ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ ಮತ್ತು ಬಾಕಿ ವಸೂಲಿ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಈ ಸುಗ್ರೀವಾಜ್ಞೆಯು ಮೈಕ್ರೋ ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿರುವ ಜನರಿಗೆ ವರದಾನವಾಗಲಿದೆ.
ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆ, ಬಾಕಿ ವಸೂಲಿ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ಕರ್ನಾಟಕ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ವಿಧೇಯಕವನ್ನು ಸುಗ್ರೀವಾಜ್ಞೆ ಜಾರಿ ಮೂಲಕ ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ ಅವರು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿ ಕ್ರಮ ಸರಿಯಾಗಿ ಇರಲಿಲ್ಲ. ಅಮಾನವೀಯ ನಡೆದುಕೊಳ್ಳಲಾಗಿದೆ ಅಂತ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮಸೂದೆ ತರಲು ತಿರ್ಮಾನ ಮಾಡಿದ್ದೇವೆ. ಮಸೂದೆ ಬಗ್ಗೆ ಚರ್ಚೆ ಮಾಡಲಾಗಿದೆ. ಕೆಲವು ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ 4 ಗಂಟೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ಎಲ್ಲಾ ವಿಚಾರ ಚರ್ಚೆ ಮಾಡುತ್ತೇವೆ. ನಮ್ಮಲ್ಲಿರುವ ಕಾನೂನು ಎಷ್ಟು ಅನುಕೂಲ/ ಅನಾನುಕೂಲ ಬಗ್ಗೆ ಚರ್ಚೆ ಮಾಡ್ತೇವೆ. ಸುಗ್ರೀವಾಜ್ಞೆ ತರಲು ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಅಧಿಕಾರ ನೀಡಿದೆ. ಸಿಎಂ ಸಭೆಯ ಬಳಿಕ ಕಾನೂನಾತ್ಮಕವಾಗಿ ತಿರ್ಮಾನ ಆಗಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಜನರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ನಿಯಂತ್ರಿಸಲು ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಯಿತು. ಈ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುತ್ತದೆ. ರಾಜ್ಯಪಾಲರ ಅಂಕಿತ ಸಿಕ್ಕ ತಕ್ಷಣವೇ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಕಡಿವಾಣ ಬೀಳಲಿದೆ. ಈ ಮೂಲಕ ಮೈಕ್ರೋ ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿರುವ ಹಾಗೂ ಸಾವಿಗೆ ಶರಣಾಗುತ್ತಿರುವ ಜನರಿಗೆ ಈ ಸುಗ್ರೀವಾಜ್ಞೆ ವರದಾನ ಆಗಲಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆ ರೆಡಿ, ಕಿರುಕುಳ ಕೊಟ್ಟರೆ ಕಂಪನಿ ಮುಖ್ಯಸ್ಥರಿಗೆ ಜೈಲು, ಪರಂ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಜನ ಕಂಗಾಲಾಗಿದ್ದಾರೆ. ಸಾಲ ವಸೂಲಿ ಮಾನವೀಯ ಹಾಗೂ ನಾಗರಿಕ ದಾರಿಯಲ್ಲಿ ಆಗಬೇಕು. ಮುಗ್ಧರು ಯಾವುದೇ ರೀತಿಯಲ್ಲೂ ಶೋಷಣೆಗೆ ಒಳಗಾಗಬಾರದು. ಹೀಗಾಗಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ವಿಧೇಯಕ ತರಲು ನಿರ್ಧರಿಸಲಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ವಿಧೇಯಕ ಅಂಗೀಕರಿಸಲು ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಕಾಯಿದೆ ಜಾರಿಗೊಳಿಸಲಾಗಿದೆ.
ರಾಜ್ಯ ಸರ್ಕಾರದಿಂದ ಮೈಕ್ರೋ ಫೈನಾನ್ಸ್ ಕಂಪನಿಗಳು ಬಡವರಿಗೆ ಕಿರುಕುಳ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಈಗ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಆರ್‌ಬಿಐನಿಂದ ಅನುಮೋದನೆ ಪಡೆಯದ ಹಣಕಾಸು ಸಂಸ್ಥೆಗಳು ಹಾದಿ ಬೀದಿಗೆ ಒಂದೊಂದು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಎಲ್ಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ದೇವರುಗಳ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಇವುಗಳನ್ನು ನಿಯಂತ್ರಿಸಲು ವಿಶೇಷವಾದ ಕಾನೂನು ತರಲು ಚಿಂತನೆ ನಡೆಸಲಾಗಿತ್ತು. ಇದೀಗ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಗಳ ನಿಯಂತ್ರಣಕ್ಕೆ ವಿಧೇಯಕ ಜಾರಿ ಮಾಡಲಾಗುತ್ತಿದೆ. ಈ ವಿಧೇಯಕದ ಮೂಲಕ ಮೀಟರ್ ಬಡ್ಡಿ ಹಾಗೂ ಅತಿ ಹೆಚ್ಚು ಬಡ್ಡಿ ಹಾಕಿ ಶೋಷಣೆ ಮಾಡುವವರನ್ನು ರಾಜ್ಯ ಸರ್ಕಾರ ಮಟ್ಟ ಹಾಕುತ್ತದೆ.
ವಿಧೇಯಕ ಜಾರಿ ಬಳಿಕ ಮೈಕ್ರೋ ಫೈನಾನ್ಸ್ ಕಂಪನಿಗಳ ಜರುಗಿಸುವ ಕ್ರಮಗಳು:
ಮೈಕ್ರೋ ಫೈನಾನ್ಸ್ ಕಂಪನಿಗಳು ನೋಂದಣಿ ಮಾಡಿಕೊಳ್ಳದಿದ್ದರೆ 1 ಲಕ್ಷ ರೂ. ದಂಡ ವಸೂಲಿ.
ನೋಂದಣಿಯಾಗದ ಕಂಪನಿಗಳ ಮಾಲೀಕರಿಗೆ 3 ವರ್ಷಗಳ ಶಿಕ್ಷೆ.
ಸಾಲ ವಸೂಲಿಗೆ ಕಿರುಕುಳ ನೀಡಿದರೆ ಆಯಾ ಪ್ರಕರಣ ಗಂಭೀರತೆ ಆಧರಿಸಿ ಶಿಕ್ಷೆ ಮತ್ತು ದಂಡ ವಸೂಲಿ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ನಾಳೆ, ಆಂಧ್ರದ ಮಾದರಿ ಕಾನೂನು ಜಾರಿಗೆ ಸರ್ಕಾರ ಸಿದ್ಧತೆ: ಸಿದ್ದು