ಮಹಾತ್ಮ ಗಾಂಧಿಯವರ ಹತ್ಯೆಯಾಗಿರಬಹುದು, ಆದರೆ ಅವರ ಮೌಲ್ಯಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಗಾಂಧೀಜಿಯವರ ಹಂತಕರನ್ನು ಆರಾಧಿಸುತ್ತಿದ್ದಾರೆ ಮತ್ತು ಸಂವಿಧಾನವನ್ನು ಮರುರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು (ಜ.30): ಮಹಾತ್ಮ ಗಾಂಧಿಯವರನ್ನ ಗುಂಡಿಟ್ಟು ಕೊಂದಿರಬಹುದು ಆದ್ರೆ ಅವರ ಮೌಲ್ಯಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ, ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮರಣಾರ್ಥ ಇಂದು ನಗರದ ಕೆಪಿಸಿಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡಿಸಿಎಂ ಡಿಕೆ ಶಿವಕುಮಾರ ಅನುಪಸ್ಥಿತಿಯಲ್ಲೇ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಾವು ನಿಜವಾಗಿ ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸುವುದು ಅಂದ್ರೆ ಯಾವ ಮೌಲ್ಯಗಳಿಗಾಗಿ ಅವರು ಹೋರಾಟ ಮಾಡಿದರೋ ಆ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೇಶ ಸಮಾಜ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಗಾಂಧೀಜಿಗೆ ಗೌರವ ಕೊಟ್ಟು ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ಮಹಾತ್ಮ ಗಾಂಧೀಜಿಯವರು ಎಲ್ಲ ಧರ್ಮಗಳನ್ನ, ಭಾಷೆಗಳನ್ನ ಗೌರವಿಸುತ್ತಿದ್ದರು.ಬೇರೆ ಧರ್ಮದ ಬಗ್ಗೆ ಅವರಿಗೆ ಸಹಿಷ್ಣುತೆ ಇತ್ತು. ಸಮಾನತೆ ಸಹಿಷ್ಣುತೆ ಇರುವ ದೇಶ ನಮ್ಮದು. ನಾವೆಲ್ಲರೂ ಕೂಡ ಬೇರೆ ಧರ್ಮ ಬೇರೆ ಭಾಷೆ ಬಗ್ಗೆ ಸಹಿಷ್ಣುತೆ ಇಟ್ಟುಕೊಳ್ಳಬೇಕು. ವೈವಿದ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಯಾವ ಧರ್ಮ ಮೇಲಲ್ಲ, ಯಾವುದೂ ಕೀಳಲ್ಲ. ಯಾವುದೇ ಜಾತಿ ಮೇಲಲ್ಲ, ಯಾವುದೂ ಕೀಳಲ್ಲ ಎಂದರು.
ಇದನ್ನೂ ಓದಿ: ಜಾತಿ ದೌರ್ಜನ್ಯ ಕೇಸಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸಿ: ಸಿಎಂ ಸಿದ್ದರಾಮಯ್ಯ
ಸಂವಿಧಾನ ರಕ್ಷಣೆ ಮಾಡಬೇಕಾಗಿದ್ದು ನಮ್ಮ ಕರ್ತವ್ಯ. ಕೆಲವು ಮತಾಂಧ ಶಕ್ತಿಗಳು ನಮ್ಮ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡ್ತಿದ್ದಾರೆ. ಹೀಗಾಗಿ ಸಂವಿಧಾನ ರಕ್ಷಣೆ ಆದ್ರೆ ನಮ್ಮೆಲ್ಲರ ರಕ್ಷಣೆ ಆಗುತ್ತದೆ. ಬಿಜೆಪಿಯವರು ದೇಶವನ್ನು ಹಿಂದೂಸ್ಥಾನ, ಹಿಂದೂರಾಷ್ಟ್ರ ಮಾಡ್ತಿವಿ ಅಂತಾ ಹೊರಟಿದ್ದಾರೆ. ಏಕ ಭಾಷೆ ಏಕ ಸಂಹಿತೆ ಜಾರಿಗೆ ತರಲು ಹೊರಟ್ಟಿದ್ದಾರೆ. ನಾವು ಪ್ರಜಾಪ್ರಭುತ್ವ ಉಳಿಸಬೇಕು ಪ್ರಜಾಪ್ರಭುತ್ವ ರಕ್ಷಣೆ ರಕ್ಷಣೆ ಮಾಡಬೇಕು. ನಾವೆಲ್ಲರೂ ಈಗ ಎರಡನೇ ಹೋರಾಟವನ್ನು ಮಾಡಬೇಕಿದೆ ಎಂದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ನಾಳೆ, ಆಂಧ್ರದ ಮಾದರಿ ಕಾನೂನು ಜಾರಿಗೆ ಸರ್ಕಾರ ಸಿದ್ಧತೆ: ಸಿದ್ದು
ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ:
ಕಾಂಗ್ರೆಸ್ ಕಾರ್ಯಕರ್ತರಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ ಎಂದ ಸಿಎಂ ಸಿದ್ದರಾಮಯ್ಯ ಅವರು, ಕಾರ್ಯಕರ್ತರಿಗೆ ಇದು ಅತ್ಯಂತ ಅಗತ್ಯ ಮತ್ತು ಅನಿವಾರ್ಯತೆಯಾಗಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಗಾಂಧಿ ಕೊಂದವರನ್ನು ಆರಾಧಿಸುತ್ತಿದ್ದಾರೆ. ಗೋಡ್ಸೆ ಒಬ್ಬ ಹಂತಕ, ಮತಾಂಧ ಅವನನ್ನು ಆರೆಸ್ಸೆಸ್‌ನವರು ಪೂಜಿಸುತ್ತಾರೆ. ಹಿಂದೆ ಗೋಳವಾಲ್ಕರ್ 'ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ' ಎಂದಿದ್ದರು. ಈಗಿನ ಆರೆಸ್ಸೆಸ್ ಬಿಜೆಪಿ ಸಂವಿಧಾನವನ್ನೇ ರೀರೈಟ್ ಮಾಡಿ ಮನುಸ್ಮೃತಿ ತರಲು ಹೊರಟಿದ್ದಾರೆ. ಹೀಗಾಗಿ ನಾವು ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.