10 ವರ್ಷ ಹಿಂದಿನ ಸಾಕ್ಷ್ಯಚಿತ್ರ ಯೋಜನೆಗೆ ಮರುಜೀವ!

Kannadaprabha News, Ravi Janekal |   | Kannada Prabha
Published : Oct 26, 2025, 08:28 AM IST
sc st artists digital autobiography

ಸಾರಾಂಶ

ದಶಕದಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ, ಪಂಗಡದ ಜಾನಪದ ಕಲಾವಿದರ ಡಿಜಿಟಲ್‌ ಆತ್ಮಕಥೆ ಸಾಕ್ಷ್ಯಚಿತ್ರ ನಿರ್ಮಾಣ ಯೋಜನೆಗೆ ಕರ್ನಾಟಕ ಜಾನಪದ ಅಕಾಡೆಮಿ ಮರುಜೀವ ನೀಡಿದೆ. ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ 115ಕ್ಕೂ ಹೆಚ್ಚು ಕಲಾವಿದರ ಸಾಕ್ಷ್ಯಚಿತ್ರ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ

  • ಸಂಪತ್‌ ತರೀಕೆರೆ

ಬೆಂಗಳೂರು (ಅ.26): ಕಡತದಲ್ಲೇ ಕಮರಿ ಹೋಗಿದ್ದ ಡಿಜಿಟಲ್‌ ಆತ್ಮಕಥೆ ಸಾಕ್ಷ್ಯಚಿತ್ರ ಹೊಂದುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾನಪದ ಕಲಾವಿದರ ಕನಸು ನನಸಾಗಲಿದ್ದು, ದಶಕದ ನಂತರ ಕರ್ನಾಟಕ ಜಾನಪದ ಅಕಾಡೆಮಿ ಸಾಕ್ಷ್ಯಚಿತ್ರ ನಿರ್ಮಾಣ ಯೋಜನೆಗೆ ಮರುಜೀವ ನೀಡಲು ಮುಂದಾಗಿದೆ.

ಸುಮಾರು 2.50 ಕೋಟಿ ರು.ವೆಚ್ಚದಲ್ಲಿ ಬೆಂಗಳೂರು, ದಾವಣಗೆರೆ, ಹಾಸನ, ಉತ್ತರ ಕನ್ನಡ, ವಿಜಯಪುರ, ಶಿವಮೊಗ್ಗ, ಚಾಮರಾಜನಗರ ಸೇರಿ ರಾಜ್ಯದ ವಿವಿಧೆಡೆ ಪರಿಶಿಷ್ಟ ಜಾತಿಯ 45ಕ್ಕೂ ಹೆಚ್ಚು ಜಾನಪದ ಕಲಾವಿದರು ಮತ್ತು 70ಕ್ಕೂ ಅಧಿಕ ಪರಿಶಿಷ್ಟ ಪಂಗಡದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಿಸಲು ಯೋಜಿಸಲಾಗಿದೆ. ಈ ಸಂಬಂಧ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಅಕಾಡೆಮಿ ಹಂತದಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿ ಸಭೆ ಕೈಗೊಂಡು ಸರ್ಕಾರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಟೆಂಡರ್‌ ಕರೆಯಲು ಪ್ರಸ್ತಾವನೆ ಕಳುಹಿಸಿಕೊಟ್ಟಿದೆ.

ರು.2.50 ಕೋಟಿ ವಿಶೇಷ ಅನುದಾನ:

2015-16ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಕರ್ನಾಟಕ ಜಾನಪದ ಅಕಾಡೆಮಿಗೆ 2.50 ಕೋಟಿ ರು. ವಿಶೇಷ ಅನುದಾನ ಮೀಸಲು ಇಡಲಾಗಿತ್ತು. ಈ ಪೈಕಿ ಪರಿಶಿಷ್ಟ ಜಾತಿಯ ಜಾನಪದ ಕಲಾವಿದರ ಡಿಜಿಟಲ್‌ ಆತ್ಮಕಥೆಗೆ ಒಂದು ಕೋಟಿ ರು. ಮತ್ತು ಪರಿಶಿಷ್ಟ ಪಂಗಡದ ಜಾನಪದ ಕಲಾವಿದರ ಡಿಜಿಟಲ್‌ ಆತ್ಮಕಥೆಗೆ 1.50 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು. ಆದರೆ, ಈವರೆಗೂ ಜಾನಪದ ಕಲಾವಿದರ ಸಾಕಷ್ಯಚಿತ್ರ ನಿರ್ಮಾಣ ಯೋಜನೆ ಅನುಷ್ಠಾನಗೊಂಡಿರಲಿಲ್ಲ.

ಸರ್ಕಾರದ ಅನುಮತಿಗಾಗಿ ನಿರೀಕ್ಷೆ:

ಕಂಸಾಳೆ, ಗೊರವರ ಕುಣಿತ, ಡೊಳ್ಳುಕುಣಿತ, ಪೂಜಾ ಕುಣಿತ, ತಮಟೆವಾದನ, ಪಟ ಕುಣಿತ, ವೀರಗಾಸೆ, ಸುಗ್ಗಿಕುಣಿತ, ಹುಲಿವೇಷ, ಬೀಸು ಕಂಸಾಳೆ ಸೇರಿ ಜಾನಪದ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿದ 24 ಮಂದಿ ಪರಿಶಿಷ್ಟ ಜಾತಿ ಮತ್ತು 37 ಮಂದಿ ಪರಿಶಿಷ್ಟ ಪಂಗಡದ ಕಲಾವಿದರ ಪಟ್ಟಿಯನ್ನು ಸಾಕ್ಷ್ಯಚಿತ್ರಕ್ಕಾಗಿ ಸಿದ್ಧಪಡಿಸಲಾಗಿತ್ತು. ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಸಭೆಗಳು ನಡೆದಿದ್ದವು. ಸಭೆಯಲ್ಲಿ ತೀರ್ಮಾನಿಸಿ, ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ 4ಜಿ ರಿಯಾಯತಿಗಾಗಿ ಸರ್ಕಾರಕ್ಕೆ ಪತ್ರವನ್ನೂ ಈ ಹಿಂದೆಯೇ ಬರೆಯಲಾಗಿತ್ತು. ಆದರೆ, ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ.

ಪ್ರತಿ ಕಲಾವಿದರ ಕುರಿತು ಒಂದು ಗಂಟೆಗಳ ಚಿತ್ರೀಕರಣ ನಡೆಸಿ ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರಿಂದಲೂ ಮಾಹಿತಿ ಕಲೆ ಹಾಕಬೇಕು. ಜೊತೆಗೆ ಸಾಕ್ಷ್ಯಾಚಿತ್ರವನ್ನು ಅರ್ಧ ಗಂಟೆಯ ಎರಡು ಕಂತುಗಳಾಗಿ ಹೊರ ತರಲು ಯೋಜಿಸಲಾಗಿತ್ತು. ಇದರಿಂದ ಕಲಾವಿದರು ಬಳಸಿದ ವಸ್ತ್ರಗಳು, ವಾದ್ಯಗಳು, ಜನಪದ ಹಾಡಿನ ಶೈಲಿ ಪುನಃಶ್ಚೇತನಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಯುವ ಕಲಾವಿದರಿಗೂ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಈವರೆಗೆ ಸರ್ಕಾರದಿಂದ ಯಾವುದೇ ಆದೇಶ ಬಾರದಿರುವ ಬಗ್ಗೆ ಕಲಾವಿದರು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ.

ಪ್ರತಿ ಸಾಕ್ಷ್ಯಚಿತ್ರಕ್ಕೆ 1.50 ಲಕ್ಷ ರು.ವೆಚ್ಚ!

ಇದೀಗ ಗೊಲ್ಲಹಳ್ಳಿ ಶಿವಪ್ರಸಾದ್‌ ಅಧ್ಯಕ್ಷತೆಯಲ್ಲಿ ಮತ್ತೆ ಸಭೆ ನಡೆಸಿದ್ದು, ಈ ಹತ್ತು ವರ್ಷಗಳಲ್ಲಿ ಬದುಕುಳಿದ ಕಲಾವಿದರ ಮಾಹಿತಿ ಸಂಗ್ರಹಿಸಿ, ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪರಿಶಿಷ್ಟ ಜಾತಿಯ 45 ಕಲಾವಿದರ ಸಾಕ್ಷ್ಯ ಚಿತ್ರಕ್ಕೆ ತಲಾ 1.50 ಲಕ್ಷ ರು.ನಂತೆ 67.50 ಲಕ್ಷ ರು. ಮತ್ತು 70 ಮಂದಿ ಪರಿಶಿಷ್ಟ ಪಂಗಡದ ಕಲಾವಿದರ ಸಾಕ್ಷ್ಯ ಚಿತ್ರಕ್ಕೆ ತಲಾ 1.50 ಲಕ್ಷ ರು.ನಂತೆ 1.05 ಕೋಟಿ ರು. ವೆಚ್ಚ ಮಾಡಿ ಯೋಜನೆ ಅನುಷ್ಠಾನಗೊಳಿಸುವ ಕುರಿತು ಯೋಜನೆ ರೂಪಿಸಲಾಗಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಯೋಜನೆಯ ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಜಾನಪದ ಕಲಾವಿದರ ಡಿಜಿಟಲ್‌ ಆತ್ಮಕಥೆಯ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯ ಆರಂಭಿಸುವ ಯೋಚನೆ ಇದೆ. ಈಗಾಗಲೇ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅನುಮತಿ ನೀಡಿದರೆ ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಶುರು ಮಾಡುತ್ತೇವೆ.

- ಗೊಲ್ಲಹಳ್ಳಿ ಶಿವಪ್ರಸಾದ್‌, ಅಧ್ಯಕ್ಷ, ಕರ್ನಾಟಕ ಜಾನಪದ ಅಕಾಡೆಮಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಗಲಕೋಟೆ: ಕಬ್ಬು ಕಟಾವು ಮಷಿನ್‌ನಲ್ಲಿ ಶಾರ್ಟ್ ಸರ್ಕಿಟ್; 20 ಎಕರೆ ಕಬ್ಬು ಬೆಂಕಿಗೆ ಆಹುತಿ!
ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ