ಆರ್ಥಿಕ ಸಂಕಷ್ಟದಲ್ಲಿದ್ದ ನಿಗಮಗಳಿಗೆ ರಾಜ್ಯದಿಂದ ಬಿಗ್ ರಿಲೀಫ್, KSRTC ಸೇರಿ 4 ನಿಗಮಕ್ಕೆ ₹593 ಕೋಟಿ ಬಿಡುಗಡೆ!

Published : Oct 13, 2026, 01:27 PM IST
KSRTC

ಸಾರಾಂಶ

ಆರ್ಥಿಕ ಸಂಕಷ್ಟ ಮತ್ತು ಡೀಸೆಲ್ ಕೊರತೆಯಿಂದ ಬಳಲುತ್ತಿದ್ದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ₹593.99 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಶಕ್ತಿ ಯೋಜನೆ , ವಿದ್ಯಾರ್ಥಿಗಳ ಬಸ್ ಪಾಸ್ ಬಾಕಿ ಹಾಗೂ ಎಚ್‌ಪಿಸಿಎಲ್ ಸಂಸ್ಥೆಯ ಇಂಧನ ಬಾಕಿ ಪಾವತಿಗೆ ಹಣ ನೀಡಲಾಗಿದೆ.

ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ರಾಜ್ಯ ಸರ್ಕಾರ ವಿವಿಧ ಸಹಾಯಧನದ ಅಡಿ ₹593.99 ಕೋಟಿ ಬಿಡುಗಡೆ ಮಾಡಿ ಆದೇಶಿಸಿದೆ. ಡೀಸೆಲ್‌ ಬಾಕಿ ಇರುವ ಕಾರಣ ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿಯ ಕೆಲ ಡಿಪೋಗಳಲ್ಲಿ ಡೀಸೆಲ್‌ ಕೊರತೆ ಉಂಟಾಗಿ ಬಸ್‌ ಸೇವೆ ವ್ಯತ್ಯವಾಗಿತ್ತು. ಅದರ ಜತೆ ನಾಲ್ಕೂ ಸಾರಿಗೆ ನಿಗಮಗಳು ಡೀಸೆಲ್‌ ಬಾಕಿ, ಸಾಲ ಸೇರಿ ಇನ್ನಿತರ ಕಾರಣಗಳಿಂದಾಗಿ ₹5 ಸಾವಿರ ಕೋಟಿಗೂ ಹೆಚ್ಚಿನ ಹೊಣೆಗಾರಿಕೆ ಹೊಂದಿವೆ. ಹೀಗಾಗಿ ನಿಗಮಗಳಿಗೆ ಸರ್ಕಾರದಿಂದ ನೀಡಬೇಕಾಗಿರುವ ಬಾಕಿಯಲ್ಲಿ ₹593.99 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

2026-27ನೇ ಸಾಲಿನಲ್ಲಿ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿರುವ 1.97 ಲಕ್ಷ ಉಚಿತ ಬಸ್‌ ಪಾಸ್‌ನ ₹286.08 ಕೋಟಿಗಳನ್ನು ಸರ್ಕಾರ ನಿಗಮಗಳಿಗೆ ನೀಡಬೇಕಿದೆ. ಆ ಮೊತ್ತದಲ್ಲಿ ಇದೀಗ ಸರ್ಕಾರ ₹63.99 ಕೋಟಿಗಳನ್ನು ಬಿಡುಗಡೆ ಮಾಡಿದೆ.

ನಾಲ್ಕೂ ಸಾರಿಗೆ ನಿಗಮಗಳ 26 ಸಾವಿರ ಬಸ್‌ಗಳಿಗೆ ಪ್ರತಿದಿನ 16.26 ಲಕ್ಷ ಲೀಟರ್‌ ಡೀಸೆಲ್‌ ಬೇಕಾಗಲಿದೆ. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಸಂಸ್ಥೆಯು ಡೀಸೆಲ್‌ ಪೂರೈಸುತ್ತಿದೆ. ಆದರೆ, ಸಂಸ್ಥೆಗೆ ₹1124.91 ಕೋಟಿ ಬಾಕಿಯಿದ್ದು, ಅದನ್ನು ಪಾವತಿಸುವಂತೆ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಒತ್ತಡ ಹೇರುತ್ತಿದೆ. ಈ ಇಂಧನ ಬಾಕಿ ಪಾವತಿಸಲು ಅನುದಾನ ನೀಡುವಂತೆ ನಿಗಮಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಮನವಿ ಪುರಸ್ಕರಿಸಿರುವ ರಾಜ್ಯ ಸರ್ಕಾರ ಮೊದಲ ಕಂತಾಗಿ ನಾಲ್ಕೂ ಸಾರಿಗೆ ನಿಗಮಗಳಿಗೆ ₹100 ಕೋಟಿ ನೀಡಿದೆ.

ಶಕ್ತಿ ಯೋಜನೆ ಅಡಿ 2026-27ನೇ ಸಾಲಿನ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ಫಲಾನುಭವಿಗಳ ಶೂನ್ಯ ಟಿಕೆಟ್‌ ವೆಚ್ಚದ 2150 ಕೋಟಿ ರು. ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದರ ಜತೆ ಇದೀಗ ಅಕ್ಟೋಬರ್‌ ತಿಂಗಳ ಶೂನ್ಯ ಟಿಕೆಟ್‌ ವೆಚ್ಚ 430 ಕೋಟಿ ರು. ಅನ್ನು ಮುಂಗಡ ಪಾವತಿಸಲು ಸರ್ಕಾರ ಆದೇಶಿಸಿದೆ. ಅನುದಾನ ಬಿಡುಗಡೆ ಆದೇಶದಲ್ಲಿ ಶಕ್ತಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಲು ನಿಗಮಗಳು ಶೀಘ್ರ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ.

HPCL ಸಂಸ್ಥೆಗೆ ₹1,124 ಕೋಟಿ ಬಾಕಿ ಉಳಿಸಿಕೊಂಡಿದ್ದ ನಿಗಮಗಳು:

ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ಪ್ರಮುಖ ತೈಲ ಪೂರೈಕೆ ಸಂಸ್ಥೆಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ಗೆ (HPCL) ಒಟ್ಟು ₹1,124 ಕೋಟಿ ಇಂಧನ ಬಿಲ್ ಬಾಕಿ ಉಳಿಸಿಕೊಂಡಿದ್ದವು. ಈ ಕುರಿತು ಆರ್ಥಿಕ ನೆರವು ಕೋರಿ ನಿಗಮಗಳು ಸಲ್ಲಿಸಿದ್ದ ಸುದೀರ್ಘ ಮನವಿಯನ್ನಾಧರಿಸಿ ಸರ್ಕಾರ ಈ ಹಣವನ್ನು ಬಿಡುಗಡೆ ಮಾಡಿದೆ.

ವರದಿ ಪ್ರಕಾರ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳು ಪ್ರತಿದಿನ ಸುಮಾರು 16.2 ಲಕ್ಷ ಲೀಟರ್ ಡೀಸೆಲ್ ಬಳಸುವುದು ಅಗತ್ಯವಾಗಿದ್ದು, ಕೇವಲ ಇಂಧನ ಖರೀದಿಗಾಗಿಯೇ ತಿಂಗಳಿಗೆ ಸರಾಸರಿ ₹488 ಕೋಟಿ ಖರ್ಚು ಮಾಡುತ್ತವೆ.

ಯಾವ ನಿಗಮಕ್ಕೆ ಎಷ್ಟು ಅನುದಾನ ?

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆಯ ಬಾಕಿ ಮರುಪಾವತಿಗಾಗಿ ಸರ್ಕಾರ ಬಿಡುಗಡೆ ಮಾಡಿರುವ ₹430 ಕೋಟಿ ಅನುದಾನವನ್ನು ನಾಲ್ಕು ಸಾರಿಗೆ ನಿಗಮಗಳಿಗೆ ಹಂಚಿಕೆ ಮಾಡಲಾಗಿದೆ:

ಕೆಎಸ್‌ಆರ್‌ಟಿಸಿ (KSRTC): ₹164 ಕೋಟಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): ₹105 ಕೋಟಿ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC): ₹81.8 ಕೋಟಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): ₹78.4 ಕೋಟಿ

ಸರ್ಕಾರದ ಈ ಸಮಯೋಚಿತ ಆರ್ಥಿಕ ನೆರವಿನಿಂದಾಗಿ ಸಾರಿಗೆ ಸಂಸ್ಥೆಗಳು ನಿಟ್ಟುಸಿರು ಬಿಡುವಂತಾಗಿದ್ದು, ತೈಲ ಕಂಪನಿಗಳಿಗೆ ಬಾಕಿ ಹಣ ಪಾವತಿಸಿ ತಡೆರಹಿತ ಬಸ್ ಸೇವೆ ಮುಂದುವರಿಸಲು ಅನುಕೂಲವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಉ.ವಿಧಾನಸಭಾ ಕ್ಷೇತ್ರದಲ್ಲಿಒಂದೇ ಮನೆಯಲ್ಲಿ 389 ಮತದಾರರು! ದಿಲ್ಲಿಲೀ ಹೋರಾಟ ಮಾಡೋ ಸಿಎಂ, ಈಗ ಏನ್ ಮಾಡ್ತಾರೆ?
Karnataka News Live: ಆರ್ಥಿಕ ಸಂಕಷ್ಟದಲ್ಲಿದ್ದ ನಿಗಮಗಳಿಗೆ ರಾಜ್ಯದಿಂದ ಬಿಗ್ ರಿಲೀಫ್, KSRTC ಸೇರಿ 4 ನಿಗಮಕ್ಕೆ ₹593 ಕೋಟಿ ಬಿಡುಗಡೆ!