡಿ.25]: ಆಶ್ರಯ ಯೋಜನೆ ಫಲಾನುಭವಿಗಳ ಆಯ್ಕೆ ವೇಳೆ ಲೋಪವಾಗಿರುವುದರಿಂದ ಈ ಹಿಂದಿನ ಗ್ರಾಮ ಸಭೆಯಡಿ ಆಯ್ಕೆ ಪದ್ಧತಿ ಕೈಬಿಡುವ ಜೊತೆಗೆ 7 ಲಕ್ಷ ಮನೆಗಳ ಮಂಜೂರಾತಿ ವಾಪಸ್ ಪಡೆಯಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸಿ ಆಶ್ರಯ ಯೋಜನೆಗೆ ಆಯ್ಕೆ ಮಾಡುವ ವೇಳೆ ಸಾಕಷ್ಟುಅವ್ಯವಹಾರ, ಅಧಿಕಾರ ದುರುಪಯೋಗವಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಾರದರ್ಶಕತೆ ತರಲು ಗ್ರಾಮಸಭೆಯಡಿ ಆಯ್ಕೆ ಪದ್ಧತಿ ಕೈಬಿಡುವ ಜತೆಗೆ 7 ಲಕ್ಷ ಮನೆಗಳ ಮಂಜೂರಾತಿಗೂ ತಡೆ ನೀಡಲಾಗಿದೆ ಎಂದರು.
ಶಾಸಕರ ಸಮ್ಮುಖದಲ್ಲಿ ಹಂಚಿಕೆ: ಹಿಂದೆ ಗ್ರಾಮಸಭೆಯಲ್ಲಿ ತೆಗೆದುಕೊಂಡ ನಿರ್ಣಯವೇ ಅಂತಿಮವಾಗಿತ್ತು. ಈಗ ಲೋಪದೋಷಗಳು ಕಂಡುಬಂದಿರುವುದರಿಂದ ಇನ್ನು ಮುಂದೆ ಶಾಸಕರ ಸಮ್ಮುಖದಲ್ಲಿ ಹಂಚಿಕೆ ನಡೆಸಬೇಕು. ನಗರ ವ್ಯಾಪ್ತಿಯ ಕ್ಷೇತ್ರ ಹೊರತುಪಡಿಸಿ 187 ಕ್ಷೇತ್ರಗಳಲ್ಲಿ ಮನೆಗಳ ಫಲಾನುಭವಿಗಳ ಪಟ್ಟಿಅಂತಿಮವಾಗಿದ್ದನ್ನು ಕಾರ್ಯ ನಿರ್ವಹಣಾಧಿಕಾರಿ(ಇಒ) ಮತ್ತು ಶಾಸಕರು ಪರಿಶೀಲಿಸುವಂತೆ ಮಾಡಲಾಗುತ್ತದೆ. ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಕೆಲಸದಲ್ಲಿ ಚುರುಕುಗೊಳಿಸಲಾಗಿದೆ. ಸರ್ಕಾರ ಮಂಜೂರು ಮಾಡಿದ ಐದು ಲಕ್ಷ ಹಣದಲ್ಲಿ ಮನೆ ನಿರ್ಮಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಸರ್ಕಾರಿ ನೌಕರರ ರಜೆ ಪಡೆಯುವ ವಿಧಾನವಿನ್ನು ಸುಲಭ...
ವಸತಿ ಇಲಾಖೆಯಿಂದ ಈಗ ಒಂದು ಮತ್ತು ಎರಡನೇ ಹಂತದ ನಿರ್ಮಾಣ ಕಾರ್ಯದಲ್ಲಿ ಇರುವುದನ್ನು ಪೂರ್ಣಗೊಳಿಸಲು 211 ಕೋಟಿ ರು. ಮಂಜೂರು ಮಾಡಲಾಗಿದೆ. ಹಂಚಲಾಗಿದ್ದ 59,000 ಮನೆಗಳ ಪೈಕಿ 6,000 ಬೋಗಸ್ ಎನ್ನುವುದು ಕಂಡುಬಂದಿದೆ. ಬೀದರ್ ಜಿಲ್ಲೆಯ ಒಂದೇ ತಾಲೂಕಿನಲ್ಲಿ 22,000 ಮನೆಗಳ ಲೆಕ್ಕ ತೋರಿಸಲಾಗಿದೆ. ಇದರ ಸತ್ಯಾಂಶ ಹೊರತೆಗೆಯುವ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು.