ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಬೇಕಾ ಅಥವಾ ಈಗಿರುವಂತೆಯೇ 5 ಕೆ.ಜಿ. ಅಕ್ಕಿ ಬೇಕಾ ಎಂಬ ಪ್ರಾಯೋಗಿಕ ಯೋಜನೆಯನ್ನು ಒಂದು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ.
ಬೆಂಗಳೂರು (ಸೆ.05): ರಾಜ್ಯ ಸರ್ಕಾರದ ಕಾಂಗ್ರೆಸ್ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಜನರಿಗೆ 5 ಕೆ.ಜಿ. ಅಕ್ಕಿ ಹಾಗೂ ಬಾಕಿ 5 ಕೆ.ಜಿ. ಅಕ್ಕಿಯ ಬದಲಾಗಿ ಹಣವನ್ನು ಕೊಡಲಾಗುತ್ತಿದೆ. ಆದರೆ, ಈಗ ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಗಳು ಅಕ್ಕಿ ಕೊಡುವಂತೆ ಮನವಿ ಮಾಡಿದರೆ ಕೊಡಲು ಸಿದ್ಧವೆಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯದ ಜನರಿಗೆ 10 ಕೆ.ಜಿ ಅಕ್ಕಿ ಬೇಕಾ ಅಥವಾ ಸದರಿ ಜಾರಿಯಲ್ಲಿರುವ 5 ಕೆ.ಜಿ. ಅಕ್ಕಿ ಬದಲಾಗಿ ಹಣ ಬೇಕಾ ಎಂಬ ಯೋಜನೆಯನ್ನು ಪ್ರಾಯೋಗಿಕವಾಗಿ ಒಂದು ಜಿಲ್ಲೆಯಲ್ಲಿ ಜಾರಿಗೆ ತರಲು ಮುಂದಾಗಿದೆ.
ಹೌದು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹಸಿವುಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪ್ರತಿ ಕುಟುಂಬದ ತಲಾ ಒಬ್ಬ ಸದಸ್ಯರಿಗೂ ತಲಾ 10 ಕೆ.ಜಿ. ಅಕ್ಕಿಯನ್ನು ಕೊಡುವುದಾಗಿ ಗ್ಯಾರಂಟಿಯನ್ನು ಜಾರಿಗೆ ತಂದಿದ್ದರು. ಆದರೆ, ಈ ಯೋಜನೆ ಜಾರಿಯ ವೇಳೆ ಅಕ್ಕಿಯನ್ನು ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ವೇಳೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಬರಗಾಲ ಆವರಿಸಿದ್ದರಿಂದ ಕೇಂದ್ರ ಸರ್ಕಾರ ಯಾವುದೇ ರಾಜ್ಯುಗಳಿಗೆ ಅಕ್ಕಿಯನ್ನು ನೀಡದಿರಲು ತೀರ್ಮಾನ ಮಾಡಿತ್ತು. ಇದರಿಂದ ಕರ್ನಾಟಕಕ್ಕೆ ಅಕ್ಕಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಕನ್ನಡದ ಮೊದಲ ಕವಯತ್ರಿ ಅಕ್ಕ ಮಹಾದೇವಿಯ ಬಗ್ಗೆ ಅಕ್ಕರೆಯಿಂದ ಮಾತನಾಡಿದ ಕ್ವೀನ್ ಕಂಗನಾ!
ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಸರ್ಕಾರ ಹೇಗಾದರೂ ಮಾಡಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಬೇಕಾದ ಒತ್ತಡದಲ್ಲಿ ಇದ್ದುದರಿಂದ ತೆಲಂಗಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದರು. ರಾಜ್ಯದ ಜನತೆಗೆ ಪೂರೈಸುವಷ್ಟು ಅಕ್ಕಿ ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತಷ್ಟು ಪೇಚಿಗೆ ಸಿಲುಕಿತ್ತು. ರಾಜ್ಯದಲ್ಲಿಯೂ ಭೀಕರ ಬರಗಾಲ ಇದ್ದುದರಿಂದ ಜನತೆಗೆ ಅಕ್ಕಿಯನ್ನು ಪೂರೈಕೆ ಮಾಡುವುದು ಅನಿವಾರ್ಯ ಆಗಿದ್ದರೂ, ಸಕಾಲಕ್ಕೆ ಅಕ್ಕಿಯೇ ಸಿಗಲಿಲ್ಲ. ಆದ್ದರಿಂದ, ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದಿಂದ ಪೂರೈಸುವ 5 ಕೆ.ಜಿ. ಅಕ್ಕಿಯನ್ನು ನೀಡಿ ಉಳಿದ 5 ಕೆ.ಜಿ. ಅಕ್ಕಿಯ ಬದಲಾಗಿ ರಾಜ್ಯ ಸರ್ಕಾರದಿಂದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು.
ಪ್ರಸ್ತುತ ದೇಶದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಅಕ್ಕಿ ದಾಸ್ತಾನು ಹೆಚ್ಚಾಗಿದ್ದು, ಯಾವುದೇ ರಾಜ್ಯಗಳು ಅಕ್ಕಿ ಕೇಳಿದರೆ ಪೂರೈಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಜನರಿಗೆ ಸಂಪೂರ್ಣವಾಗಿ 10 ಕೆ.ಜಿ. ಅಕ್ಕಿಯನ್ನು ಪೂರೈಕೆ ಮಾಡಬೇಕೋ ಅಥವಾ ಪ್ರಸ್ತುತ ವಿತರಣೆ ಮಾಡುತ್ತಿರುವಂತೆ 5 ಕೆ.ಜಿ. ಅಕ್ಕಿ ಮತ್ತು ಬಾಕಿ 5 ಕೆ.ಜಿ. ಅಕ್ಕಿ ಬದಲಿಗೆ ಹಣ ಹಾಕಬೇಕಾ ಎಂಬ ಚಿಂತನೆಯಲ್ಲಿದೆ. ಹೀಗಾಗಿ, ರಾಜ್ಯದ ಯಾವುದಾದರೂ ಒಂದು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡಲು ತೀರ್ಮಾನಿಸಿದೆ. ಈ ಪ್ರಾಯೋಗಿಕ ಯೋಜನೆಯಿಂದ ಜನರಿಗೆ ಹೆಚ್ಚು ಅನುಕೂಲವಾದಲ್ಲಿ ಅದನ್ನು ಉಳಿದ ಎಲ್ಲ ಜಿಲ್ಲೆಗಳಿಗೂ ಅನ್ವಯ ಮಾಡಲಾಗುತ್ತದೆ. ಇಲ್ಲವೆಂದರೆ ಹಾಲಿ ಇರುವ ವ್ಯವಸ್ಥೆ ಮಾದರಿಯಲ್ಲಿಯೇ ಅಕ್ಕಿ ಮತ್ತು ಹಣ ನೀಡುವುದನ್ನು ಮುಂದುವರೆಸಲಾಗುತ್ತದೆ.
ಪತ್ನಿ ವಿಜಯಲಕ್ಷ್ಮೀ ಊಟ ತರ್ತಾಳೆಂದು ಜೈಲೂಟ ಬಿಟ್ಟು ಕುಳಿತ ನಟ ದರ್ಶನ್!
ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಹಣ ವಿತರಣೆಯ ಬದಲು ಆಹಾರ ಕಿಟ್ ನೀಡುವ ವಿಷಯದ ಮೇಲೆ ಚರ್ಚೆ ಮಾಡಲಾಯಿತು. ಈ ವೇಳೆ ಆಹಾರ ಕಿಟ್ ನೀಡುವುದನ್ನು ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಹಣ ಬೇಕಾ ಅಥವಾ ಆಹಾರ ಕಿಟ್ ಬೇಕಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಫಲಾನುಭವಿಗಳ ತೀರ್ಮಾನಕ್ಕೆ ಬಿಡಲಾಗುತ್ತದೆ. ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಎರಡು ಆಯ್ಕೆ ನೀಡಲಾಗುತ್ತದೆ. ಫಲಾನುಭವಿಗಳ ಪ್ರತಿಕ್ರಿಯೆ ಬಳಿಕ ಅಂತಿಮ ನಿರ್ಧಾರವನ್ನು ಸರ್ಕಾರದಿಂದ ಕೈಗೊಳ್ಳಲಾಗುತ್ತದೆ.