ವಸತಿ ಹಗರಣ: ಒಂದೇ ಕುಟುಂಬಕ್ಕೆ 10 ಮನೆ!

By Web Desk  |  First Published Dec 12, 2019, 7:28 AM IST

ವಸತಿ ಹಗರಣ: ಒಂದೇ ಕುಟುಂಬಕ್ಕೆ 10 ಮನೆ!| ಚಿತ್ರದುರ್ಗ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಹಲವು ಪ್ರಕರಣಗಳಲ್ಲಿ ಭಾರೀ ಪ್ರಮಾಣದ ಅಕ್ರಮ ಪ್ರಾಥಮಿಕ ತನಿಖೆಯಿಂದ ಪತ್ತೆ| .9.25 ಕೋಟಿ ಅಕ್ರಮ ಪತ್ತೆ| ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಕೇಸ್‌ಗೆ ಆದೇಶ: ವಸತಿ ಸಚಿವ ಸೋಮಣ್ಣ


 ಬೆಂಗಳೂರು"[ಡಿ.12]: ಸರ್ಕಾರಿ ವಸತಿ ಯೋಜನೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಸ್ವತಃ ವಸತಿ ಸಚಿವ ವಿ.ಸೋಮಣ್ಣ ಅವರೇ ಬಹಿರಂಗಪಡಿಸಿದ್ದಾರೆ.

 

Tap to resize

Latest Videos

ಚಿತ್ರದುರ್ಗ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಹಲವು ಪ್ರಕರಣಗಳಲ್ಲಿ ಒಂದೊಂದು ಕುಟುಂಬಕ್ಕೆ 10-12 ಬಾರಿ ಮನೆ ನಿರ್ಮಿಸಿಕೊಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸುಮಾರು 9.25 ಕೋಟಿ ರು. ಮೊತ್ತದ ಅಕ್ರಮ ಪತ್ತೆಯಾಗಿದ್ದು, ಈ ಬಗ್ಗೆ ವ್ಯಾಪಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ ಎಂದು ಸೋಮಣ್ಣ ಹೇಳಿದ್ದಾರೆ.

ಇನ್ನುಮುಂದೆ ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು. ಹಂಚಿಕೆ ಅಧಿಕಾರವನ್ನು ಗ್ರಾಮಸಭೆಗಳಿಂದ ಹಿಂಪಡೆದು ಕಂದಾಯ ಅಧಿಕಾರಿಗಳು, ತಹಸೀಲ್ದಾರ್‌ ಅವರಿಗೆ ವಹಿಸಲಾಗುವುದು. ಶಾಸಕರ ಮೇಲ್ವಿಚಾರಣೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕವೇ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಮೂಲಕ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಸಂಬಂಧಿಕರಿಗೆ 3-4 ಮನೆಗಳನ್ನು ಹಂಚಿಕೆ ಮಾಡುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು.

ಜತೆಗೆ, ಸರ್ಕಾರಿ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳ ದಾಖಲೆಗಳನ್ನು ಸಂಗ್ರಹಿಸಲು ವಿಶೇಷ ಆ್ಯಪ್‌ ಸೃಷ್ಟಿಸಲಾಗುವುದು. ಪ್ರತಿ ಮನೆಗೆ ಭೌಗೋಳಿಕ ಮಾಹಿತಿ (ಜಿಐ) ವ್ಯವಸ್ಥೆಯಡಿ ಟ್ಯಾಗ್‌ ಅಳವಡಿಕೆ ಮಾಡಲಾಗುವುದು ಎಂದರು.

ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವ, ಅಂಬೇಡ್ಕರ್‌, ದೇವರಾಜ ಅರಸು, ಪ್ರಧಾನಮಂತ್ರಿ ಆವಾಸ್‌ ಯೋಜನೆಗಳ ಹೆಸರಿನಲ್ಲಿ ಪ್ರತಿ ಯೋಜನೆಗೂ ಅರ್ಜಿ ಸಲ್ಲಿಸಿ ಒಬ್ಬೊಬ್ಬರು 10-12 ಬಾರಿ ಮನೆಗಳನ್ನು ಪಡೆದಿದ್ದಾರೆ. ಅಧಿಕಾರಿಗಳೂ ಸಹ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳ ಹೆಸರಿನಲ್ಲಿ ಬಿಲ್‌ ಮಾಡಿಕೊಂಡು ಹಣ ಲಪಟಾಯಿಸಿದ್ದಾರೆ. ಅಂತಹವರನ್ನು ಪತ್ತೆಹಚ್ಚಲು ತನಿಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಅಧಿಕಾರಿಗಳ ಶಿಕ್ಷಿಸಲು ಕಾಯಿದೆ:

ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡದೆ ಅವ್ಯವಹಾರ ನಡೆಸುವುದು ಹಾಗೂ ಫಲಾನುಭವಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹಣ ಲಪಟಾಯಿಸುವ ಪ್ರಕರಣಗಳು ವರದಿಯಾಗಿವೆ. ಇಂತಹ ಅಧಿಕಾರಿಗಳನ್ನು ಕ್ರಿಮಿನಲ್‌ ಪ್ರಕರಣದಡಿ ಶಿಕ್ಷೆಗೆ ಗುರಿಪಡಿಸಲು ಅಗತ್ಯ ಕಾಯಿದೆ ರೂಪಿಸುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಕಾಯಿದೆ ರೂಪಿಸಲಾಗುವುದು ಎಂದು ಸೋಮಣ್ಣ ಎಚ್ಚರಿಸಿದರು.

‘ಸರ್ವರಿಗೂ ಸೂರು’:

ರಾಜೀವ್‌ಗಾಂಧಿ ವಸತಿ ನಿಗಮದ ಅಡಿ ಬೆಂಗಳೂರಿನಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸುವ ಮುಖ್ಯಮಂತ್ರಿಗಳ ಗೃಹ ನಿರ್ಮಾಣ ಯೋಜನೆಗೆ 2020ರ ಜನವರಿ 15ರೊಳಗಾಗಿ ಕಾಮಗಾರಿಗೆ ಚಾಲನೆ ನೀಡಲಾಗುವುದು. 2021ರೊಳಗೆ 1.5 ವರ್ಷದಲ್ಲೇ ಯೋಜನೆ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು.

ಕೊಳೆಗೇರಿ ಪ್ರದೇಶದಲ್ಲಿ 97 ಸಾವಿರ ಮನೆಗಳ ನಿರ್ಮಾಣವನ್ನು ಡಿ.30ರೊಳಗಾಗಿ ಶುರುಮಾಡಿ 6-7 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಮೂಲಕ ಕೊಳೆಗೇರಿ ಪ್ರದೇಶಗಳ ನಾಗರಿಕರಿಗಾಗಿ ಮುಂದಿನ 1 ವರ್ಷದಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು.

ಕರ್ನಾಟಕ ಗೃಹ ಮಂಡಳಿ ಅಡಿ ಹೊಸಕೋಟೆ, ಕೆಂಗೇರಿ, ಚಲ್ಲಘಟ್ಟ, ಹುಬ್ಬಳ್ಳಿ ಸೇರಿದಂತೆ 8 ಕಡೆ 3,500 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುವುದು. 40 ಎಕರೆ ಜಾಗದಲ್ಲಿ 1 ಬಿಎಚ್‌ಕೆ, 2 ಬಿಎಚ್‌ಕೆ ಫ್ಲ್ಯಾಟ್‌ ನಿರ್ಮಿಸಿ 3 ವರ್ಷ ಇಲಾಖೆಯೇ ನಿರ್ವಹಣೆ ಮಾಡಲಿದೆ. ಪ್ರವಾಹ ಸಂತ್ರಸ್ತರಿಗಾಗಿ 50 ಸಾವಿರ ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಈ ಎಲ್ಲಾ ಯೋಜನೆಗಳ ಮೂಲಕ ‘ಸರ್ವರಿಗೂ ಸೂರು’ ಎಂಬ ಮಹತ್ವಾಕಾಂಕ್ಷೆಯತ್ತ ಹೆಜ್ಜೆ ಇಡುತ್ತೇವೆ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದು, ಎಚ್‌ಡಿಕೆ ಕಾಲದ 6 ಲಕ್ಷ ಮನೆ ನಿರ್ಮಾಣಕ್ಕೆ ಬ್ರೇಕ್‌!

ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಮಂಜೂರು ಮಾಡಿ ವಿವಿಧ ಹಂತಗಳಲ್ಲಿರುವ ಸುಮಾರು 6 ಲಕ್ಷ ಮನೆಗಳ ನಿರ್ಮಾಣವನ್ನು ಮುಂದಿನ ವರ್ಷದ ಮಾಚ್‌ರ್‍ವರೆಗೆ ತಡೆ ಹಿಡಿಯಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನೇತೃತ್ವದ ಆರು ವರ್ಷಗಳ ಸರ್ಕಾರದ ಅವಧಿಯಲ್ಲಿ 28 ಲಕ್ಷ ಮನೆ ಮಂಜೂರಾಗಿದ್ದು, 14 ಲಕ್ಷಗಳ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 8 ಲಕ್ಷ ಮನೆಗಳ ನಿರ್ಮಾಣ ಬಹುತೇಕ ಅಂತಿಮಗೊಂಡಿದೆ. ಉಳಿದ 6 ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದ್ದು, ಇವುಗಳನ್ನು ಮಾಚ್‌ರ್‍ವರೆಗೆ ತಡೆ ಹಿಡಿಯಲಾಗುವುದು.

ಮನೆಗಳ ದಾಖಲೀಕರಣದ ವಿಶೇಷ ಆ್ಯಪ್‌ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐ) ಜಾರಿಗೆ ತಂದು 6 ಲಕ್ಷ ಮನೆಗಳನ್ನೂ ಈ ಯೋಜನೆ ವ್ಯಾಪ್ತಿಗೆ ತರಲಾಗುವುದು. ಬಳಿಕ ಹಣ ಬಿಡುಗಡೆ ಮಾಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಈ ಮನೆಗಳನ್ನು ರದ್ದುಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಮುಂದಿನ ದಿನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸುಧಾರಣೆ ತರುವುದಕ್ಕಾಗಿ ಈ ಮನೆಗಳ ನಿರ್ಮಾಣವನ್ನು ಮಾಚ್‌ರ್‍ವರೆಗೆ ತಡೆ ಹಿಡಿಯಲಾಗಿದೆ ಎಂದು ಹೇಳಿದರು.

ಎಲ್ಲ ವಸತಿ ಯೋಜನೆ ‘ಅಂಬೇಡ್ಕರ್‌’ ಯೋಜನೆಯಲ್ಲಿ ವಿಲೀನ?

ರಾಜ್ಯದಲ್ಲಿ ಬಸವ ವಸತಿ ಯೋಜನೆ, ಅಂಬೇಡ್ಕರ್‌, ದೇವರಾಜ ಅರಸು, ಪ್ರಧಾನಮಂತ್ರಿ ಆವಾಸ್‌ ಯೋಜನೆಗಳ ಹೆಸರಿನಲ್ಲಿ ಹಲವು ವಸತಿ ಯೋಜನೆಗಳು ಚಾಲ್ತಿಯಲ್ಲಿವೆ. ಆದ್ದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಕಷ್ಟವಾಗಿದೆ. ಹೀಗಾಗಿ ಅಂಬೇಡ್ಕರ್‌ ವಸತಿ ಯೋಜನೆ ಉಳಿಸಿಕೊಂಡು ಉಳಿದ ಎಲ್ಲಾ ಯೋಜನೆಗಳನ್ನೂ ಅಂಬೇಡ್ಕರ್‌ ಯೋಜನೆಯೊಂದಿಗೆ ವಿಲೀನ ಮಾಡುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

19 ವರ್ಷದಲ್ಲಿ 42 ಲಕ್ಷ ಮನೆ ನಿರ್ಮಿಸಿದ್ದು ಹೇಗೆ?

ವಸತಿ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ. ಉದಾಹರಣೆಗೆ, ರಾಜ್ಯದಲ್ಲಿರುವುದೇ ಸುಮಾರು 1 ಕೋಟಿ ಮನೆ. ಆದರೆ, ಕಳೆದ 19 ವರ್ಷಗಳಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಿಂದಲೇ 42 ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇದರಿಂದ ಸರ್ಕಾರಿ ಮನೆಗಳ ದುರ್ಬಳಕೆ ಎಷ್ಟುವ್ಯಾಪಕವಾಗಿದೆ ಎಂಬುದು ತಿಳಿಯುತ್ತದೆ ಎಂದು ಸಚಿವ ಸೋಮಣ್ಣ ಹೇಳಿದರು.

ಗ್ರಾಮ ಸಭೆಗಳಿಗಿದ್ದ ಅಧಿಕಾರ ಮೊಟಕು

- ಇನ್ನು ಮುಂದೆ ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಗೆ ನಿರ್ಧಾರ

- ಗ್ರಾಮಸಭೆಗಿದ್ದ ಅಧಿಕಾರ ರದ್ದು. ಕಂದಾಯ ಅಧಿಕಾರಿಗಳು, ತಹಸೀಲ್ದಾರ್‌ಗೆ ಹಸ್ತಾಂತರ

- ಶಾಸಕರ ಮೇಲ್ವಿಚಾರಣೆಯಲ್ಲಿ ಡೀಸಿ, ಜಿಪಂ ಸಿಇಒಗಳ ಮೂಲಕ ಯೋಜನೆ ಅನುಷ್ಠಾನ

- ಸರ್ಕಾರಿ ಯೋಜನೆ ಅಡಿ ನಿರ್ಮಿಸಲಾದ ಮನೆಗಳ ದಾಖಲೆ ಸಂಗ್ರಹಕ್ಕೆ ವಿಶೇಷ ಆ್ಯಪ್‌ ಸೃಷ್ಟಿ

- ಪ್ರತಿಯೊಂದು ಮನೆಗೆ ಭೌಗೋಳಿಕ ಮಾಹಿತಿ (ಜಿಐ) ವ್ಯವಸ್ಥೆಯಡಿ ಟ್ಯಾಗ್‌ ಅಳವಡಿಕೆ

6 ಲಕ್ಷ ಮನೆಗಳ ನಿರ್ಮಾಣಕ್ಕೆ ತಡೆ

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನೇತೃತ್ವದ ಆರು ವರ್ಷಗಳ ಸರ್ಕಾರದ ಅವಧಿಯಲ್ಲಿ 28 ಲಕ್ಷ ಮನೆ ಮಂಜೂರಾಗಿದ್ದು, 14 ಲಕ್ಷಗಳ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 8 ಲಕ್ಷ ಮನೆಗಳ ನಿರ್ಮಾಣ ಬಹುತೇಕ ಅಂತಿಮಗೊಂಡಿದೆ. ಉಳಿದ 6 ಲಕ್ಷ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದ್ದು, ಇವುಗಳನ್ನು ಮಾಚ್‌ರ್‍ವರೆಗೆ ತಡೆ ಹಿಡಿಯಲಾಗುವುದು.

- ವಿ.ಸೋಮಣ್ಣ, ವಸತಿ ಸಚಿವ

click me!