ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ: ರಾಜ್ಯ ಸರ್ಕಾರದ ಮಹತ್ವದ ಆದೇಶ

By Govindaraj SFirst Published Nov 19, 2022, 8:50 AM IST
Highlights

ವಿವಾದಿತ ಬಾಬಾಬುಡನ್‌ಗಿರಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಬೆಂಗಳೂರು (ನ.19): ವಿವಾದಿತ ಬಾಬಾಬುಡನ್‌ಗಿರಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವ್ಯವಸ್ಥಾಪನಾ ಸಮಿತಿ ರಚನೆ ಮಾಡುವಂತೆ ಹಲವು ವರ್ಷಗಳ ಹೋರಾಟ ನಡೆಯುತ್ತಿದ್ದು, ಕೊನೆಗೂ ಸರ್ಕಾರ ಎಂಟು ಮಂದಿಯ ಸದಸ್ಯರ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ಒಬ್ಬರು ಮುಸ್ಲಿಂ ಸದಸ್ಯರು ಇರಲಿದ್ದಾರೆ. ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚಿಸಲಾಗಿದೆ.

ಸತೀಶ್‌, ಸಿ.ಜಿ. ಲೀಲಾ, ಶೀಲಾ, ಸುಮಂತ್‌, ಜಿ.ಎಚ್‌.ಹೇಮಂತ್‌ಕುಮಾರ್‌, ಕೆ.ಎಸ್‌.ಗುರುವೇಶ್‌, ಎಸ್‌.ಎಂ.ಬಾಷಾ, ಸಿ.ಎನ್‌.ಚೇತನ ಸಮಿತಿಯ ಸದಸ್ಯರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದರೆ ಅಂತಹವರ ಸದಸ್ಯತ್ವವು ರದ್ದಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಎಂದು ನೇಮಕ ಮಾಡಲಾಗಿದೆ. 

Datta Peetha Row: ವಿವಾದ ಬಗೆಹರಿಸದ ಬಿಜೆಪಿ ಸರ್ಕಾರ: ಪ್ರಮೋದ್‌ ಮುತಾಲಿಕ್‌ ಆಕ್ರೋಶ

ಸದಸ್ಯರು ಮೊದಲ ಸಭೆಯಲ್ಲಿ ಒಬ್ಬರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಹೈಕೋರ್ಚ್‌ ಆದೇಶದಂತೆ ಆಡಳಿತ ಮಂಡಳಿ ನೇಮಕ ಮಾಡಲಾಗಿದೆ ಎಂದು ಶುಕ್ರವಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ವ್ಯವಸ್ಥಾಪನಾ ಸಮಿತಿಯ ರಚನೆ ಮಾಡುವ ಸಂಬಂಧ ಹಿಂದು ಮತ್ತು ಮುಸ್ಲಿಂ ಎರಡು ಧರ್ಮದ ಭಕ್ತಾದಿಗಳಿಂದ/ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. 

ನಿಗದಿತ ಅವಧಿಯೊಳಗೆ 42 ಅರ್ಜಿಗಳು ಸ್ವೀಕೃತವಾಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳ ಅವುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನ.2ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್‌ನ ಸಭೆಯಲ್ಲಿ ಅರ್ಜಿದಾರರ ಅರ್ಹತೆ, ಪೂರ್ವಪರ ವಿವರ ಸೇರಿದಂತ ಇತ್ಯಾದಿ ಮಾಹಿತಿಗಳ ಕುರಿತು ಸಮಾಲೋಚನೆ ನಡೆಸಲಾಗಿದೆ. ತದನಂತರ ವ್ಯವಸ್ಥಪನಾ ಸಮಿತಿ ನಡೆಸಲಾಗಿದೆ. ಸಮಿತಿಯು ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

Chikkamagaluru: ದತ್ತಮಾಲಾ ಅಭಿಯಾನ: ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ನಿಷೇಧ

ಮುಂದೇನು?: ಸಚಿವ ಸಂಪುಟದ ಉಪ ಸಮಿತಿ ಮಾಡಿರುವ ಶಿಫಾರಸ್ಸಿನ ಪ್ರಕಾರ ವ್ಯವಸ್ಥಾಪನಾ ಸಮಿತಿ ದತ್ತಪೀಠದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅರ್ಚಕರು ಹಾಗೂ ಮುಜಾವರ್‌ ಅವರನ್ನು ನೇಮಕ ಮಾಡಬೇಕು, ದತ್ತಪೀಠದಲ್ಲಿ ನಿತ್ಯ ಪೂಜೆ ಸಲ್ಲಿಸಲು ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು.

click me!