
ಬೆಂಗಳೂರು (ಡಿ.5): ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರ್ನಾಟಕದ ವೀರ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಚೆಕ್ ನೀಡಿದೆ. 25 ಲಕ್ಷ ರೂಪಾಯಿಗಳ ಚೆಕ್‌ಅನ್ನು ಎಂಪಿ ಪ್ರಾಂಜಲ್ ಅವರ ತಂದೆ-ತಾಯಿಗೆ ನೀಡಿದ್ದರೆ, ಇನ್ನು 25 ಲಕ್ಷ ರೂಪಾಯಿಯ ಚೆಕ್‌ಅನ್ನು ಪ್ರಾಂಜಲ್ ಅವರ ಪತ್ನಿ ಅದಿತಿ ಅವರಿಗೆ ನೀಡಲಾಗಿದೆ. ರಜೌರಿ ಎನ್‌ಕೌಂಟರ್‌ನಲ್ಲಿ ಎಂವಿ ಪ್ರಾಂಜಲ್ ಅಸುನೀಗಿದ ಬೆನ್ನಲ್ಲಿಯೇ ಸಿಎಂ ಸಿದ್ಧರಾಮಯ್ಯ 50 ಲಕ್ಷ ರೂಪಾಯಯಿ ಪರಿಹಾರ ಘೋಷಣೆ ಮಾಡಿದ್ದರು. ಆದರೆ, ಈ ಘೋಷಣೆ ಮಾಡಿ 10ಕ್ಕೂ ಅಧಿಕ ದಿನ ಕಳೆದರೂ, ಸರ್ಕಾರ ಹಣ ಪಾವತಿ ಮಾಡುವ ಲಕ್ಷಣ ಕಾಣದೇ ಇದ್ದಾಗ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಈ ಬಗ್ಗೆ ವರದಿ ಮಾಡಿತ್ತು. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಕೂಡ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಈಗ ಸಿದ್ದರಾಮಯ್ಯ ಅವರ ಸರ್ಕಾರ ಹಣ ಬಿಡುಗಡೆ ಮಾಡಿದೆ.
'ನಮ್ಮ ಸರ್ಕಾರ ಘೋಷಿಸಿದಂತೆ ಹುತಾತ್ಮ ಯೋಧ "ಕ್ಯಾಪ್ಟನ್ ಎಂ.ವಿ.ಪ್ರಾಂಜಲ್" ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ. ಪ್ರಾಣವನ್ನು ಪಣಕ್ಕೆ ಇಟ್ಟು ದೇಶ ಕಾಯುವ ಯೋಧರ ಬಗ್ಗೆ ನಮಗೆ ಅಪಾರವಾದ ಗೌರವ-ಅಭಿಮಾನ ಇದೆ, ಅಷ್ಟೇ ಗೌರವ ಮತ್ತು ಕಾಳಜಿ ಯೋಧರ ಕುಟುಂಬ ವರ್ಗದ ಬಗ್ಗೆಯೂ ಇದೆ. ಯೋಧರ ಸಾವು - ನೋವು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರು ನಾವಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಸುದ್ದಿ ಸೃಷ್ಟಿಸಿ ಅಪಪ್ರಚಾರ ಮಾಡುವದರಲ್ಲಿಯೇ ವಿಕೃತ ಆನಂದ ಪಡುತ್ತಿದ್ದಾರೆ. ಅಂತಹವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದಷ್ಟೇ ಹಾರೈಸಬಲ್ಲೆ' ಎಂದು ಕರ್ನಾಟಕ ಸಿಎಂ ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಅದರ ಜೊತೆಗೆ ಪ್ರಾಂಜಲ್ ಕುಟುಂಬಕ್ಕೆ ನೀಡಿದ ಚೆಕ್‌ನ ಚಿತ್ರಗಳನ್ನು ಕೂಡ ಹಂಚಿಕೊಳ್ಳಲಾಗಿದೆ.
ಮಂಗಳವಾರ ಜಿಗಣಿಯ ನಂದನವನ ಲೇಔಟ್‌ಗೆ ಆಗಮಿಸಿದ ಜಿಲ್ಲಾಧಿಕಾರಿ ದಯಾನಂದ್, ಹುತಾತ್ಮ ಪ್ರಾಂಜಲ್ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಿದರು. ಈ ವೇಳೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಕೂಡ ಹಾಜರಿದ್ದರು. ಸಿಎಂ ಸಿದ್ದರಾಮಯ್ಯ 50 ಲಕ್ಷ ರೂಪಾಯಿ ಘೊಷಣೆ ಮಾಡಿದ್ದರು. ರಾಜ್ಯ ಸರ್ಕಾರದ ವತಿಯಿಂದ ಜಿಲ್ಲಾಧಿಕಾರಿಗಳು 50 ಲಕ್ಷ ರೂಪಾಯಿಯನ್ನು ಹಸ್ತಾಂತರ ಮಾಡಿದರು. ಈ ಬೇಳೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ. ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಉಪಸ್ಥಿತರಿದ್ದರು.
ಹುತಾತ್ಮ ಸೈನಿಕನಿಗೆ ಪರಿಹಾರ ನೀಡೋಕು ಸರ್ಕಾರದ ಬಳಿ ಹಣವಿಲ್ಲವೇ?
ಪ್ರಾಂಜಲ್ ತಂದೆ ವೆಂಕಟೇಶ್, ಮತ್ತು ತಾಯಿ ಅನುರಾಧರವರ ಕೈಗೆ 25 ಲಕ್ಷರೂಗಳ ಚೆಕ್ ನೀಡಲಾದರೆ. ಪ್ರಾಂಜಲ್ ಪತ್ನಿ ಅದಿತಿ ಅವರ ಕೈಗೆ 25 ಲಕ್ಷರೂಗಳ ಚೆಕ್ಅನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಈ ವೇಳೆ ಪ್ರಾಂಜಲ್ ಕುಟುಂಬ ಸರ್ಕಾರಕ್ಕೆ ತಮ್ಮ ಕೃತಜ್ಞತೆ ತಿಳಿಸಿದೆ. ಸೈನಿಕ್ ಭವನ್ ಬ್ರಿಗೇಡಿಯರ್ ಅಧಿಕಾರಿಗಳು, ಜಿಲ್ಲಾಧಿಕಾರಿ ದಯಾನಂದ್ ಹಾಗೂ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಲ್ಲದೆ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ನಿರ್ದೆಶಕರು ಶಶಿಧರ್ ಕೂಡ ಹಾಜರಿದ್ದರು.
ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗಾಗಿ ಕಂಬನಿ ಮಿಡಿದ ಕರುನಾಡು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ