ಅನಂತ್‌ಕುಮಾರ್‌ ಪ್ರತಿಷ್ಠಾನಕ್ಕೆ 3 ಎಕರೆ ಜಾಗ: ಸಚಿವ ಸಂಪುಟ ಒಪ್ಪಿಗೆ

By Kannadaprabha NewsFirst Published Jul 23, 2022, 9:01 PM IST
Highlights

ಹಸಿರು ಸಂರಕ್ಷಣೆ, ಸಂಶೋಧನೆ ಉದ್ದೇಶಕ್ಕೆ ಕೇಂದ್ರದ ಸಚಿವರಾಗಿದ್ದ ದಿವಂಗತ ಅನಂತ್‌ಕುಮಾರ್‌ ಪ್ರತಿಷ್ಠಾನಕ್ಕೆ 3 ಎಕರೆ ಜಾಗ ಭೂಮಿ ಮಂಜೂರು ಮಾಡಲು ಸಚಿವ ಸಂಪುಟ ಒಪ್ಲಿಗೆ ಸೂಚಿಸಿದೆ. 

 ಬೆಂಗಳೂರು (ಜು.23): ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಹೆಸರಿನ ಅನಂತಕುಮಾರ್‌ ಪ್ರತಿಷ್ಠಾನಕ್ಕೆ ದೇವನಹಳ್ಳಿ ಬಳಿ ಮೂರು ಎಕರೆ ಭೂಮಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಹಸಿರು ಸಂರಕ್ಷಣೆ ಮತ್ತು ಸಂಶೋಧನೆ ಉದ್ದೇಶಕ್ಕಾಗಿ ಅನಂತಕುಮಾರ್‌ ಪ್ರತಿಷ್ಠಾನಕ್ಕೆ ದೇವನಹಳ್ಳಿ ಬಳಿಯ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಅನಂತ್‌ ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ಪ್ರತಿಷ್ಠಾನಕ್ಕೆ ಭೂಮಿ ನೀಡಲಾಗಿದೆ ಎಂದು ತಿಳಿಸಿದರು. ಸರ್ಕಾರದ ಈ ಕೊಡುಗೆಗಾಗಿ ಪ್ರತಿಷ್ಠಾನದ ಪರವಾಗಿ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಅನಂತಕುಮಾರ್‌ ಪ್ರತಿಪಾದಿಸಿದ ಸಸ್ಯಾಗ್ರಹ ಮತ್ತು ಹಸಿರು ಜೀವನ ಶೈಲಿಯ ಅನುಷ್ಠಾನ ಮತ್ತಿತರ ಚಟುವಟಿಕೆಗಳಿಗಾಗಿ ಪ್ರತಿಷ್ಠಾನವು ಈ ಭೂಮಿಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕಸ್ತೂರಿ ರಂಗನ್‌ ವರದಿ ವಿರುದ್ಧ ಕೇಂದ್ರಕ್ಕೆ ಮೊರೆ: ಸಂಪುಟ ನಿರ್ಧಾರ
ವಿವಾದಾತ್ಮಕ ಕಸ್ತೂರಿ ರಂಗನ್‌ ವರದಿಯನ್ವಯ ಪಶ್ಚಿಮಘಟ್ಟಪ್ರದೇಶವನ್ನು ಪರಿಸರ ಸೂಕ್ಷ್ಮವಲಯವನ್ನಾಗಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ವರದಿಯನ್ನು ತಿರಸ್ಕಾರ ಮಾಡುವ ನಿಲುವಿನ ಬಗ್ಗೆ ಕೇಂದ್ರಕ್ಕೆ ತಿಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕಸ್ತೂರಿ ರಂಗನ್‌ ವರದಿಗೆ ರಾಜ್ಯ ಸರ್ಕಾರವು ವಿರೋಧ ಮಾಡಿಕೊಂಡು ಬಂದಿದೆ. ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ವರದಿಯನ್ನು ತಿರಸ್ಕಾರ ಮಾಡಿದ್ದೇವೆ. ಈಗ ಪರಿಸರ ಇಲಾಖೆಯಿಂದ ಅಧಿಸೂಚನೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೂ ಮನವರಿಕೆ ಮಾಡಿಕೊಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವರದಿಯಿಂದ ಪಶ್ಚಿಮಘಟ್ಟದ ಜನತೆಗೆ ಇದರಿಂದ ಅನ್ಯಾಯವಾಗಲಿದೆ. ಈಗಾಗಲೇ ಎರಡು ಬಾರಿ ಸರ್ಕಾರ ಆಕ್ಷೇಪಣೆ ಸಲ್ಲಿಸಲಾಗಿದೆ. ಅರಣ್ಯ ಪ್ರದೇಶದಲ್ಲಿರುವ ಜನರು ಮತ್ತು ಜನವಸತಿ ಪ್ರದೇಶಗಳನ್ನು ಎತ್ತಂಗಡಿ ಮಾಡುವುದು ಸರಿಯಲ್ಲ. ಕೇಂದ್ರಕ್ಕೆ ಸಮಗ್ರವಾಗಿ ಮಾಹಿತಿ ನೀಡಲಾಗುವುದು ಎಂದರು.

ಕಾರ್ಮಿಕರ ಧನ ಸಹಾಯ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಜಾರಿ ಮಾಡಲಾಗಿರುವ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುವ ಧನ ಸಹಾಯದಲ್ಲಿ ಏರಿಕೆ ಮಾಡಿರುವುದರ ಜತೆಗೆ ನೋಂದಣಿ ವಂತಿಗೆ ರಿಯಾಯಿತಿ, ಜ್ಯೇಷ್ಠತೆ ಆಧಾರದಲ್ಲಿ ಟೂಲ್‌ ಕಿಟ್‌ ವಿತರಣೆ ಸೇರಿದಂತೆ ಹಲವು ಮಹತ್ವ ತೀರ್ಮಾನಗಳನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಮಂಡಿಸಿದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು.

ಶ್ರಮಿಕ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ಎರಡು ಸಾವಿರ ರು.ನಿಂದ ಮೂರು ಸಾವಿರಕ್ಕೆ ಏರಿಕೆ, ಫಲಾನುಭವಿಗಳ ನೋಂದಣಿ ವೇಳೆ ಮಂಡಳಿಗೆ ಪಾವತಿಸಬೇಕಿರುವ ವಂತಿಗೆ ಹಣ ಸಂಪೂರ್ಣ ಮನ್ನಾ ಮಾಡುವ, ಶ್ರಮ ಸಾಮರ್ಥ್ಯ ಸೌಲಭ್ಯದಡಿ ಮಂಡಳಿಯ ಫಲಾನುಭವಿಗಳು ತರಬೇತಿ ಪಡೆಯದೆಯೇ ಜ್ಯೇಷ್ಠತೆ ಆಧಾರದಲ್ಲಿ ಟೂಲ್‌ ಕಿಟ್‌ ಪಡೆಯಲು ಗೃಹ ಭಾಗ್ಯ ಸೌಲಭ್ಯದಡಿ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಲು ನೀಡುವ ಧನ ಸಹಾಯ 10 ಕಂತುಗಳಲ್ಲಿ ನೀಡಲು ಸರಳೀಕರಿಸಿ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಯಿತು.

ಹೆರಿಗೆ ಸೌಲಭ್ಯದಡಿ ಹೆರಿಗೆ ಸಹಾಯಧನವನ್ನು ಗಂಡು-ಹೆಣ್ಣು ಎಂಬ ಭೇದ-ಭಾವ ಇಲ್ಲದೆ 50 ಸಾವಿರ ರು.ಗೆ ಹೆಚ್ಚಿಸುವ ಮತ್ತು ಅಂತಿಮ ಸಂಸ್ಕಾರ ವೆಚ್ಚ ಸೌಲಭ್ಯದಡಿ ನೀಡಲಾಗುತ್ತಿರುವ ಸಹಾಯಧನ ಮೊತ್ತವನ್ನು 50 ಸಾವಿರ ರು.ನಿಂದ 71 ಸಾವಿರ ರು. ನೀಡುವುದು, ಕೋವಿಡ್‌ನಿಂದ ಫಲಾನುಭವಿ ಮೃತಪಟ್ಟಸಂದರ್ಭದಲ್ಲಿ ಮೃತರ ಅವಲಂಬಿತರಿಗೆ 2 ಲಕ್ಷ ರು. ಸಹಾಯಧನ ನೀಡಲು ಸಂಪುಟದ ಎದುರು ಮಂಡಿಸಲಾಗಿದ್ದ ತಿದ್ದುಪಡಿಗೆ ಅನುಮೋದನೆ ದೊರಕಿದೆ.

click me!