
ಬೆಂಗಳೂರು (ಅ.26): ನಗರಕ್ಕೆ ಪ್ರಸ್ತಾವಿತ ಸುರಂಗ ಮಾರ್ಗದಿಂದ ಲಾಲ್‌ಬಾಗ್ ಸೇರಿದಂತೆ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳು ಕುರಿತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದ (ಜಿಎಸ್‌ಐ)ಮೌಲ್ಯಮಾಪನ ಅಭಿಪ್ರಾಯ ಪಡೆಯಬೇಕು ಎಂದು ಹೈಕೋರ್ಟ್ ಹೇಳಿದೆ.
ಸುರಂಗ ಯೋಜನೆ ಪ್ರಶ್ನಿಸಿ ರಂಗಕರ್ಮಿ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಶನಿವಾರ ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರ ನ್ಯಾಯಪೀಠದಲ್ಲಿ ನಡೆಯಿತು.
ಪ್ರಕಾಶ್ ಬೆಳವಾಡಿ ಪರವಾಗಿ ವಾದ ಮಂಡಿಸಿದ ಸಂಸದ ತೇಜಸ್ವಿ ಸೂರ್ಯ, ಯೋಜನೆ ಸಂಬಂಧ ಪರಿಸರ ಪರಿಣಾಮ ಮೌಲ್ಯಮಾಪನ ನಡೆಸಿಲ್ಲ. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿಲ್ಲ. ವಿವರವಾದ ಯೋಜನಾ ವರದಿಯ ಕೊರತೆ ಹಾಗೂ ಐತಿಹಾಸಿಕ ಲಾಲ್‌ಬಾಗ್ ಬಂಡೆಯ ಕೆಳಗೆ ಹಾದುಹೋಗುವ ಮಾರ್ಗದಿಂದ ಉಂಟಾಗುವ ಪರಿಣಾಮಗಳ ಕುರಿತಾಗಿ ಅಧ್ಯಯನ ನಡೆಸದಿರುವುದನ್ನು ಹೈಕೋರ್ಟ್ ಗಮನಕ್ಕೆ ತಂದರು.
ನಗರದ ಶ್ವಾಸಕೋಶದಂತಿರುವ 6.5 ಎಕರೆ ಜಮೀನನ್ನು ವಶಪಡಿಕೊಳ್ಳಲು ಉದ್ದೇಶಿಸಲಾಗಿದೆ. ಈಗಾಗಲೇ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಗುರುತಿಸಲ್ಪಟ್ಟಿರುವ 3,000 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್ ಬಂಡೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ನಗರದ ಜನತೆ ಗಂಭೀರ ಅಪಾಯವನ್ನು ಎದುರಿಸಬೇಕಾಗಬಹುದು ಎಂದು ತೇಜಸ್ವಿ ಸೂರ್ಯ ವಾದಿಸಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಆದಿಕೇಶವಲು ಮತ್ತಿತರರು ಸಲ್ಲಿಸಿದ್ದ ಅರ್ಜಿದಾರರ ಪರ ವಕೀಲರು, ಸುರಂಗ ಯೋಜನೆಗಾಗಿ ಮರಗಳನ್ನು ಕಡಿಯುವುದಕ್ಕೆ ಮುಂದಾಗಿದ್ದಾರೆ. ಉದ್ದೇಶ ಏನು ಎಂಬುದು ಗೊತ್ತಾಗುತ್ತಿಲ್ಲ. ಅನುಮತಿಯಿಲ್ಲದೆ ಮರಗಳನ್ನು ಕಡಿಯದಂತೆ ಆದೇಶ ನೀಡಬೇಕು ಎಂದು ಕೋರಿದರು.
ಈ ವಿಷಯಗಳನ್ನು ವಿವರವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿ ನ್ಯಾಯಪೀಠ, ಮರಗಳನ್ನು ಕಡಿಯದಂತೆ ಮೌಖಿಕ ಸೂಚನೆ ನೀಡಿತು. ಮರ ಕಡಿತದ ಕುರಿತಾದ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿ ಅ.28ಕ್ಕೆ ವಿಚಾರಣೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ